ಒಲಿಂಪಿಕ್ಸ್ ತರಬೇತಿಗೆ ಹಣವಿಲ್ಲದೆ ಕಾರನ್ನು ಮಾರಲು ಮುಂದಾದ ಓಟಗಾರ್ತಿ ದ್ಯುತಿ ಚಾಂದ್

Update: 2020-07-11 12:02 GMT

ಭುವನೇಶ್ವರ್: ಭಾರತದ ಅತ್ಯಂತ ವೇಗದ ಓಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿರುವ ದ್ಯುತಿ ಚಾಂದ್ ತಮ್ಮ ತರಬೇತಿ ವೆಚ್ಚಗಳನ್ನು ಭರಿಸಲು ಅನ್ಯ ದಾರಿಯಿಲ್ಲದೆ ತಮ್ಮಲ್ಲಿರುವ ಬೆಲೆಬಾಳುವ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಬಿಎಂಡಬ್ಲ್ಯು ಕಾರಿನ ಚಿತ್ರಗಳನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಖರೀದಿದಾರರು ಬೇಕೆಂದು ಬರೆದಿದ್ದರೂ ನಂತರ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ದ್ಯುತಿ ಬಳಿ 2015 ಮಾಡೆಲ್‍ ನ ಬಿಎಂಡಬ್ಲ್ಯು-3 ಕಾರು ಇದ್ದು, ಅವರು ಅದನ್ನು ರೂ 30 ಲಕ್ಷ ತೆತ್ತು ಖರೀದಿಸಿದ್ದರು.

“ಈಗಿನ ಕೋವಿಡ್-19 ಪರಿಸ್ಥಿತಿಯಲ್ಲಿ ನನ್ನ ತರಬೇತಿಗೆ ಖರ್ಚು ಮಾಡಲು ಯಾವ ಪ್ರವರ್ತಕರೂ ಮುಂದೆ ಬರುತ್ತಿಲ್ಲ.  ನನಗೆ ಹಣ ಬೇಕಿದೆ, ನಾನು ಟೋಕಿಯೋ ಒಲಿಂಪಿಕ್ಸ್ ಗೆ ತಯಾರಿ ನಡೆಸುತ್ತಿರುವುದರಿಂದ ನನ್ನ ತರಬೇತಿ ಮತ್ತು ಆಹಾರ ವೆಚ್ಚಗಳನ್ನು ನಿಭಾಯಿಸಲು ಇದನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ,'' ಎಂದು ಆಕೆ ಹೇಳಿದ್ದಾರೆ.

``ರಾಜ್ಯ ಸರಕಾರ ಕೂಡ ಆರ್ಥಿಕ ಸಮಸ್ಯೆಯ ನೆಪವೊಡ್ಡಿದೆ'' ಎಂದು ಹೇಳುವ ದ್ಯುತಿ ಚಾಂದ್ ಏಷ್ಯನ್ ಗೇಮ್ಸ್ ಸಾಧನೆಗಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ನೀಡಿದ್ದ ನಗದು ಬಹುಮಾನ ರೂ 3 ಕೋಟಿ ಬಳಸಿ ಕಾರು ಖರೀದಿಸಿ ಮನೆ ನಿರ್ಮಿಸಿದ್ದಾಗಿ ಹೇಳಿದ್ದಾರೆ.

ಆಕೆಯ ಫೇಸ್ ಬುಕ್ ಪೋಸ್ಟ್ ನೋಡಿ ಸರಕಾರ ಆಕೆಯ ಸಹಾಯಕ್ಕೆ ಬರಬೇಕು ಎಂದು ಹಲವರು ಕಮೆಂಟ್ ಮಾಡುತ್ತಿದ್ದಂತೆಯೇ ತಮ್ಮ ಪೋಸ್ಟ್ ಡಿಲೀಟ್ ಮಾಡಿದ ಆಕೆ  ``ನನ್ನ ಬಳಿ ಇನ್ನೂ ಎರಡು ಕಾರುಗಳಿರುವುದರಿಂದ ಹಾಗೂ ನನ್ನ ಮನೆಯಲ್ಲಿ ಮೂರು ಕಾರುಗಳಿಗೆ ಜಾಗವೂ ಇಲ್ಲದೇ ಇರುವುದರಿಂದ ಒಂದನ್ನು ಮಾರಲು ಬಯಸಿದ್ದೇನೆ,'' ಎಂದು ಹೇಳಿದ್ದಾರೆ.

“ಟೋಕಿಯೋ ಒಲಿಂಪಿಕ್ಸ್‍ಗೆ ತರಬೇತಿಗಾಗಿ ಸರಕಾರ ರೂ 50 ಲಕ್ಷ ನೀಡಿತ್ತು. ಆದರೆ ಕೋಚ್, ಫಿಸಿಯೋಥೆರಪಿಸ್ಟ್, ಡಯಟಿಶಿಯನ್ ವೇತನ ಹಾಗೂ ಇತರ ಉದ್ದೇಶಗಳಿಗೆ ಮಾಸಿಕ ರೂ 5 ಲಕ್ಷ ಬೇಕಿದೆ. ಈಗ ಎಲ್ಲಾ ಹಣ ಖಾಲಿಯಾಗಿದೆ, ಜರ್ಮನಿಯಲ್ಲಿ ತರಬೇತಿಗೆ  ಹಣ ಬೇಕಿದೆ'' ಎಂದು ಆಕೆ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News