ಚೀನಾ ಈಸ್ಟ್ ಇಂಡಿಯಾ ಕಂಪೆನಿಯಂತೆ ವರ್ತಿಸುತ್ತಿದೆ: ಬೀಜಿಂಗ್ ವಿರುದ್ಧ ಅಮೆರಿಕ ವಾಗ್ದಾಳಿ

Update: 2020-07-15 17:10 GMT

ವಾಶಿಂಗ್ಟನ್,ಜು.15: ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಚೀನಾ ಸರಕಾರದ ಉದ್ಯಮಗಳ ಕಾರ್ಯನಿರ್ವಹಣೆಯನ್ನು ಬ್ರಿಟಿಶ್ ವಸಾಹತುಶಾಹಿ ಕಾಲದ ಈಸ್ಟ್ ಇಡಿಯಾ ಸಂಸ್ಥೆಗೆ ಹೋಲಿಸಿದ್ದಾರೆ. ವಿವಾದಗ್ರಸ್ತ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಚೀನಾ ನಡೆಸುವ ಯಾವುದೇ ಯತ್ನದ ವಿರುದ್ಧ ಅಮೆರಿಕವು ಕಠಿಣವಾದ ನಿಲುವು ತೆಗೆದುಕೊಳ್ಳಲಿದೆ ಎಂದು ಅಮೆರಿಕದ ಪೂರ್ವ ಏಶ್ಯಕ್ಕಾಗಿನ ವಿಶೇಷ ಕಾರ್ಯದರ್ಶಿ ಡೇವಿಡ್ ಸ್ಟಿಲ್ವೆಲ್ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ತೈಲಬಾವಿಗಳನ್ನು ತೋಡುತ್ತಿರುವುದು, ವಿದೇಶಿ ಹಡಗುಗಳ ಕಣ್ಗಾವಲು ನಡೆಸುವುದು ಹಾಗೂ ಚೀನಿ ಸರಕಾರದ ಕಂಪೆನಿಗಳು ಮೀನುಗಾರಿಕೆ ನಡೆಸುತ್ತಿರುವುದನ್ನು ಖಂಡಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಬೀಜಿಂಗ್ ಹಕ್ಕು ಸ್ಥಾಪನೆಗೆ ಯತ್ನಿಸುತ್ತಿರುವುದು ಅಕ್ರಮವೆಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆ ನೀಡಿದ ಮರುದಿನವೇ ಸ್ಟಿಲ್ವೆಲ್ ಅವರು ಬೀಜಿಂಗ್ ವಿರುದ್ಧ ಚಾಟಿ ಬೀಸಿದ್ದಾರೆ.

 ಚೀನಿ ಆಡಳಿತವು, ಚೀನಾದ ತೈಲೋದ್ಯಮ ಸಂಸ್ಥೆ ಸಿಎನ್ಒಒಸಿ ಮತ್ತಿತರ ಕಂಪೆನಿಗಳನ್ನು ಇತರ ದೇಶಗಳಿಗೆ ಬೆದರಿಕೆಯೊಡ್ಡಲು ಬಳಸಿಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ.

‘‘ಚೀನಾದ ಸರಕಾರಿ ಉದ್ಯಮಗಳು, ಆಧುನಿಕ ಕಾಲದ ಈಸ್ಟ್ ಇಂಡಿಯಾ ಕಂಪೆನಿಯಾಗಿವೆ’’ ಎಂದು ಸ್ಟಿಲ್ವೆಲ್ ತಿಳಿಸಿದರು.

 ಚಹಾಪುಡಿ, ಹತ್ತಿ, ಸಂಬಾರ ಮತ್ತಿತರ ಸಾಮಗ್ರಿಗಳನ್ನು ವ್ಯಾಪಾರ ಮಾಡುವ ನೆಪದಲ್ಲಿ ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಯು ಇಡೀ ಭಾರತದ ಮೇಲೆ ನಿಯಂತ್ರಣ ಸಾಧಿಸಿತ್ತು. 19ನೇ ಶತಮಾನದ ಮಧ್ಯದಲ್ಲಿ ಬ್ರಿಟನ್ ಆಡಳಿತವು ಭಾರತದ ಆಳ್ವಿಕೆಯನ್ನು ಕೈಗೆತ್ತಿಕೊಳ್ಳುವವರೆಗೂ ಇಡೀ ಭಾರತ ಈಸ್ಟ್ ಇಂಡಿಯಾ ಕಂಪೆನಿಯ ವಶದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News