ಪೊಲೀಸರ ಕ್ರಮದ ಬಗ್ಗೆ ಪ್ರಶ್ನೆ ಯಾಕೆ: ಸಂಜಯ್ ರಾವತ್

Update: 2020-07-10 17:55 GMT

ಮುಂಬೈ, ಜು.10: ಪಾತಕಿ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿರುವ ಬಗ್ಗೆ ಕಣ್ಣೀರು ಸುರಿಸುವ ಅಗತ್ಯವಿಲ್ಲ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಹೇಳಿದ್ದು, ಪೊಲೀಸರ ಕ್ರಮವನ್ನು ಯಾಕೆ ಪ್ರಶ್ನಿಸುಲಾಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದುಬೆ ಎಂಟು ಪೊಲೀಸರನ್ನು ಕೊಂದಿದ್ದಾನೆ. ಯುನಿಫಾರ್ಮ್ ಮೇಲೆ ದಾಳಿ ನಡೆಸುವುದು ಎಂದರೆ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇರಲಿಲ್ಲ ಎಂದರ್ಥ. ಮಹಾರಾಷ್ಟ್ರವಾಗಿರಲಿ, ಉತ್ತರಪ್ರದೇಶವಾಗಿರಲಿ, ಇಂತಹ ಸಂದರ್ಭದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲೇ ಬೇಕು ಎಂದು ರಾವತ್ ಹೇಳಿದ್ದಾರೆ.

ಪೊಲೀಸರ ಬಗ್ಗೆ ಹೆಮ್ಮೆಯಿದೆ: ದುಬೆಯಿಂದ ಹತರಾದ ಪೊಲೀಸ್ ಕುಟುಂಬಸ್ಥರ ಹೇಳಿಕೆ

ಪಾತಕಿ ವಿಕಾಸ್ ದುಬೆಯನ್ನು ಪೊಲೀಸರು ಎನ್ಕೌಂಟರ್ ನಡೆಸಿರುವುದು ತಮಗೆ ತುಸು ನೆಮ್ಮದಿ ತಂದಿದೆ. ಇಂತಹ ಕಠಿಣ ಕ್ರಮ ಕೈಗೊಂಡ ಉತ್ತರಪ್ರದೇಶ ಪೊಲೀಸರ ಬಗ್ಗೆ ಹೆಮ್ಮೆಯೆನಿಸುತ್ತದೆ ಎಂದು ದುಬೆಯಿಂದ ಹತರಾಗಿರುವ 8 ಪೊಲೀಸ್ ಸಿಬ್ಬಂದಿಗಳ ಕುಟುಂಬ ಸದಸ್ಯರು ಹೇಳಿದ್ದಾರೆ.

“ಪೊಲೀಸರು ಇವತ್ತು ಮಾಡಿರುವ ಕಾರ್ಯ ನನ್ನ ಆತ್ಮಕ್ಕೆ ಸಾಂತ್ವನ ನೀಡಿದೆ. ಯೋಗಿ ಆಡಳಿತಕ್ಕೆ ಧನ್ಯವಾದಗಳು” ಎಂದು ಮೃತ ಪೊಲೀಸ್ ಸಿಬ್ಬಂದಿ ಜಿತೇಂದ್ರಪಾಲ್ ಸಿಂಗ್ನ ತಂದೆ ತೀರಥ್ ಪಾಲ್ ಹೇಳಿದ್ದಾರೆ. ದುಬೆ ಮಾಡಿದ ಪಾಪದ ಫಲ ಉಂಡಿದ್ದಾನೆ. ಆದರೆ ಪೊಲೀಸ್ ಇಲಾಖೆಯೊಳಗೆ ಇರುವ ದುಬೆಯ ಮಾಹಿತಿದಾರರಿಗೂ ಕಠಿಣ ಶಿಕ್ಷೆಯಾಗಬೇಕು. ದೇಶದ್ರೋಹಿಗಳಿಗೆ ಸರಕಾರ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಮೃತ ಸಬ್ಇನ್ಸ್ಪೆಕ್ಟರ್ ನೇಬುಲಾಲ್ ಬಿಂಡ್ನ ತಂದೆ ಕಾಲಿಕಾಪ್ರಸಾದ್ ಹೇಳಿದ್ದಾರೆ.

 ದುಬೆಯನ್ನು ಹತ್ಯೆ ಮಾಡಿರುವುದರಿಂದ ಸಮಾಧಾನವಾಗಿದ್ದರೂ, ಆತನಿಗೆ ನೆರವಾಗುತ್ತಿದ್ದ್ ಪೊಲೀಸರು, ಅಧಿಕಾರಿಗಳು ರಾಜಕಾರಣಿಗಳ ಜಾತಕವೂ ಬಯಲಾಗಬೇಕಿತ್ತು. ಆತನ ವಿಚಾರಣೆಯಿಂದ ಇದು ಬೆಳಕಿಗೆ ಬರುವ ಸಾಧ್ಯತೆಯಿತ್ತು ಎಂದು ಮೃತ ಕಾನ್ಸ್ಟೇಬಲ್ ಸುಲ್ತಾನ್ ಸಿಂಗ್  ಪತ್ನಿ ಊರ್ಮಿಳಾ ವರ್ಮ ಪ್ರತಿಕ್ರಿಯಿಸಿದ್ದಾರೆ.

‘ದುಬೆ ಸತ್ತಿರಬಹುದು, ಆದರೆ 10 ಮಂದಿ ಆತನ ಸ್ಥಾನಕ್ಕೆ ಬರುತ್ತಾರೆ’ 

ಒಬ್ಬ ವಿಕಾಸ್ ದುಬೆ ಸತ್ತಿರಬಹುದು. ಆದರೆ 10 ಮಂದಿ ಆತನ ಸ್ಥಾನಕ್ಕೆ ಬರುತ್ತಾರೆ. ಚುನಾವಣೆಯಲ್ಲಿ ದುಬೆಯ ನೆರವು ಪಡೆದ ರಾಜಕಾರಣಿಗಳ ಕಥೆ ಏನು?, ಇಂತಹ ಜನರಿಂದಾಗಿಯೇ ದುಬೆಯಂತಹ ಕ್ರಿಮಿನಲ್ ಗಳು ಪ್ರವರ್ಧಮಾನಕ್ಕೆ ಬರುತ್ತಾರೆ ಎಂದು ಪಾತಕಿ ವಿಕಾಸ್ ದುಬೆಯ ಗುಂಡಿನ ದಾಳಿಗೆ ಬಲಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯ ಕುಟುಂಬದವರು ಹೇಳಿದ್ದಾರೆ.

ದುಷ್ಟರನ್ನು ಬೇರಿನಿಂದಲೇ ಕಿತ್ತೊಗೆಯಬೇಕು. ದುಬೆ ಜೀವಂತವಾಗಿದ್ದರೆ ನಾವು ಇನ್ನಷ್ಟು ಬಿಳಿ ಕಾಲರ್ ನ ಕ್ರಿಮಿನಲ್ ಗಳನ್ನು ಪತ್ತೆಹಚ್ಚಬಹುದಿತ್ತು. ದುಬೆಗೆ ಆಶ್ರಯ ನೀಡಿದವರು, ರಕ್ಷಣೆ ನೀಡಿದವರು ಇನ್ನೂ ಸಕ್ರಿಯವಾಗಿಯೇ ಇದ್ದಾರೆ ಎಂದು ಮೃತ ಡಿವೈಎಸ್ಪಿ ದೇವೇಂದ್ರ ಮಿಶ್ರಾರ ಮೈದುನ ಕಮಲಕಾಂತ್ ಮಿಶ್ರ ಹೇಳಿದ್ದಾರೆ. ಇದು ಕಥೆಯ ಅಂತ್ಯ ಎಂದು ನಾನು ಭಾವಿಸುವುದಿಲ್ಲ. ಬದಲಿಗೆ, ಇದು ಕೇವಲ ಆರಂಭವಷ್ಟೇ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News