ಸಾಮಾಜಿಕ ಜಾಲತಾಣಗಳ ನಿಷೇಧ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಸೇನಾಧಿಕಾರಿ

Update: 2020-07-13 17:50 GMT

 ಹೊಸದಿಲ್ಲಿ, ಜು.13: ಟಿಕ್ ಟಾಕ್, ವಿಚಾಟ್, ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಮ್ ಸೇರಿದಂತೆ 89 ಸಾಮಾಜಿಕ ಮಾಧ್ಯಮ ಆ್ಯಪ್ ಗಳನ್ನು ಸೇನಾ ಸಿಬ್ಬಂದಿ ಬಳಸದಂತೆ ನಿಷೇಧಿಸಿರುವುದನ್ನು ಪ್ರಶ್ನಿಸಿ ಸೇನಾಧಿಕಾರಿಯೊಬ್ಬರು ದಿಲ್ಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

89 ಆ್ಯಪ್ ಗಳನ್ನು (ಇದರಲ್ಲಿ ಬಹುತೇಕ ಚೀನಾ ನಿರ್ಮಿತ ) ನಿಷೇಧಿಸಿ ಕಳೆದ ತಿಂಗಳು ಸೇನೆ ಆದೇಶ ಹೊರಡಿಸಿತ್ತು. ಅಲ್ಲದೆ ತಮ್ಮ ಫೇಸ್ಬುಕ್ ಖಾತೆಗಳನ್ನು ಜೂನ್ 1ರೊಳಗೆ ಡಿಲೀಟ್ ಮಾಡುವಂತೆ ಹಾಗೂ ಜುಲೈ 15ರ ಬಳಿಕವೂ ಫೇಸ್ಬುಕ್ ಹಾಗೂ ಇತರ ನಿಷೇಧಿತ ಆ್ಯಪ್ ಗಳನ್ನು ಬಳಸುವ ಸಿಬ್ಬಂದಿಯ ವಿರುದ್ಧ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನು ಪ್ರಶ್ನಿಸಿ ಲೆಫ್ಟಿನೆಂಟ್ ಕರ್ನಲ್ ಪಿಕೆ ಚೌಧರಿ ಅರ್ಜಿ ಸಲ್ಲಿಸಿದ್ದು , ಈ ಏಕಪಕ್ಷೀಯ ಕ್ರಮವು ಅಸಾಂವಿಧಾನಿಕವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಶಸ್ತ್ರ ಪಡೆಗಳ ಸಿಬಂದಿಗಳ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ, ಮಾರ್ಪಾಟು ಅಥವಾ ರದ್ದುಪಡಿಸಿಲ್ಲ ಎಂಬುದನ್ನು ಖಾತರಿಗೊಳಿಸಲು ಈ ಆದೇಶವನ್ನು ಹಿಂಪಡೆಯಬೇಕು . ನಿಷೇಧ ವಿಧಿಸಿರುವ ಕ್ರಮವು ಸಂವಿಧಾನದ 33ನೇ ಅನುಚ್ಛೇದ ಹಾಗೂ 1950ರ ಸೇನಾ ಕಾಯ್ದೆಯ ಉಲ್ಲಂಘನೆಯಾಗಿದೆ . ಇಂತಹ ನಿಷೇಧವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಹಾಗೂ ಖಾಸಗಿತದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅತ್ಯಂತ ದುರ್ಗಮ ಪ್ರದೇಶದಲ್ಲಿ ಮತ್ತು ವಿಪರೀತ ಹವಾಮಾನ ವೈಪರೀತ್ಯದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಎದುರಾಗುವ ಮಾನಸಿಕ ಮತ್ತು ದೈಹಿಕ ಒತ್ತಡದಿಂದ ನಿರಾಳವಾಗಲು ಮತ್ತು ಮನೆಯವರೊಂದಿಗೆ, ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮ ನೆರವಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಜಾರಿಗೊಳಿಸಲು ಉದ್ದೇಶಿಸಿರುವ ನೀತಿಯು ಸಂವಿಧಾನದ 14ನೇ ಅನುಚ್ಛೇದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಚೀನೀ ಆ್ಯಪ್ ಗಳಿಂದ ಯೋಧರು ಹನಿಟ್ರ್ಯಾಪ್ ಗೆ ಒಳಗಾಗುತ್ತಾರೆ ಎಂಬ ಕಾರಣದಿಂದ ಅರ್ಜಿಯನ್ನು ಜುಲೈ 14ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News