29 ಸಾವಿರ ಹೊಸ ಸೇರ್ಪಡೆ: 3 ಲಕ್ಷ ದಾಟಿದ ದೇಶದ ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ

Update: 2020-07-13 05:36 GMT

ಹೊಸದಿಲ್ಲಿ: ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಒಂದೇ ದಿನದಲ್ಲಿ 29 ಸಾವಿರಕ್ಕೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಆದರೆ ಸತತ ಎರಡು ದಿನಗಳಲ್ಲಿ 500ಕ್ಕಿಂತ ಅಧಿಕ ಇದ್ದ ಸಾವಿನ ಸಂಖ್ಯೆ 492ಕ್ಕೆ ಇಳಿದಿದೆ.

ಸೋಂಕಿತರು ಗುಣಮುಖರಾಗಲು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದರೂ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಜೂನ್ 4ರಂದು ಒಂದು ಲಕ್ಷದಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 23 ದಿನಗಳಲ್ಲಿ 2 ಲಕ್ಷದ ಗಡಿ ದಾಟಿತ್ತು. ಆದರೆ ಬಳಿಕ ಕೇವಲ 15 ದಿನಗಳಲ್ಲಿ 3 ಲಕ್ಷ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ.

ಸತತ ಐದನೇ ದಿನ ದೇಶದಲ್ಲಿ ಗರಿಷ್ಠ ಪ್ರಕರಣಗಳ ಹೊಸ ದಾಖಲೆ ನಿರ್ಮಾಣವಾಗಿದ್ದು, ರವಿವಾರ 29,271 ಪರಕರಣಗಳು ವರದಿಯಾಗಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಎಂಟು ಲಕ್ಷದ ಗಡಿ ದಾಟಿದ ಎರಡನೇ ದಿನಗಳಲ್ಲಿ 8,79,060ಕ್ಕೇರಿದೆ. 3,02,466 ಸಕ್ರಿಯ ಪ್ರಕರಣಗಳು ದೇಶದಲ್ಲಿದ್ದು, 5.53 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ರವಿವಾರ 492 ಮಂದಿ ಸೋಂಕಿತರು ಕೊನೆಯುಸಿರೆಳೆಯುವುದರೊಂದಿಗೆ ಮಾರಕ ಸಾಂಕ್ರಾಮಿಕಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 23,175ಕ್ಕೇರಿದೆ. ದೇಶದಲ್ಲಿ ಒಟ್ಟು ಸೋಂಕಿತರ ಪೈಕಿ ಶೇಕಡ 2.6ರಷ್ಟು ಮಂದಿ ಬಲಿಯಾಗಿದ್ದಾರೆ.

ಕರ್ನಾಟಕ (2,627) ಮತ್ತು ಆಂಧ್ರಪ್ರದೇಶ (1,933) ಭಾನುವಾರ ದಿನದ ಗರಿಷ್ಠ ಸಂಖ್ಯೆಯನ್ನು ದಾಖಲಿಸಿವೆ. ಉಳಿದಂತೆ ಬಂಗಾಳ (1,560), ಬಿಹಾರ (1,266), ಗುಜರಾತ್ (879), ಛತ್ತೀಸ್‍ಗಢ (184) ಕೂಡಾ ಅಧಿಕ ಪ್ರಕರಣಗಳನ್ನು ದಾಖಲಿಸಿವೆ. ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದ ಹತ್ತನೇ ರಾಜ್ಯವಾಗಿ ಬಿಹಾರ ಸೇರ್ಪಡೆಯಾಗಿದೆ. ಮಹಾರಾಷ್ಟ್ರದಲ್ಲಿ ಮಾಮೂಲಿನಂತೆ ಗರಿಷ್ಠ (7,827) ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News