ಮತ್ತೆ ದಿಗ್ಬಂಧನ ಪರಿಹಾರವೇ?

Update: 2020-07-14 19:30 GMT

ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಬೆಂಗಳೂರು ಸೇರಿದಂತೆ ಮತ್ತೆ ಐದು ಜಿಲ್ಲೆಗಳಲ್ಲಿ ಸರಕಾರ ಒಂದು ವಾರ ಕಾಲ ದಿಗ್ಬಂಧನ (ಲಾಕ್‌ಡೌನ್) ಘೋಷಿಸಿದೆ. ಸರಕಾರ ಘೋಷಿಸುವ ಮುನ್ನವೇ ಗಾಬರಿಯಾದ ಜನ ತಾವಾಗಿ ಕೆಲವು ಕಡೆ ಲಾಕ್ ಡೌನ್ ಮಾಡಿದ ವರದಿಗಳೂ ಬಂದಿವೆ. ಕರ್ನಾಟಕದಲ್ಲಿ ಈ ವರೆಗೆ 41 ಸಾವಿರಕ್ಕೂ ಹೆಚ್ಚು ಕೊರೋನ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹೆಚ್ಚಿನ ಪಾಲು ರಾಜಧಾನಿ ಬೆಂಗಳೂರಿಗೆ ಸೇರಿವೆ. ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಸೋಂಕು ಸಮುದಾಯದಲ್ಲಿ ಹರಡಿದೆ ಎಂಬ ಸಂದೇಹವನ್ನು ವೈದ್ಯಕೀಯ ತಜ್ಞರು ವ್ಯಕ್ತಪಡಿಸಿದ್ದಾರೆ. ಆದರೆ ಲಾಕ್‌ಡೌನ್‌ವೊಂದರಿಂದ ಕೋವಿಡ್ ನಿಯಂತ್ರಣ ಸಾಧ್ಯವೇ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.

  ಕೋವಿಡ್ ಎದುರಿಸಲು ದಿಗ್ಬಂಧನವೊಂದೇ ಪರಿಹಾರವಲ್ಲ. ಈ ವೈರಾಣು ನಿಯಂತ್ರಿಸಲು ಆರೋಗ್ಯ ಮೂಲ ಸೌಕರ್ಯಗಳನ್ನು ಬಲಪಡಿಸುವುದು ಅಗತ್ಯವಾಗಿದೆ. ಕಳೆದ ಮಾರ್ಚ್ 24 ರಿಂದ ಮೇ 31ವರೆಗೆ ದೇಶವ್ಯಾಪಿ ದಿಗ್ಬಂಧನ ವಿಧಿಸಿದಾಗ ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಉಪಕ್ರಮಗಳನ್ನು ಸರಕಾರ ಕೈಗೊಳ್ಳಬೇಕಾಗಿತ್ತು. ಅದರೆ ಕರ್ನಾಟಕ ಮಾತ್ರವಲ್ಲ ಅನೇಕ ರಾಜ್ಯಗಳಲ್ಲಿ ಅಂತಹ ತಯಾರಿಯನ್ನು ಸರಕಾರಗಳು ಮಾಡಿಕೊಳ್ಳಲಿಲ್ಲ. ಹೀಗಾಗಿ ಬೆಂಗಳೂರಿನಂತಹ ಮಹಾನಗರದಲ್ಲಿ ಕೋವಿಡ್ ಪೀಡಿತರಿಗೆ ಹಾಸಿಗೆಗಳು ಸೇರಿದಂತೆ ಅಗತ್ಯದ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವ ಸರಕಾರದ ಯೋಜನೆ ಕಾರ್ಯಗತವಾಗಿಲ್ಲ. ಆ ಖಾಸಗಿ ಆಸ್ಪತ್ರೆಗಳು ಸರಕಾರದ ಜೊತೆ ಸಹಕರಿಸುತ್ತಿಲ್ಲ. ಇದರಿಂದ ಗರಂ ಆದ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಖಾಸಗಿ ಆಸ್ಪತ್ರೆಗಳು ಮಾತು ಕೇಳದಿದ್ದರೆ ಅವುಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅದು ಅಂದು ಕೊಂಡಷ್ಟು ಸುಲಭವಲ್ಲ. ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಲಾಬಿ ಸರಕಾರವನ್ನೇ ನಡುಗಿಸುವಷ್ಟು ಪ್ರಭಾವಶಾಲಿಯಾಗಿದೆ. ಸದ್ಯದ ಸಮಸ್ಯೆಗೆ ಪರಿಹಾರವೆಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು. ಆದರೆ ಅದು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ದಿಕ್ಕು ತಪ್ಪಿದ ಸರಕಾರ ದಿಢೀರನೆ ದಿಗ್ಬಂಧನ ಘೋಷಣೆ ಮಾಡಿದೆ. ಈ ದಿಢೀರ್ ಘೋಷಣೆ ಉದ್ಯಮ ಮತ್ತು ವ್ಯಾಪಾರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು ಎರಡೂವರೆ ತಿಂಗಳ ಲಾಕ್‌ಡೌನ್ ಹೊಡೆತದಿಂದ ತತ್ತರಿಸಿ ಇದೀಗ ಚೇತರಿಸುತ್ತಿರುವಾಗ ಮತ್ತೆ ದಿಗ್ಬಂಧನವೆಂದರೆ ಸಹಜವಾಗಿ ವಾಣಿಜ್ಯೋದ್ಯಮ ವಲಯ ಆಕ್ಷೇಪ ವ್ಯಕ್ತಪಡಿಸುತ್ತದೆ.

ಕೊರೋನ ಹರಡುತ್ತಿರುವುದರಿಂದ ಕೆಲ ರಾಜ್ಯಗಳು ಕಿರು ಅವಧಿಯ ದಿಗ್ಬಂಧನ ಘೋಷಣೆ ಮಾಡುತ್ತಿರುವುದು ಪ್ರಯೋಜನಕಾರಿಯಲ್ಲ. ಇದರಿಂದ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ದೇಶದ 500ಕ್ಕೂ ಹೆಚ್ಚು ವಿಜ್ಞಾನಿಗಳು, ವೈದ್ಯಕೀಯ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಲಾಕ್ ಡೌನ್‌ನಿಂದ ಸೋಂಕು ತಗಲುವುದನ್ನು ಕೆಲ ಕಾಲ ಮುಂದೂಡಬಹುದು. ಆದರೆ ಸೋಂಕಿನ ನಿಯಂತ್ರಣ ಸಾಧ್ಯವಿಲ್ಲ. ಸೋಂಕನ್ನು ನಿಯಂತ್ರಿಸಲು ತಪಾಸಣೆಯೇ ಏಕೈಕ ಮಾರ್ಗವಾಗಿದೆ ಎಂದು ಪರಿಣಿತರ ಅಭಿಪ್ರಾಯವಾಗಿದೆ. ತೀವ್ರ ಗತಿಯಲ್ಲಿ ತಪಾಸಣಾ ಕಾರ್ಯ ನಡೆಸಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಬೇಕು. ಅಂತಹವರನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಮಾಡುವುದು ಮಾತ್ರವೇ ಅತ್ಯುತ್ತಮ ಮಾರ್ಗವಾಗಿದೆ ಎಂಬುದು ಇವರ ನಿಲುವಾಗಿದೆ. ಅದರೆ ತ್ವರಿತ ತಪಾಸಣೆಯ ವ್ಯವಸ್ಥೆ ಸರಕಾರದ ಬಳಿ ಇಲ್ಲ. ಹೀಗಿರುವಾಗ ವಯಸ್ಸಾದವರನ್ನು ಮತ್ತು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್‌ಮುಂತಾದ ಕಾಯಿಲೆ ಪೀಡಿತರನ್ನು ಪ್ರತ್ಯೇಕವಾಗಿ ಇಡುವುದು, ಆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾದ ಕ್ರಮವಾಗಿದೆ.

ಕೊರೋನ ನಿಯಂತ್ರಣಕ್ಕೆ ಈ ತುರ್ತು ಕ್ರಮಗಳನ್ನು ಕೈಗೊಳ್ಳಲು ಸರಕಾರದಲ್ಲಿ ಇಚ್ಛಾಶಕ್ತಿ ಮಾತ್ರವಲ್ಲ ಪರಸ್ಪರ ಹೊಂದಾಣಿಕೆ ಇರಬೇಕು. ಆದರೆ ಕರ್ನಾಟಕ ಸರಕಾರದಲ್ಲಿ ಅಂತಹ ಸಮನ್ವಯ ಕಾಣುತ್ತಿಲ್ಲ. ಕೋವಿಡ್ ಚಿಕಿತ್ಸೆಯ ವಿಷಯದಲ್ಲಿ ಮತ್ತು ವೈರಾಣು ನಿಯಂತ್ರಕ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರದ ದುರ್ವಾಸನೆ ಹರಡಿರುವುದು ಒಳ್ಳೆಯ ಸೂಚನೆಯಲ್ಲ. ಈ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಸೂಕ್ತ ಸಮಜಾಯಿಷಿ ನೀಡಬೇಕಾದ ಮಂತ್ರಿಗಳು, ಪ್ರತಿಪಕ್ಷಗಳು ಟೀಕಿಸುವುದೇ ತಪ್ಪುಎಂಬಂತೆ ಪ್ರತಿಪಕ್ಷ ನಾಯಕರ ನಿಂದನೆಗೆ ಮುಂದಾಗಿರುವುದು ಸರಿಯಲ್ಲ. ಪ್ರತಿಪಕ್ಷ ನಾಯಕರು ಜನತೆಯ ಕಾವಲುಗಾರನ ಕೆಲಸ ಮಾಡಲೇಬೇಕಾಗುತ್ತದೆ. ಅದನ್ನು ಸಹನೆಯಿಂದ ಕೇಳಿಸಿಕೊಳ್ಳುವುದು ಅಧಿಕಾರದಲ್ಲಿರುವವರ ಕರ್ತವ್ಯ. ಈ ದೃಷ್ಟಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜವಾಬ್ದಾರಿಯಿಂದ ಸಹನೆಯಿಂದ ವರ್ತಿಸಿದ್ದಾರೆ. ಆದರೆ ಅವರು ತಮ್ಮ ಮಂತ್ರಿಗಳ ಬಾಯಿಗೆ ಬೀಗ ಹಾಕುವಲ್ಲಿ ಯಶಸ್ವಿಯಾಗಿಲ್ಲ.

ಕೊರೋನ ಚಿಕಿತ್ಸೆಯ ವಿಷಯದಲ್ಲಿ ಕೇಳಿ ಬರುತ್ತಿರುವ ಅಕ್ರಮಗಳ ಬಗ್ಗೆ ಮುಖ್ಯ ಮಂತ್ರಿಗಳು ವಿಶೇಷ ಕಾರ್ಯಪಡೆಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.ಕೊರೋನ ಚಿಕಿತ್ಸೆಯಲ್ಲಿ ಹಣ ಹೇಗೆ ದುರ್ವ್ಯಯವಾಗುತ್ತದೆ ಎಂಬುದಕ್ಕೆ ಬೆಂಗಳೂರಿನ ಹೊರ ವಲಯದ ಅಂತರ್‌ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆರಂಭಿಸಿರುವ 10,100 ಬೆಡ್‌ಗಳ ಆರೈಕೆ ಕೇಂದ್ರ ಉದಾಹರಣೆಯಾಗಿದೆ. ಇಲ್ಲಿ ಬೆಡ್‌ಗಳನ್ನು ಬಾಡಿಗೆ ಮೇಲೆ ಪಡೆಯಲಾಗಿದೆ. ಒಂದು ಬೆಡ್ ಸೆಟ್‌ಗೆ ದಿನಕ್ಕೆ ರೂ. 800 ಬಾಡಿಗೆ ನಿಗದಿ ಪಡಿಸಲಾಗಿದೆ. ಇವುಗಳ ಹದಿನಾಲ್ಕು ದಿನಗಳ ಬಾಡಿಗೆ ತಲಾ 11,200 ಆಗುತ್ತದೆ.ಇವುಗಳನ್ನು ಬಾಡಿಗೆಗೆ ಬದಲಾಗಿ ಖರೀದಿ ಮಾಡಿದ್ದರೆ ಕೇವಲ ತಲಾ ಏಳು ಸಾವಿರ ರೂಪಾಯಿ ವೆಚ್ಚವಾಗುತ್ತಿತ್ತು. ಇಂತಹ ದೊಡ್ಡ ವ್ಯವಹಾರ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ನಡೆದಿರುವುದು ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಸರಕಾರ ಈ ಲೋಪಗಳನ್ನು ಸರಿಪಡಿಸಿಕೊಳ್ಳಲಿ. ದಿಗ್ಬಂಧನದಂತಹ ತಾತ್ಕಾಲಿಕ ಕ್ರಮಗಳನ್ನು ಬಿಟ್ಟು ಕೋವಿಡ್ ಎದುರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News