ವಿಕಾಸ್ ದುಬೆ ಎನ್‍ಕೌಂಟರ್: ಘಟನೆಯ ಬಗ್ಗೆ ಪೊಲೀಸರು ಹೇಳುವುದು ಹೀಗೆ...

Update: 2020-07-10 03:29 GMT
File Photo

ಕಾನ್ಪುರ: ಮಧ್ಯಪ್ರದೇಶದ ಉಜ್ಜಯಿನಿಯಿಂದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಕಾನ್ಪುರಕ್ಕೆ ಕರೆ ತರುತ್ತಿದ್ದಾಗ ನಗರದ ಹೊರವಲಯದಲ್ಲಿ ಆತನನ್ನು ಕರೆತರುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಭಾರೀ ಮಳೆಯಿಂದ ಜಾರು ರಸ್ತೆಯಲ್ಲಿ ವಾಹನ ಮಗುಚಿ ಬಿದ್ದಾಗ ದುಬೆ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಈ ಹಂತದಲ್ಲಿ ದುಬೆ ತನ್ನ ಜತೆ ಇದ್ದ ಪೊಲೀಸರ ರೈಫಲ್ ಕಿತ್ತುಕೊಂಡು ಪೊಲೀಸರತ್ತ ಗುಂಡು ಹಾರಿಸಿದ. ಪ್ರತಿಯಾಗಿ ಪೊಲೀಸರು ಗುಂಡುಹಾರಿಸಿದ್ದು, ಆತನ ಸಾವಿಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯನ್ನು ದೃಢಪಡಿಸಿದ ಇನ್‍ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್‍ವಾಲ್, ಬೆಳಗ್ಗೆ 7ರ ಸುಮಾರಿಗೆ ಕಾನ್ಪುರದ ಬರ್ರಾ ಎಂಬಲ್ಲಿ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದಾಗ ಆತನ ಜತೆಗೆ ಇದ್ದ ಎಸ್‍ಟಿಎಫ್ ಸಬ್ ಇನ್‍ಸ್ಪೆಕ್ಟರ್ ಹಾಗೂ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ದುಬೆಯನ್ನು ವಾಹನದಿಂದ ಹೊರಗೆ ತೆಗೆದ ತಕ್ಷಣ ಆತ ಎಸ್‍ಟಿಎಫ್ ಸಿಬ್ಬಂದಿಯಿಂದ ಬಂದೂಕು ಕಿತ್ತುಕೊಂಡ ಎಂದು ಘಟನೆಯ ವಿವರ ನೀಡಿದ್ದಾರೆ.

ದುಬೆಯನ್ನು ತಕ್ಷಣ ಹ್ಯಾಲೆಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರ ಗಾಯಗೊಂಡಿದ್ದ ಆತ ಮೃತಪಟ್ಟ ಎಂದು ಪೊಲೀಸರು ವಿವರಿಸಿದ್ದಾರೆ.

ಗುರುವಾರ ಬೆಳಗ್ಗೆ ಅಂಗಡಿ ಮಾಲಕನೊಬ್ಬ ಉಜ್ಜಯಿನಿ ದೇವಾಲಯದಲ್ಲಿ ಆತನನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಗುರುವಾರ ರಾತ್ರಿ ಆತನನ್ನು ವಶಕ್ಕೆ ಪಡೆದ ಉತ್ತರ ಪ್ರದೇಶ ಪೊಲೀಸರು ಕಾನ್ಪುರಕ್ಕೆ ಕರೆತರುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News