ಮೊದಲ ಬಾರಿ ಮಾಸ್ಕ್ ಧರಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್

Update: 2020-07-12 07:58 GMT

ವಾಷಿಂಗ್ಟನ್, ಜು.12: ಕೊರೋನ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವಾಗ ಸಾರ್ವಜನಿಕವಾಗಿ ಮಾಸ್ಕ್‌ನ್ನು ಧರಿಸಲು ಹಿಂದೇಟು ಹಾಕುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿ ಮಿಲಿಟರಿ ಮೆಡಿಕಲ್ ವ್ಯವಸ್ಥೆಯ ಪರಿಶೀಲನೆಯ ವೇಳೆ ಶನಿವಾರ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ವಾಷಿಂಗ್ಟನ್‌ನ ಹೊರಗಿರುವ ಮಿಲಿಟರಿ ಮೆಡಿಕಲ್ ವ್ಯವಸ್ಥೆಯಲ್ಲಿ ಗಾಯಗೊಂಡಿರುವ ಸೈನಿಕರು ಹಾಗೂ ಆರೋಗ್ಯಕಾಳಜಿ ಕಾರ್ಯಕರ್ತರನ್ನು ಭೇಟಿಯಾಗುವಾಗ ಟ್ರಂಪ್ ಆಕಾಶ ನೀಲಿಬಣ್ಣದ ಮಾಸ್ಕ್ ಧರಿಸಿದರು.

ವಾಲ್ಟರ್ ರೀಡ್ ನ್ಯಾಶನಲ್ ಮಿಲಿಟರಿ ಮೆಡಿಕಲ್ ಸೆಂಟರ್‌ಗೆ ಭೇಟಿ ನೀಡಿದ ಟ್ರಂಪ್ ಈ ವರ್ಷಾರಂಭದಲ್ಲಿ ಅಮೆರಿಕದಾದ್ಯಂತ ವೈರಸ್ ಹಬ್ಬಿದ ಬಳಿಕ ಇದೇ ಮೊದಲ ಬಾರಿ ಮಾಸ್ಕ್ ಧರಿಸಿದ್ದಾರೆ.

ಟ್ರಂಪ್ ಈ ಹಿಂದೆ ಸಾರ್ವಜನಿಕವಾಗಿ ಮಾಸ್ಕ್ ಧರಿಸಲು ನಿರಾಕರಿಸುತ್ತಿದ್ದರು. ಆದರೆ, ಅಮೆರಿಕದ ಜನತೆಗೆ ಮಾಸ್ಕ್ ಧರಿಸುವಂತೆ ಸಲಹೆ ನೀಡುತ್ತಿದ್ದರು. ಮಾಸ್ಕ್ ಧರಿಸುವುದು ವೈಯಕ್ತಿಕ ಆಯ್ಕೆ ಎಂದು ಹೇಳುತ್ತಿದ್ದರು. ಜನರ ಗುಂಪಿನ ನಡುವೆ ಇದ್ದರೂ ಟ್ರಂಪ್ ಇತರಿಂದ ಅಂತರ ಕಾಯ್ದುಕೊಳ್ಳುತ್ತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News