'ಜೀವನವನ್ನು ದ್ವೇಷಿಸುತ್ತಿದ್ದೇನೆ': ಶಾಲೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ 14 ವರ್ಷದ ಬಾಲಕಿ ಪತ್ತೆ

Update: 2020-07-15 18:13 GMT

ಹೊಸದಿಲ್ಲಿ: ನೊಯ್ಡಾದ ಆರ್ಯ ಸಮಾಜ ಶಾಲೆಯ 14 ವರ್ಷದ ವಿದ್ಯಾರ್ಥಿನಿಯೊಬ್ಬಳು ಜುಲೈ 3ರಂದು ಆತ್ಮಹತ್ಯೆಗೆ ಶರಣಾಗಿದ್ದು, ಶಾಲೆಯ ಆಡಳಿತ ಪೊಲೀಸರಿಗೆ ಮಾಹಿತಿ ನೀಡದೆ ತುರ್ತಿನಲ್ಲಿ ಬಾಲಕಿಯ ಅಂತ್ಯಸಂಸ್ಕಾರ ನಡೆಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಾಲಕಿಯ ತಾಯಿ, “ಜುಲೈ 3ರಂದು ಶಾಲೆಯಿಂದ ನನಗೆ ಕರೆ ಬಂದಿದ್ದು, ತಕ್ಷಣ ಆಗಮಿಸುವಂತೆ ತಿಳಿಸಲಾಗಿತ್ತು. ನಾವು ಅಲ್ಲಿಗೆ ತಲುಪಿದಾಗ ಅವರು ನಿಮ್ಮ ಮಗಳು ಖಿನ್ನತೆಯಿಂದಿದ್ದಳೇ ಎಂದು ಪ್ರಶ್ನಿಸಿದರು. ನಾನು ಆಕೆ ಸರಿಯಾಗಿಯೇ ಇದ್ದಳು ಎಂದೆ. ನಂತರ ಅವರು ಸೀಲಿಂಗ್ ನಲ್ಲಿ ನೇತಾಡುತ್ತಿದ್ದ ಆಕೆಯ ಮೃತದೇಹ ತೋರಿಸಿದರು. ಆಕೆಯ ಮೃತದೇಹ ನೀಲಿಬಣ್ಣಕ್ಕೆ ತಿರುಗಿತ್ತು. ಆಕೆಯ ಬಟ್ಟೆಗಳು ಸಡಿಲಗೊಂಡಿದ್ದವು” ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಹೇಳಿದ್ದರೂ ಶಾಲೆಯ ಆಡಳಿತ ಮಂಡಳಿ ನಿರಾಕರಿಸಿತು ಎಂದವರು ದೂರಿದ್ದಾರೆ. “ಅವರು ನಮ್ಮ ಮೇಲೆ ಕಣ್ಣಿಟ್ಟಿದ್ದರು. ನಾನು ಅಳುವಾಗ ಕೂಡ ಶಬ್ಧ ಮಾಡದಂತೆ ಹೇಳಿದರು. ಅಂತ್ಯಕ್ರಿಯೆ ತುರ್ತಾಗಿ ನಡೆಸಲಾಯಿತು” ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ಬಾಲಕಿಯ ಸೂಸೈಡ್ ನೋಟ್ ಪತ್ತೆಯಾಗಿದೆ ಎಂದಿದೆ. ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತಾನು ಆತ್ಮಹತ್ಯೆಗೈಯುತ್ತಿದ್ದೇನೆ. ಜೀವನವನ್ನು ದ್ವೇಷಿಸುತ್ತಿದ್ದೇನೆ ಎಂದು ಬಾಲಕಿ ಬರೆದಿದ್ದಾಳೆ ಎಂದು ಶಾಲೆ ಆಡಳಿತ ತಿಳಿಸಿದೆ.

“ಬಾಲಕಿಯ ತಾಯಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ಶಾಲೆಯ ಒಳಗೆ ತನ್ನ ಮಗಳು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಅವರು ಆ ವಿಡಿಯೋದಲ್ಲಿ ಹೇಳುತ್ತಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಶಾಲೆಯ ಆಡಳಿತ ಪ್ರಯತ್ನಿಸುತ್ತಿದೆ ಎಂದವರು ಆರೋಪಿಸಿದ್ದಾರೆ. ಆತ್ಮಹತ್ಯೆಯ ಬಗ್ಗೆ ಯಾವುದೇ ಮಾಹಿತಿ ನೀಡದೆ ಬಾಲಕಿಯ ಅಂತ್ಯಸಂಸ್ಕಾರ ನಡೆಸಲಾಗಿದೆ ಎನ್ನುವ ಮಾಹಿತಿ ನಮಗೆ ತನಿಖೆಯ ವೇಳೆ ತಿಳಿದುಬಂದಿದೆ. ಈ ಬಗ್ಗೆ ಕುಟುಂಬದವರು ದೂರು ನೀಡಿಲ್ಲ. ಈ ಬಗ್ಗೆ ತನಿಖೆಗೆ ಬಾಲಕಿಯ ಗ್ರಾಮಕ್ಕೆ ತಂಡವೊಂದನ್ನು ಕಳುಹಿಸಲಾಗಿದೆ. ಎಫ್ ಐಆರ್ ದಾಖಲಾದ ನಂತರ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಪೊಲೀಸ್ ಅಧಿಕಾರಿ ಸಂಕಲ್ಪ್ ಶರ್ಮಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News