ಪ್ಯಾಂಗೊಂಗ್ ಲೇಕ್ ನಿಂದ ಭಾಗಶಃ ಹಿಂದೆ ಸರಿದ ಚೀನಿ ಸೇನೆ: ಹೊಸ ಉಪಗ್ರಹ ಚಿತ್ರಗಳಿಂದ ಬೆಳಕಿಗೆ

Update: 2020-07-11 15:26 GMT

ಹೊಸದಿಲ್ಲಿ,ಜೂ.11 ಪೂರ್ವ ಲಡಾಕ್ ನ ಪ್ಯಾಂಗೊಂಗ್ ಸರೋವರದ ದಂಡೆ ಪ್ರದೇಶದುದ್ದಕ್ಕೂ ಇರುವ ಫಿಂಗರ್ 4 ಸ್ಥಳದಿಂದ ಚೀನಿ ಪಡೆಗಳು ಭಾಗಶಃ ಹಿಂದೆ ಸರಿದಿರುವುದು ನೂತನ ಉಪಗ್ರಹ ಚಿತ್ರಗಳಿಂದ ದೃಢಪಟ್ಟಿರುವುದಾಗಿ ಎನ್ ಡಿಟಿವಿ ಶನಿವಾರ ವರದಿ ಮಾಡಿದೆ.

ಈ ಪ್ರದೇಶದಲ್ಲಿ ಚೀನಿ ಪಡೆಗಳು ಅಕ್ರಮವಾಗಿ ನಿರ್ಮಾಣ ಚಟುವಟಿಕೆಗಳಲ್ಲಿ ನಿರತರಾಗಿರುವುದು ಹಿಂದಿನ ಉಪಗ್ರಹ ಚಿತ್ರಗಳಿಂದ ಬೆಳಕಿಗೆ ಬಂದಿತ್ತು. ಆದಾಗ್ಯೂ ಡೇರೆಗಳು ಹಾಗೂ ಶೆಡ್ ಗಳು ಸೇರಿದಂತೆ ನೂರಾರು ಚೀನಿ ರಚನೆಗಳು ಪ್ರದೇಶದುದ್ದಕ್ಕೂ ಉಳಿದಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿಕೊಟ್ಟಿವೆ. ಭಾರತೀಯ ಹಾಗೂ ಚೀನಿ ಪಡೆಗಳಿಂದ ಸೇನಾ ಹಿಂತೆಗೆತದ ಪ್ರಕ್ರಿಯೆ ಆರಂಭಗೊಂಡಿದೆಯಾದರೂ, ಅದು ಪೂರ್ಣಗೊಳ್ಳಲು ಇನ್ನೂ ಬಹಳ ಸಮಯ ತಗಲುವ ಸಾಧ್ಯತೆಯಿದೆಯೆಂಬ ಸೂಚನೆಗಳು ಲಭಿಸಿವೆ. ಎಪ್ರಿಲ್ ತಿಂಗಳ ಆರಂಭದಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಆರಂಭಗೊಳ್ಳುವುದಕ್ಕೆ ಮುನ್ನ ಇದ್ದ ತಮ್ಮ ನೆಲೆಗಳಿಗೆ ಚೀನಿ ಪಡೆಗಳು ಪೂರ್ಣ ಪ್ರಮಾಣದಲ್ಲಿ ಹಿಂತಿರುಗುತ್ತಿರುವ ಬಗ್ಗೆ ಸದ್ಯಕ್ಕೆ ಯಾವುದೇ ಸೂಚನೆಗಳು ಲಭಿಸುತ್ತಿಲ್ಲವೆಂದು ಎನ್ ಡಿಟಿವಿ ವರದಿ ತಿಳಿಸಿದೆ.

ಚೀನಿ ಸೇನೆಯಿಂದ ಜೆಟ್ಟಿ ನಿರ್ಮಾಣ

ಗಮನಾರ್ಹವೆಂದರೆ, ಚೀನಿ ಸೇನೆಯ ಫಾಸ್ಟ್ ಇಂಟರ್ಸೆಪ್ಟರ್ ಕ್ರಾಫ್ಟ್ ಸ್ಪೀಡ್ ಬೋಟ್ ಜೆಟ್ಟಿಯೊಂದು ಪ್ಯಾಂಗೊಂಗ್ ಸರೋವರದಲ್ಲಿ, ಫಿಂಗರ್ 4 ಪ್ರದೇಶದಿಂದ 10 ಕಿ.ಮೀ. ಪೂರ್ವದಲ್ಲಿ ಈಗಲೂ ಕಾರ್ಯನಿರ್ವಹಿಸುತ್ತಿವೆ. ಈ ಪ್ರದೇಶವನ್ನು ಭಾರತವು ಗಡಿನಿಯಂತ್ರಣ ರೇಖೆಯೆಂದು ಪರಿಗಣಿಸಿದೆ. 11 ಚೀನಿ ಬೋಟ್ ಗಳು ಈ ಜೆಟ್ಟಿಯಲ್ಲಿ ಲಂಗರು ಹಾಕಿವೆ. ಅಷ್ಟೇ ಅಲ್ಲದೆ ಜೆಟ್ಟಿಯ ಸಮೀಪದಲ್ಲಿರುವ ಬೆಟ್ಟದ ಮೇಲ್ಮೈಯಲ್ಲಿ ಚೀನಾದ ಬೃಹತ್ ನಕಾಶೆಯನ್ನು ಕೂಡಾ ಕೆತ್ತಿರುವುದು ಕಂಡುಬಂದಿದೆ.

ಭಾರತ ಹಾಗೂ ಚೀನಿ ಪಡೆಗಳ ನಡುವಿನ ತಥಾಕಥಿತ ಗಡಿಯು ಫಿಂಗರ್4 ಪ್ರದೇಶದಲ್ಲಿದೆ. ಅಲ್ಲಿ ಗಸ್ತು ತಿರುಗದಂತೆ ಚೀನಿ ಪಡೆಗಳು ಭಾರತೀಯ ಸೈನಿಕರಿಗೆ ಅಡ್ಡಿಪಡಿಸುತ್ತಿದೆ. ಕಳೆದ ಮೇ ತಿಂಗಳಲ್ಲಿ ಫಿಂಗರ್ 4 ಪ್ರದೇಶದಲ್ಲಿ ಚೀನಿ ಯೋಧರು ಹಾಗೂ ಭಾರತೀಯ ಸೇನೆಯ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಹಲವಾರು ಭಾರತೀಯ ಸೈನಿಕರು ಗಂಭೀರ ಗಾಯಗೊಂಡಿದ್ದರು. ಫಿಂಗರ್ 8 ಪ್ರದೇಶದವರೆಗೆ ಗಸ್ತು ತಿರುಗುವ ಹಕ್ಕು ತನಗಿದೆ ಎಂದು ಭಾರತವು ಹಲವಾರು ಬಾರಿ ಪುನರುಚ್ಚರಿಸುತ್ತಲೇ ಬಂದಿದೆಯಾದರೂ, ಚೀನಾ ಅದನ್ನು ವಿರೋಧಿಸುತ್ತಾ ಬಂದಿದೆ.

ಭಾರತ-ಚೀನಾ ಗಡಿಪ್ರದೇಶಗಳ ಕುರಿತ ಸಮಾಲೋಚನೆ ಹಾಗೂ ಸಮನ್ವಯತೆ ಕಾರ್ಯತಂತ್ರ ಸಮಿತಿಯ ಸಭೆಯು ಶುಕ್ರವಾರ ನಡೆಯಿತು. ವಾಸ್ತವ ಗಡಿನಿಯಂತ್ರಣ ರೇಖೆಯಿಂದ ಉಭಯದೇಶಗಳ ಪಡೆಗಳು ಹಿಂದೆ ಸರಿಯುವುದನ್ನು ಹಾಗೂ ಭಾರತ-ಚೀನಾ ಗಡಿಯಲ್ಲಿ ಸೇನಾ ಉದ್ವಿಗ್ನತೆಯನ್ನು ಶಮನಗೊಳಿಸುವುದಕ್ಕೆ ಸಭೆಯಲ್ಲಿ ಉಭಯದೇಶಗಳು ಸಹಮತ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News