ದೇಶದಲ್ಲಿ ಕೊರೋನ ಪ್ರಕರಣ, ಸಾವು ಎರಡರಲ್ಲೂ ಹೊಸ ದಾಖಲೆ

Update: 2020-07-16 03:40 GMT

ಹೊಸದಿಲ್ಲಿ, ಜು.16: ದೇಶದಲ್ಲಿ ಬುಧವಾರ ಗರಿಷ್ಠ ಸಂಖ್ಯೆಯ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನ ಅತ್ಯಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮಧ್ಯೆ ಇಡೀ ಜೂನ್ ತಿಂಗಳಲ್ಲಿ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳಷ್ಟು ಪ್ರಕರಣಗಳು ಜುಲೈ ತಿಂಗಳ ಮೊದಲ 15 ದಿನಗಳಲ್ಲೇ ವರದಿಯಾಗಿವೆ.

ಬುಧವಾರ ದೇಶದಲ್ಲಿ 32,498 ಹೊಸ ಪ್ರಕರಣಗಳು ದೃಢಪಟ್ಟಿವೆ. ಅಂತೆಯೇ ಒಂದೇ ದಿನ ಗರಿಷ್ಠ (615) ಸಾವು ಕೂಡಾ ಸಂಭವಿಸಿದೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 25 ಸಾವಿರದ ಸನಿಹಕ್ಕೆ ತಲುಪಿದೆ. ದೇಶದಲ್ಲಿ ಇದುವರೆಗೆ ಈ ಮಾರಕ ಸೋಂಕಿಗೆ 24,860 ಮಂದಿ ಬಲಿಯಾಗಿದ್ದಾರೆ.
ದೇಶದಲ್ಲಿ ಒಟ್ಟು 6,11,973 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಡೀ ಜೂನ್ ತಿಂಗಳಲ್ಲಿ ದೇಶದಲ್ಲಿ ಗುಣಮುಖರಾದಷ್ಟು ಸಂಖ್ಯೆಯ ರೋಗಿಗಳು ಜುಲೈ ತಿಂಗಳ ಮೊದಲ 15 ದಿನಗಳಲ್ಲೇ ಗುಣಮುಖರಾಗಿದ್ದಾರೆ.

ಜೂನ್ ತಿಂಗಳಲ್ಲಿ ದೇಶದಲ್ಲಿ 40,0413 ಮಂದಿಗೆ ಸೋಂಕು ಪತ್ತೆಯಾಗಿದ್ದು, ಜುಲೈ ತಿಂಗಳ ಮೊದಲಾರ್ಧದಲ್ಲಿ 38,3361 ಮಂದಿಗೆ ಸೋಂಕು ತಗಲಿದೆ. ಆದರೆ ಸೋಂಕಿತರ ಸಾವಿನ ಪ್ರಮಾಣ ಇಳಿಕೆಯಾಗಿದೆ. ಜೂನ್‍ನಲ್ಲಿ 12 ಸಾವಿರ ಮಂದಿ ಸೋಂಕಿತರು ವೈರಸ್‍ಗೆ ಬಲಿಯಾಗಿದ್ದರೆ, ಜುಲೈ ತಿಂಗಳ ಮೊದಲ 15 ದಿನಗಳಲ್ಲಿ 7,468 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕ (3,176), ಆಂಧ್ರಪ್ರದೇಶ (2,431), ಕೇರಳ (623), ಗುಜರಾತ್ (925), ಗೋವಾ (198), ಪಶ್ಚಿಮ ಬಂಗಾಳ (1,589) ಮತ್ತು ರಾಜಸ್ಥಾನ (866) ಬುಧವಾರ ಇದುವರೆಗಿನ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಿವೆ. ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾದ ನಾಲ್ಕನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದ್ದರೆ, 2,000ಕ್ಕೂ ಅಧಿಕ ಪ್ರಕರಣಗಳು ಒಂದೇ ದಿನ ದಾಖಲಾದ ಐದನೇ ರಾಜ್ಯವಾಗಿ ಆಂಧ್ರಪ್ರದೇಶ ಸೇರ್ಪಡೆಯಾಗಿದೆ.

ಒಟ್ಟು ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ಗುಜರಾತ್ ಬಳಿಕ ಪಶ್ಚಿಮ ಬಂಗಾಳ ಐದನೇ ಸ್ಥಾನಲ್ಲಿದೆ. ಬುಧವಾರ 20 ಮಂದಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 1,000ಕ್ಕೇರಿದೆ. ಕರ್ನಾಟಕ ಹಾಗೂ ಆಂಧ್ರದಲ್ಲೂ ಇದುವರೆಗಿನ ಗರಿಷ್ಠ ಸಾವು ಕಳೆದ 24 ಗಂಟೆಗಳಲ್ಲಿ ಸಂಭವಿಸಿದೆ. ಎರಡು ರಾಜ್ಯಗಳಲ್ಲಿ ಕ್ರಮವಾಗಿ 87 ಹಾಗೂ 44 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News