ಕೋವಿಡ್-19: ರೋಗ ನಿರ್ಣಯ ಹೇಗೆ?

Update: 2020-07-15 17:40 GMT

ಆ್ಯಂಟಿಜೆನ್ ಟೆಸ್ಟ್ ನೆಗೆಟಿವ್ ಬರಲು ಕಾರಣಗಳೇನು?
* ಗಂಟಲು ದ್ರವ ಸಂಗ್ರಹಣೆಯಲ್ಲಿ ಲೋಪ ಉಂಟಾಗುವ ಸಾಧ್ಯತೆ ಇರುತ್ತದೆ. ಬಾಯಿ ಭಾಗದಿಂದ ತೆಗೆದಾಗ ವೈರಾಣು ಇರದೇ ಇರಬಹುದು. ಸಾಕಷ್ಟು ವೈರಾಣು ಇಲ್ಲದೇ ಇರಬಹುದು.

* ಪರೀಕ್ಷೆ ಸಂದರ್ಭಗಳಲ್ಲಿ ಉಂಟಾದ ಲೋಪಗಳು * ವೈದ್ಯಾಧಿಕಾರಿಗಳ ಪ್ರಮಾದಗಳಿಂದ ಆಗಬಹುದು.
* ಗಂಟಲು ದ್ರವ ತೆಗೆದು ಹಲವು ದಿನಗಳ ಬಳಿಕ ಪರೀಕ್ಷೆ ಮಾಡಿದಾಗ ನೆಗೆಟಿವ್ ವರದಿ ಬರಬಹುದು.
ಒಟ್ಟಿನಲ್ಲಿ ಎಲ್ಲವನ್ನೂ ಪ್ರಯೋಗಾಲಯದ ವರದಿಯ ಮೇಲೆ ಅವಲಂಬಿಸಿ ಚಿಕಿತ್ಸೆ ನೀಡಬಾರದು. ರೋಗಿಯ ದೇಹಸ್ಥಿತಿ ಚರಿತ್ರೆ, ರೋಗ ಲಕ್ಷಣಗಳು, ಎದೆಯ ಕ್ಷ-ಕಿರಣ ಮತ್ತು ಪ್ರಯೋಗಾಲಯದ ವರದಿ ಇವೆಲ್ಲವನ್ನೂ ತಾಳೆ ಹಾಕಿ ಯಾವ ಚಿಕಿತ್ಸೆ ಯಾವಾಗ ಆಗಬೇಕು ಎಂದು ವೈದ್ಯರೇ ನಿರ್ಧರಿಸುತ್ತಾರೆ.


 ಕೋವಿಡ್-19 ಎನ್ನುವುದು ವೈರಾಣು ಸೋಂಕು ಆಗಿದ್ದು, ಸಾಂಕ್ರಾಮಿಕ ರೋಗವಾಗಿರುತ್ತದೆ. SARS Cov-2 ಎಂಬ ಕೊರೋನ ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಫ್ಲೂ ಅಥವಾ ಇನ್‌ಫ್ಲೂಯೆಂಝಾ ಎಂಬುದು ಕೂಡಾ ವೈರಾಣು ಸೋಂಕು ಆಗಿದ್ದು, ಇನ್‌ಫ್ಲೂಯೆಂಝಾ ಎಂಬ ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಇವೆರಡು ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಒಂದೇ ರೀತಿಯಲ್ಲಿರುತ್ತದೆ. ಜ್ವರ, ಸುಸ್ತು, ಶೀತ, ಗಂಟಲು ಕೆರೆತ, ಮೈಕೈ ನೋವು, ಆಯಾಸ, ಕೆಮ್ಮು, ಸೀನುವಿಕೆ, ತಲೆನೋವು ಇವೆೆಲ್ಲವೂ ಇನ್‌ಫ್ಲೂಯೆಂಝಾ ಮತ್ತು ಕೋವಿಡ್-19 ರೋಗದಲ್ಲಿ ಕಂಡು ಬರುತ್ತದೆ. ಆದರೆ ಉಸಿರಾಟದ ಸಮಸ್ಯೆ ಕೋವಿಡ್-19 ರೋಗದಲ್ಲಿ ಮಾತ್ರ ಇರುತ್ತದೆ.

ಇದಲ್ಲದೆ, ವಾಸನೆ ಗ್ರಹಣಶಕ್ತಿ ಕುಂದುವುದು ಮತ್ತು ರುಚಿ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಕೂಡಾ ಕೋವಿಡ್-19 ರೋಗದಲ್ಲಿ ಕಂಡು ಬಂದಿದೆ. ಇದೇ ಮಾನದಂಡವನ್ನು ಹಿಡಿದುಕೊಂಡು ರೋಗ ನಿರ್ಣಯ ಮಾಡುವುದು ಸಾಧ್ಯವಾಗುವುದಿಲ್ಲ. ನಿಖರವಾಗಿ ಒಬ್ಬನಿಗೆ ಕೋವಿಡ್-19 ರೋಗ ಬಂದಿದೆಯೆಂದು ಹೇಳಬೇಕಾದಲ್ಲಿ ಕೆಲವೊಂದು ನಿರ್ದಿಷ್ಟ ಪರೀಕ್ಷೆ ಮಾಡಬೇಕಾಗುತ್ತದೆ. ಅವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಒಬ್ಬ ವ್ಯಕ್ತಿಗೆ ಕೋವಿಡ್-19 ರೋಗ ಬಂದಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಎರಡು ರೀತಿಯ ಪರೀಕ್ಷೆ ಮಾಡಲಾಗುತ್ತದೆ.

* ಆ್ಯಂಟಿಬಾಡಿ ಟೆಸ್ಟ್: ಇಲ್ಲಿ ಶಂಕಿತ ವ್ಯಕ್ತಿಯ ರಕ್ತವನ್ನು ಪಡೆದು ಅದರಲ್ಲಿ ಕೋವಿಡ್-19 ರೋಗಾಣುವಿನ ವಿರುದ್ಧ ದೇಹದಲ್ಲಿ ಸೃಷ್ಟಿಯಾದ ಆ್ಯಂಟಿಬಾಡಿಗಳನ್ನು ಪತ್ತೆಹಚ್ಚಲಾಗುತ್ತದೆ. ಇದರಿಂದ ಆ ವ್ಯಕ್ತಿಗೆ ರೋಗ ಬಂದಿದೆಯೇ ಅಥವಾ ರೋಗ ಬಂದಿಲ್ಲವೇ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಿರುತ್ತದೆ.

* ಆ್ಯಂಟಿಜೆನ್ ಟೆಸ್ಟ್: ಇಲ್ಲಿ ಮೂಗಿನ ದ್ರವ್ಯದ ಸ್ಯಾಂಪಲ್ ಅಥವಾ ಮಾದರಿಯನ್ನು ಗಂಟಲಿನ ಮುಖಾಂತರ ತೆಗೆದು ಕೋವಿಡ್-19 ರೋಗಾಣುವಿನ ಇರುವಿಕೆಯನ್ನು ಆ್ಯಂಟಿಜೆನ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಇದಕ್ಕೆ RT-PCR (ರಿವರ್ಸ್ ಟ್ರಾನ್ಸ್‌ಕ್ರಿಪ್ಟೆಸ್ ಪಾಲಿಮರೇಸ್ ಚೈನ್ ರಿಯಾಕ್ಷನ್) ಎಂದು ಕರೆಯಲಾಗುತ್ತದೆ.

ಆ್ಯಂಟಿಬಾಡಿ ಟೆಸ್ಟ್: ಈ ಪರೀಕ್ಷೆಯಲ್ಲಿ ಶಂಕಿತ ವ್ಯಕ್ತಿಯ ದೇಹದ ರಕ್ತವನ್ನು ಪಡೆದು ಆತನ ದೇಹದಲ್ಲಿ ಇರುವ IgG ಮತ್ತು IgM ಎಂಬ ಆ್ಯಂಟಿಬಾಡಿಗಳನ್ನು ಪತ್ತೆಹಚ್ಚಲಾಗುತ್ತದೆ. ಇದೊಂದು ಬಹಳ ಸುಲಭದ ಮತ್ತು ನಂಬಲರ್ಹವಾದ ಪರೀಕ್ಷೆಯಾಗಿರುತ್ತದೆ. ಕೇವಲ 90 ನಿಮಿಷಗಳಲ್ಲಿ ಫಲಿತಾಂಶ ದೊರೆಯುತ್ತದೆ. ಪರೀಕ್ಷೆ ಮಾಡಿದ ವ್ಯಕ್ತಿಯ ರಕ್ತದಲ್ಲಿ IgM ಎಂಬ ಆ್ಯಂಟಿಬಾಡಿ ಪತ್ತೆಯಾದಲ್ಲಿ ಕೋವಿಡ್-19 ಸೋಂಕು ಆತನ ದೇಹದಲ್ಲಿ ಇದೆ ಎಂದು ಅರ್ಥ. ಕೇವಲ IgG ವ್ಯಕ್ತಿಯ ದೇಹದ ರಕ್ತದಲ್ಲಿ ಕಂಡು ಬಂದಲ್ಲಿ ಆ ವ್ಯಕ್ತಿಗೆ ಕೋವಿಡ್-19 ರೋಗ ಬಂದು ಹೋಗಿದೆ ಎಂಬರ್ಥ. ಎರಡೂ IgG ಮತ್ತು IgM ಎಂಬ ಆ್ಯಂಟಿಬಾಡಿಗಳು ರಕ್ತದಲ್ಲಿ ಇಲ್ಲದಿದ್ದಲ್ಲಿ ಕೋವಿಡ್-19 ವೈರಾಣು ಸೋಂಕು ಬಂದಿಲ್ಲ ಎಂದು ಅರ್ಥೈಸಲಾಗುತ್ತದೆ. ಅದೇ ರೀತಿ IgG ಮತ್ತು IgM ಎಂಬ ಆ್ಯಂಟಿಬಾಡಿಗಳು ಶಂಕಿತ ವ್ಯಕ್ತಿಯ ದೇಹದಲ್ಲಿ ಪತ್ತೆಯಾದಲ್ಲಿ ಆ ವ್ಯಕ್ತಿಗೆ ಕೋವಿಡ್-19 ಸೋಂಕು ದೇಹದಲ್ಲಿ ಈಗಲೂ ಇದೆಯೆಂದು ತಿಳಿಯಲಾಗುತ್ತದೆ. ಈ ಎರಡೂ ಆ್ಯಂಟಿಬಾಡಿ ಟೆಸ್ಟ್‌ಗಳು ಅತ್ಯಂತ ನಿಖರವಾಗಿದ್ದು, ರೋಗ ಪತ್ತೆಹಚ್ಚುವ ಮತ್ತು ಕೋವಿಡ್-19 ಪತ್ತೆಹಚ್ಚುವ ಸಾಮರ್ಥ್ಯ ಶೇ. 99.5 ಸಾಧ್ಯತೆ ಆಗಿರುತ್ತದೆ. ಈ ಪರೀಕ್ಷೆಯ ಫಲಿತಾಂಶವನ್ನು ರೋಗಿಯ ದೇಹದ ರೋಗ ಲಕ್ಷಣಗಳ ಜೊತೆ ತಾಳೆ ಹಾಕಿ ರೋಗ ನಿರ್ಣಯ ಮಾಡಲಾಗುತ್ತದೆ. ಯಾಕೆಂದರೆ ಶಂಕಿತ ವ್ಯಕ್ತಿಗೆ ವೈರಾಣು ಸೋಂಕು ತಗಲಿ ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಆ್ಯಂಟಿಬಾಡಿ ಪರೀಕ್ಷೆ ಮೂಲಕ ಪತ್ತೆ ಹಚ್ಚುವ ಸಾಮರ್ಥ್ಯ 1ರಿಂದ 3 ದಿನಗಳ ವರೆಗೆ ಶೇ. 55, 4ರಿಂದ 6 ದಿನಗಳ ವರೆಗೆ ಶೇ. 75, 7ರಿಂದ 9 ದಿನಗಳ ವರೆಗೆ ಶೇ. 95 ಮತ್ತು 9 ದಿನಗಳ ನಂತರ ಶೇ. 97.5 ಆಗಿರುತ್ತೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಮೂರು ವಾರಗಳ ಬಳಿಕ ಶೇ. 100ರಷ್ಟು ನಿಖರ ಫಲಿತಾಂಶ ಬರುತ್ತದೆ.

ಆ್ಯಂಟಿಜೆನ್ ಟೆಸ್ಟ್:  ಕೋವಿಡ್-19 ರೋಗದ ಲಕ್ಷಣಗಳು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಬರೀ ಸಣ್ಣ ಪ್ರಮಾಣದ ಜ್ವರ ಮಾತ್ರ ಬರಬಹುದು. ಇನ್ನೂ ಕೆಲವರಿಗೆ ರೋಗ ಬಂದು ಹೋದದ್ದು, ತಿಳಿಯದೇ ಇರಬಹುದು. ಎಲ್ಲ ರೋಗಿಗಳಲ್ಲಿ ರೋಗದ ಎಲ್ಲಾ ಲಕ್ಷಣಗಳು ಕಂಡು ಬರಲೇಬೇಕೆಂದಿಲ್ಲ. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇಲ್ಲದ ವ್ಯಕ್ತಿಗೂ ಕೊರೋನ ಆ್ಯಂಟಿಜೆನ್ ಟೆಸ್ಟ್ ಪಾಸಿಟಿವ್ ಬಂದ ಉದಾಹರಣೆ ಇದೆ. ಇನ್ನು ಕೆಲವೊಮ್ಮೆ ರೋಗ ಲಕ್ಷಣ ಇದ್ದರೂ ಈ ಪರೀಕ್ಷೆ ನೆಗೆಟಿವ್ ಬಂದದ್ದೂ ಇದೆ.

ಈ  RT-PCR ಪರೀಕ್ಷೆಯ ರೋಗ ಪತ್ತೆಹಚ್ಚುವ ನಿಖರತೆಯ ಪ್ರಮಾಣ ಶೇ. 70 ಮಾತ್ರ ಆಗಿರುತ್ತದೆ. ಇದರ ಅರ್ಥ ಒಬ್ಬ ವ್ಯಕ್ತಿಗೆ ಕೊರೋನ ನೆಗೆಟಿವ್ RT-PCR ಫಲಿತಾಂಶ ಬಂದಿದ್ದರೂ ಆತನಿಗೆ ರೋಗ ಇರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಸಂಪೂರ್ಣವಾಗಿ ಈ ಪರೀಕ್ಷೆಗಳನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ವೈದ್ಯರು ರೋಗಿಯ ಚರಿತ್ರೆ ರೋಗದ ಲಕ್ಷಣ ಮತ್ತು ಆ್ಯಂಟಿಜೆನ್ ಟೆಸ್ಟ್ ಇವೆಲ್ಲವನ್ನೂ ತಾಳೆ ಹಾಕಿ ರೋಗ ನಿರ್ಣಯ ಮಾಡಿ ನಿರ್ಧಾರಕ್ಕೆ ಬರುತ್ತಾರೆ. ರೋಗದ ಲಕ್ಷಣಗಳು ಇದ್ದು, ಋಣಾತ್ಮಕ ವರದಿ ಬಂದರೂ ವೈದ್ಯರು ರೋಗಿಗೆ ಸಾಕಷ್ಟು ಮುಂಜಾಗ್ರತೆ ಮತ್ತು ದಿಗ್ಭಂದನ ಮಾಡಿಕೊಳ್ಳಲು ತಿಳಿಸಬಹುದು. ಅದೇ ರೀತಿ ಧನಾತ್ಮಕ ವರದಿ ಬಂದಾಗ ರೋಗದ ಲಕ್ಷಣ ಇಲ್ಲದಿದ್ದರೆ ಯಾವುದೇ ಚಿಕಿತ್ಸೆ ನೀಡದೆ ರೋಗಿಯನ್ನು ಒಳರೋಗಿಯಾಗಿ ದಾಖಲು ಮಾಡಿ ಅಭ್ಯಸಿಸಲೂ ಬಹುದು. ಒಟ್ಟಿನಲ್ಲಿ ರೋಗದ ಚಿಕಿತ್ಸೆ ಎನ್ನುವುದು ರೋಗದ ಲಕ್ಷಣಗಳ ಮೇಲೆ ನಿರ್ಧರಿತವಾಗಿರುತ್ತದೆ. ಜ್ವರ ಇದ್ದರೆ ಅದಕ್ಕೆ ಚಿಕಿತ್ಸೆ, ಅಲ್ಲದೆ ಉಸಿರಾಟದ ತೊಂದರೆ ಇದ್ದಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ಸದ್ಯಕ್ಕೆ ಈ ಕೋವಿಡ್-19 ರೋಗ ಪತ್ತೆ ಹಚ್ಚಲು ಇರುವ ವಿಶ್ವಾಸಾರ್ಹ ಪರೀಕ್ಷೆ ಆ್ಯಂಟಿಜೆನ್ ಮತ್ತು ಆ್ಯಂಟಿಬಾಡಿ ಪರೀಕ್ಷೆಗಳು ಆಗಿರುತ್ತದೆ. RT-PCR ನಲ್ಲಿ ಮೊದಲು ರಿವರ್ಸ್ ಟ್ರಾನ್ಸ್‌ಕ್ರಿಪ್ಟೆಸ್ ವಿಧಾನದಿಂದ ಡಿಎನ್‌ಎ ತಂತುಗಳನ್ನು ಪಡೆದು ಬಳಿಕ ಡಿಎನ್‌ಎಯನ್ನು ಪಾಲಿಮರೇಸ್ ಚೈನ್ ರಿಯಾಕ್ಷನ್ ಮುಖಾಂತರ ದೊಡ್ಡದು ಮಾಡಿ ಅಧ್ಯಯನ ಮಾಡಲಾಗುತ್ತದೆ. SARS Cov-2 ವೈರಾಣುವಿನಲ್ಲಿ ಕೇವಲ ಆರ್‌ಎನ್‌ಎ ಮಾತ್ರ ಹೊಂದಿರುವುದರಿಂದ RT-PCR ಮುಖಾಂತರ ವೈರಾಣು ಪತ್ತೆ ಹಚ್ಚಲಾಗುತ್ತದೆ. ಈ ಪರೀಕ್ಷೆಗೆ ಸುಮಾರು 4-5 ಗಂಟೆ ಹಿಡಿಯಬಹುದು. ರ್ಯಾಪಿಡ್ ಟೆಸ್ಟ್‌ನಲ್ಲಿ 2 ಗಂಟೆಯೊಳಗೆ ಫಲಿತಾಂಶ ಬರುತ್ತದೆ. PCR ಪರೀಕ್ಷೆಯಲ್ಲಿ ವ್ಯಕ್ತಿಯ ದೇಹದಲ್ಲಿ ಇರುವ ವೈರಾಣುವಿನ ಆ್ಯಂಟಿಜೆನ್ ಇದರ ಇರುವಿಕೆಯನ್ನು ಪತ್ತೆ ಮಾಡಲಾಗುತ್ತದೆ. ಆ್ಯಂಟಿಬಾಡಿ ಟೆಸ್ಟ್‌ನಲ್ಲಿ ವೈರಾಣು ಸೋಂಕು ತಗಲಿದ ವ್ಯಕ್ತಿಯ ರಕ್ತದಲ್ಲಿರುವ ದೇಹದ ರಕ್ಷಣಾ ವ್ಯವಸ್ಥೆಯಲ್ಲಿ ಉತ್ಪತ್ತಿಯಾದ ಆ್ಯಂಟಿಬಾಡಿಯನ್ನು ಪತ್ತೆ ಹಚ್ಚಲಾಗುತ್ತದೆ. ಆ್ಯಂಟಿಜೆನ್ ಟಿಸ್ಟ್‌ಗೆ ರಕ್ತ ಬಳಸುವುದಿಲ್ಲ. ಶಂಕಿತ ರೋಗಿಯ ಗಂಟಲಿನ ಅಥವಾ ಮೂಗಿನ ದ್ರವ್ಯವನ್ನು ಬಳಸಲಾಗುತ್ತದೆ. PCR ಪರೀಕ್ಷೆ ಸಂಪೂರ್ಣ ಪರಿಪೂರ್ಣವಾಗಿರುವುದಿಲ್ಲ. ಶೇ.30 ಪರೀಕ್ಷೆಗಳಲ್ಲಿ ತಪ್ಪುಬರುವ ಸಾಧ್ಯತೆಯೂ ಇರುತ್ತದೆ. ಈ ಕಾರಣದಿಂದ ರೋಗಿಯ ಚರಿತ್ರೆ, ರೋಗ ಲಕ್ಷಣಗಳನ್ನು ತಾಳೆಹಾಕಿ ಅಗತ್ಯವಿದ್ದಲ್ಲಿ ಮತ್ತೊಮ್ಮೆ PCR ಪರೀಕ್ಷೆ ಮಾಡಿದ ಬಳಿಕವೇ ರೋಗ ನಿರ್ಣಯ ಮಾಡಲಾಗುತ್ತದೆ. ಆದರೆ ಒಮ್ಮೆ ಪಿಸಿಆರ್ ಪರೀಕ್ಷೆ ಧನಾತ್ಮಕವಾಗಿ ಬಂದಲ್ಲಿ ಆ ವ್ಯಕ್ತಿಗೆ ಖಂಡಿತವಾಗಿಯೂ ರೋಗ ಇದೆಯೆಂದು ತಿಳಿಯಲಾಗುತ್ತದೆ.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News