ತಿರುಪತಿ ತಿಮ್ಮಪ್ಪನ ಬಳಿ 51 ಕೋಟಿ ರೂ. ಮೌಲ್ಯದ ಅಮಾನ್ಯ ನೋಟುಗಳು!

Update: 2020-07-14 04:03 GMT

ತಿರುಪತಿ, ಜು.14: ದೇಶದಲ್ಲಿ 500 ರೂಪಾಯಿ ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಮೂರೂವರೆ ವರ್ಷಗಳಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಸುಮಾರು 51 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ದೇಶದ ಶ್ರೀಮಂತ ದೇವಾಲಯವನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಟಿಟಿಡಿ ಟ್ರಸ್ಟ್ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಸೋಮವಾರ ಹೊಸದಿಲ್ಲಿಯಲ್ಲಿ ಈ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದರು. ಕೊರೋನ ವೈರಸ್ ಸಾಂಕ್ರಾಮಿಕದ ಕಾರಣದಿಂದಾಗಿ ಟಿಟಿಡಿ ಹಣಕಾಸು ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅಮಾನ್ಯಗೊಂಡ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದಾಗಿ ರೆಡ್ಡಿ ವಿವರಿಸಿದರು.

ಭಕ್ತರು ಸಮರ್ಪಣಾ ಮನೋಭಾವದಿಂದ ಹುಂಡಿಗೆ ಹಾಕಿದ ಹಣವನ್ನು ತಿರಸ್ಕರಿಸಲಾಗದು ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರ 2018ರ ನವೆಂಬರ್ 8ರಂದು ನೋಟು ಅಮಾನ್ಯಗೊಳಿಸಿದ ಬಳಿಕ ಆರ್‌ಬಿಐ ನಿರ್ದೇಶನದಂತೆ ತನ್ನ ಎಲ್ಲ ಕೌಂಟರ್‌ಗಳಲ್ಲಿ 500 ಹಾಗೂ 1000 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ಟಿಟಿಡಿ ನಿಲ್ಲಿಸಿತ್ತು.

ಆದರೂ ಭಕ್ತರು ಅಮಾನ್ಯಗೊಂಡ 500 ರೂಪಾಯಿಯ ಹಳೆ ನೋಟು ಮತ್ತು 1000 ರೂಪಾಯಿ ನೋಟುಗಳನ್ನು ಹುಂಡಿಗೆ ಹಾಕಿದ್ದಾರೆ ಎಂದು ವಿವರಿಸಿದರು. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಹಣಕಾಸು ಸಚಿವೆ ಭರವಸೆ ನೀಡಿದ್ದಾರೆ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News