ಚೀನಾ ಜೊತೆ ಸಂಘರ್ಷ ಆರಂಭಗೊಂಡರೆ ಟ್ರಂಪ್ ಭಾರತವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ

Update: 2020-07-11 18:13 GMT

ವಾಶಿಂಗ್ಟನ್, ಜು. 11: ಭಾರತ-ಚೀನಾ ಗಡಿ ವಿವಾದ ಉಲ್ಬಣಗೊಂಡರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಭಾರತವನ್ನು ಬೆಂಬಲಿಸುತ್ತಾರೆ ಎಂಬ ಯಾವುದೇ ಭರವಸೆಯಿಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ.

‘‘ಚೀನಾವು ತನ್ನ ಭೂಭಾಗದ ಸುತ್ತಲೂ ಹಠಮಾರಿತನದಿಂದ ವರ್ತಿಸುತ್ತಿದೆ. ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಅದು ಇಡೀ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಜಪಾನ್, ಭಾರತ ಹಾಗೂ ಇತರ ದೇಶಗಳೊಂದಿಗಿನ ಅದರ ಸಂಬಂಧವು ಹಳಸಿದೆ’’ ಎಂದು ವಯಾನ್ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಬೋಲ್ಟನ್ ಹೇಳಿದರು.

ಚೀನಾದ ವಿರುದ್ಧ ಭಾರತವನ್ನು ಬೆಂಬಲಿಸಲು ಟ್ರಂಪ್ ಎಷ್ಟರ ಮಟ್ಟಿಗೆ ಸಿದ್ಧರಿದ್ದಾರೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ಯಾವ ದಾರಿಯಲ್ಲಿ ಅವರು ಹೋಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವರಿಗೆ ಯಾವುದಾದರೂ ದಾರಿ ಗೊತ್ತಿದೆ ಎಂದೂ ನನಗೆ ಅನಿಸುವುದಿಲ್ಲ. ಅವರು ಚೀನಾದೊಂದಿಗೆ ಜಾಗತಿಕ ಮಹತ್ವದ ಬಾಂಧವ್ಯವನ್ನು ಎದುರು ನೋಡುತ್ತಿದ್ದಾರೆ ಎಂದು ನನಗನಿಸುತ್ತದೆ. ಅವರು ಎಲ್ಲವನ್ನೂ ವ್ಯಾಪಾರದಿಂದ ಅಳೆಯುತ್ತಾರೆ’’ ಎಂದರು.

‘‘ನವೆಂಬರ್ ಚುನಾವಣೆಯ ಬಳಿಕ ಟ್ರಂಪ್ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವರು ಚೀನಾದೊಂದಿಗಿನ ಬೃಹತ್ ವ್ಯಾಪಾರ ಒಪ್ಪಂದಕ್ಕೆ ಮರಳಬಹುದು. ಒಂದು ವೇಳೆ, ಭಾರತ ಮತ್ತು ಚೀನಾಗಳ ನಡುವಿನ ವಿವಾದವು ಉಲ್ಬಣಗೊಂಡರೆ, ಅವರು ಯಾವ ಪಕ್ಷ ವಹಿಸುತ್ತಾರೆ ಎಂಬ ಬಗ್ಗೆ ನನಗೆ ಖಾತರಿಯಿಲ್ಲ’’ ಎಂದು ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿಯೂ ಆಗಿರುವ ಅವರು ಹೇಳಿದರು

ಈ ಸಂದರ್ಭ ಚೀನಾ ವಿಚಾರದಲ್ಲಿ ಟ್ರಂಪ್ ಭಾರತವನ್ನು ಬೆಂಬಲಿಸಲಿದ್ದಾರೆಯೇ ಎನ್ನುವು ಪ್ರಶ್ನೆಗೆ ಉತ್ತರಿಸಿದ ಅವರು, “ ಭಾರತ-ಚೀನಾ ನಡುವೆ ಸಂಘರ್ಷ ಸಂಭವಿಸಿದರೆ ಟ್ರಂಪ್ ಭಾರತಕ್ಕೆ ನೆರವಾಗಬಲ್ಲರು ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News