ಪಕ್ಷಕ್ಕೆ ಗುಡ್‍ ಬೈ ಹೇಳಿದ ಅಸ್ಸಾಂ ಬಿಜೆಪಿ ಶಾಸಕ

Update: 2020-07-13 04:00 GMT

ಗುವಾಹತಿ: ಅಸ್ಸಾಂನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಶಾಸಕ ಶೀಲಾದಿತ್ಯ ದೇವ್ ಪಕ್ಷದ ಮುಖಂಡರ ಗುಂಪುಗಾರಿಕೆಯನ್ನು ಖಂಡಿಸಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಆದರೆ ತಾವು ಯಾವುದೇ ಇತರ ಪಕ್ಷವನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವಕ್ಷೇತ್ರ ಹೊಜೋಯ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವ್, ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆವರೆಗೆ ಶಾಸಕರಾಗಿ ಮುಂದುವರಿಯುವುದಾಗಿ ತಿಳಿಸಿದರು. ಹಲವು ವಿಷಯಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳ ಮೂಲಕ ದೇವ್ ಸದಾ ಸುದ್ದಿಯಲ್ಲಿದ್ದರು.

“ನಾನು 30 ವರ್ಷದಿಂದ ಬಿಜೆಪಿಯಲ್ಲಿದ್ದೇನೆ. ಆದರೆ ಇಂದು ನಮ್ಮಂಥವರಿಗೆ ಪಕ್ಷದಲ್ಲಿ ಬೆಲೆ ಇಲ್ಲ. ನನಗೆ ಸಚಿವ ಹುದ್ದೆ ನೀಡುವಂತೆ ನಾನು ಲಾಬಿ ಮಾಡಿದ್ದೇನೆ ಎಂದು ಯಾರೂ ಹೇಳುವಂತಿಲ್ಲ. ನಾನು 17 ವರ್ಷ ದೆಹಲಿಯಲ್ಲಿ ಕೆಲಸ ಮಾಡಿದ್ದೇನೆ. ಸಚಿವಾಲಯದಲ್ಲಿ ಕೂಡಾ ಕಾರ್ಯ ನಿರ್ವಹಿಸಿದ್ದೇನೆ” ಎಂದು ವಿವರಿಸಿದರು.

“ಆದರೆ ಇಂದು ರಾಜಕೀಯವಾಗಿ ನಮ್ಮನ್ನು ಮುಗಿಸುವಂಥ ವಾತಾವರಣ ಸೃಷ್ಟಿಸಲಾಗಿದೆ. ನಾನು ನನ್ನ ಘನತೆಯೊಂದಿಗೇ ಹೊರಹೋಗುತ್ತಿದ್ದೇನೆ. ಹಿತೈಷಿಗಳ ಸಲಹೆ ಪಡೆದು ಜುಲೈ 14ರಂದು ಬಿಜೆಪಿಯಿಂದ ನಿವೃತ್ತಿಯಾಗುತ್ತಿದ್ದೇನೆ. ಆದರೆ ರಾಜೀನಾಮೆ ನೀಡುತ್ತಿಲ್ಲ” ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅಥವಾ ಎಐಯುಡಿಎಫ್ ಸೇರಿದಂತೆ ಯಾವುದೇ ಪಕ್ಷವನ್ನು ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜನರಿಗಾಗಿ ಕೆಲಸ ಮಾಡುವುದು ಮುಂದುವರಿಸುತ್ತೇನೆ ಎಂದರು.

“ನಾನು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಅಥವಾ ಎಐಯುಡಿಎಫ್ ಸೇರುತ್ತೇನೆ ಎಂದು ಜನ ಭಾವಿಸಬಹುದು; ಆದ್ದರಿಂದ ನಾನು ನಿವೃತ್ತಿಯಾಗುತ್ತಿದ್ದೇನೆ. ಐದು ವರ್ಷಗಳ ನನ್ನ ಅಧಿಕಾರಾವಧಿ ಪೂರ್ಣಗೊಳಿಸುತ್ತೇನೆ. ಮುಂದಿನ ಅಕ್ಟೋಬರ್ ನಲ್ಲಿ ನನ್ನ ಕೆಲಸದ ಬಗ್ಗೆ ಪಟ್ಟಿ ನೀಡುತ್ತೇನೆ. ನಾನು ಬಿಜೆಪಿಯಿಂದ ನಿವೃತ್ತಿಯಾಗುತ್ತಿದ್ದೇನೆಯೇ ವಿನಃ ಶಾಸಕ ಹುದ್ದೆಯಿಂದಲ್ಲ” ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News