ಕರ್ಫ್ಯೂ ಉಲ್ಲಂಘನೆ: ಗುಜರಾತ್ ಸಚಿವನ ಪುತ್ರನ ಬಂಧನ

Update: 2020-07-12 16:42 GMT

ಸೂರತ್: ಗುಜರಾತ್ ನ ಆರೋಗ್ಯ ಸಚಿವ ಕುಮಾರ್ ಕನಾನಿ ಅವರ ಪುತ್ರ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಲಾಕ್ ಡೌನ್ ಅಂಗವಾಗಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಲಾಗಿದೆ.

ಪ್ರಕಾಶ್ ಕನಾನಿ ಮತ್ತು ಸ್ನೇಹಿತರನ್ನು ತಡೆಯಲು ಪ್ರಯತ್ನಿಸಿದ ಮಹಿಳಾ ಪೊಲೀಸ್ ಅಧಿಕಾರಿ ಸುನೀತಾ ಯಾದವ್ ಎಂಬುವವರ ಜತೆ ವಾಗ್ವಾದ ನಡೆಸಿದ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಕನಾನಿ ಮತ್ತು ಇಬ್ಬರು ಸ್ನೇಹಿತರನ್ನು ಭಾರತೀಯ ದಂಡಸಂಹಿತೆಯ ಸೆಕ್ಷನ್ 188, 269, 270 ಮತ್ತು 144ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಸಿ.ಕೆ.ಪಾಟೀಲ್ ಹೇಳಿದ್ದಾರೆ.

ರಾತ್ರಿ ಕರ್ಫ್ಯೂ ಉಲ್ಲಂಘಿಸಿದ ಕೆಲವರನ್ನು ತಡೆದದ್ದಕ್ಕಾಗಿ ಬೆದರಿಕೆ ಒಡ್ಡಲಾಗಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸೂರತ್ ಪೊಲೀಸ್ ಆಯುಕ್ತ ಆರ್.ಬಿ.ಬ್ರಹ್ಮಂಟ್ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದರು.

ಬುಧವಾರ ರಾತ್ರಿ 10.30ರ ವೇಳೆಗೆ ಸುನೀತಾ ಯಾದವ್, ಪ್ರಕಾಶ್ ಕನಾನಿಯವರ ಸ್ನೇಹಿತರನ್ನು ತಡೆದು ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದರು. ಆಗ ಅವರು ಕನಾನಿಗೆ ಕರೆ ಮಾಡಿ ಕರೆಸಿದ್ದರು. ತಂದೆಯ ಕಾರಿನಲ್ಲಿ ಆಗಮಿಸಿದ ಪ್ರಕಾಶ್, ಯಾದವ್ ಜತೆ ವಾಗ್ವಾದ ನಡೆಸಿದ ಆಡಿಯೊ ತುಣುಕು ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News