ಕೈಗಾರಿಕಾ ಯೋಜನೆ: ಹೆಚ್ಚಿನ ಪರಿಸರ ವಿಪತ್ತುಗಳಿಗೆ ನಾಂದಿ ಹಾಡಲಿದೆ ಸರಕಾರದ ನೂತನ ತಿದ್ದುಪಡಿಗಳು

Update: 2020-07-16 11:11 GMT

2019ರ ಜೂನ್ 9ರಂದು ಅಸ್ಸಾಂನ ತೀನ್‍ ಸುಕಿಯ ಜಿಲ್ಲೆಯ ಬಾಘ್ಜನ್‍ ತೈಲ ಕ್ಷೇತ್ರದಲ್ಲಿರುವ 5ನೇ ಬಾವಿಯಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿತು. ಅದಕ್ಕಿಂತಲೂ ಸುಮಾರು ಎರಡು ವಾರಗಳ ಹಿಂದೆ, ಅಂದರೆ ಮೇ 27ರಂದು ಸರಕಾರಿ ಒಡೆತನದ ಆಯಿಲ್‍ ಇಂಡಿಯಾ ಲಿಮಿಟೆಡ್ (ಒಐಎಲ್) ಒಡೆತನದ ಅದೇ ತೈಲ ಬಾವಿಯಲ್ಲಿ ಇನ್ನೊಂದು ದೊಡ್ಡ ಅಪಘಾತ ಸಂಭವಿಸಿತ್ತು. ತೈಲ ಬಾವಿಯ ದೈನಂದಿನ ಕಾರ್ಯದ ವೇಳೆ ಅನಿಯಂತ್ರಿತ ತೈಲ ಸೋರಿಕೆ ಆರಂಭಗೊಂಡಿತು. ಜೂನ್ 9ರಂದು ಸಂಭವಿಸಿದ ಬೆಂಕಿ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬೆಂಕಿಯನ್ನು 30 ಕಿ.ಮೀ. ದೂರದಿಂದಲೂ ನೋಡಬಹುದಾಗಿತ್ತು. ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟರು ಹಾಗೂ ಪರಿಸರದಲ್ಲಿ ವಾಸಿಸುತ್ತಿದ್ದ ಸಾವಿರಾರು ಮಂದಿಯನ್ನು ಶಿಬಿರಗಳಿಗೆ ಸ್ಥಳಾಂತರಿಸಲಾಯಿತು.

ಈ ತೈಲ ಕ್ಷೇತ್ರವು ದಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನಕ್ಕೆ ಸಮೀಪದಲ್ಲಿದ್ದದ್ದು ಕಳವಳಕ್ಕೆ ಕಾರಣವಾಯಿತು. ಈ ಉದ್ಯಾನವು ಜೀವವೈವಿಧ್ಯದ ಸೆಲೆಯಾಗಿದ್ದು, 36 ಸಸ್ತನಿ ಪ್ರಾಣಿಗಳು ಮತ್ತು 400ಕ್ಕೂ ಅಧಿಕ ಹಕ್ಕಿ ಪ್ರಭೇದಗಳಿಗೆ ನೆಲೆಯಾಗಿದೆ. ಮೊದಲ ತೈಲ ಮತ್ತು ಅನಿಲ ಸೋರಿಕೆಯ ವೇಳೆ ಅಳಿವಿನಂಚಿನಲ್ಲಿರುವ ಗಂಗಾ ನದಿಯ ಡಾಲ್ಫಿನ್‍ ಗಳು ಸೇರಿದಂತೆ ಹಲವು ಸಮುದ್ರ ಪ್ರಾಣಿಗಳ ಕಳೇಬರಗಳು ಪತ್ತೆಯಾದವು.

ಇದಕ್ಕೂ ಒಂದು ತಿಂಗಳು ಮೊದಲು, ಅಂದರೆ ಮೇ 7ರಂದು ವಿಶಾಖಪಟ್ಟಣದಲ್ಲಿ ಎಲ್‍ ಜಿ ನಡೆಸುತ್ತಿರುವ ಪಾಲಿಮರ್‍ ಕೈಗಾರಿಕಾ ಸ್ಥಾವರದಲ್ಲಿ ವಿಷಕಾರಿ ಅನಿಲ ಸೋರಿಕೆಯಾಯಿತು. ವಿಷಗಾಳಿಯಿಂದಾಗಿ 12 ಮಂದಿ ಮೃತಪಟ್ಟರು ಹಾಗೂ ನೂರಾರು ಮಂದಿ ಆಸ್ಪತ್ರೆಗೆ ದಾಖಲಾದರು. 1965ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಸ್ಥಾಪಿಸಿದ್ದ ಸ್ಥಾವರವನ್ನು 1997ರಲ್ಲಿ ದಕ್ಷಿಣ ಕೊರಿಯದ ಎಲ್‍ ಜಿ ವಹಿಸಿಕೊಂಡಿತ್ತು. ಅಲ್ಲಿ ಆಮದಿತ ಸ್ಟೈರೀನ್ ಬಳಸಿ ಪಾಲಿಸ್ಟರೀನ್ ಮತ್ತು ಹಿಗ್ಗಿಸಬಹುದಾದ ಪಾಲಿಸ್ಟರೀನ್‍ ತಯಾರಿಸಲಾಗುತ್ತಿತ್ತು ಹಾಗೂ ಪ್ರೈಮರಿ ಪ್ಲಾಸ್ಟಿಕನ್ನು ರೀಪ್ರೊಸೆಸಿಂಗ್ ಮಾಡಿ ಎಂಜಿನಿಯರಿಂಗ್ ಪ್ಲಾಸ್ಟಿಕ್ ತಯಾರಿಸಲಾಗುತ್ತಿತ್ತು.

ಈ ಎರಡು ಅಪಘಾತಗಳು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಸಂಭವಿಸಿದರೂ, ಅವುಗಳ ನಡುವೆ ಒಂದು ಸಾಮ್ಯತೆಯಿತ್ತು. ಈ ಯೋಜನೆಗಳಿಗೆ ಪರಿಸರ ಅನುಮೋದನೆಯನ್ನು ನೀಡುವಾಗ ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ಎರಡೂ ದುರಂತಗಳನ್ನು ತಡೆಯಬಹುದಾಗಿತ್ತು.

ಅಸ್ಸಾಂನ ತೈಲ ನಿಕ್ಷೇಪವನ್ನು ವಿವಾದಗಳು ಸುತ್ತಿಕೊಂಡಿವೆ. ಪರಿಸರ ಪರಿಣಾಮ ಅಧ್ಯಯನ ಪ್ರಕ್ರಿಯೆಯ ಭಾಗವಾಗಿ ಸಾರ್ವಜನಿಕ ವಿಚಾರಣೆಗಳನ್ನು ನಡೆಸದಿರುವುದಕ್ಕಾಗಿ ಭಾರೀ ಆಕ್ಷೇಪಗಳು ವ್ಯಕ್ತವಾಗಿದ್ದವು. ಎಲ್‍ ಜಿ ಪಾಲಿಮರ್ಸ್ ಸ್ಥಾವರವೂ ಪರಿಸರ ಸಚಿವಾಲಯದ ನಿಯಮಗಳನ್ನು ಉಲ್ಲಂಘಿಸಿದೆ ಎನ್ನುವ ಆರೋಪವಿದೆ. ಸ್ಥಾವರದಲ್ಲಿ ಉತ್ಪಾದನೆಯನ್ನು ಹೆಚ್ಚಿಸಿರುವುದು ಹಾಗೂ ಕೇಂದ್ರ ಸರಕಾರದಿಂದ ಅಗತ್ಯ ಪರಿಸರ ಅನುಮೋದನೆಗಳನ್ನು ಪಡೆಯದೇ ಉತ್ಪನ್ನದ ಮಿಶ್ರಣವನ್ನು ಬದಲಾಯಿಸಿರುವ ಬಗ್ಗೆ ಪರಿಸರ ಸಚಿವಾಲಯದ ಪರಿಣತರ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಒಐಎಲ್ ಮತ್ತು ಎಲ್‍ ಜಿ ಎರಡೂ ಕಂಪೆನಿಗಳು, ಯೋಜನೆಯ ಪರಿಸರ ವಿಷಯದಲ್ಲಿ ಉಡಾಫೆ ಧೋರಣೆ ತೋರಿಸಿದವು ಹಾಗೂ ಅದಕ್ಕಾಗಿ ಭಾರೀ ಬೆಲೆ ತೆತ್ತವು. ಪರಿಸರ ಅನುಮೋದನೆ ಅಥವಾ ಇಐಎ ಎಂದರೆ ಪರಿಸರದ ಮೇಲೆ ನಿರ್ದಿಷ್ಟ ಯೋಜನೆಯು ಬೀರುವ ಪರಿಣಾಮದ ಅಧ್ಯಯನ ಮಾತ್ರವಲ್ಲ, ಈ ಯೋಜನೆಗಳು ಪ್ರದೇಶ ಮತ್ತು ಸಮುದಾಯಕ್ಕೆ ಒಡ್ಡುವ ಅಪಾಯವನ್ನು ಅಧ್ಯಯನ ಮಾಡುವುದು ಇಂಥ ಸಮೀಕ್ಷೆಗಳ ಮುಖ್ಯ ಉದ್ದೇಶವಾಗಿದೆ.

ಆದರೆ, ಪ್ರಸಕ್ತ ಸರಕಾರ ಇದೇ ಅಭಿಪ್ರಾಯವನ್ನು ಹೊಂದಿದಂತೆ ಕಾಣುವುದಿಲ್ಲ. ಇತ್ತೀಚೆಗೆ ನೀಡಿದ ಅಧಿಸೂಚನೆಯೊಂದರಲ್ಲಿ, ಹೆದ್ದಾರಿಗಳು, ಗಣಿಗಳು, ವಿಮಾನ ನಿಲ್ದಾಣಗಳು, ಅಣೆಕಟ್ಟುಗಳು ಮುಂತಾದ ಕೈಗಾರಿಕಾ ಯೋಜನೆಗಳಿಗೆ ಪರಿಸರ ಅನುಮೋದನೆ ನೀಡುವಾಗ ಪರಿಗಣಿಸಬೇಕಾದ ಅಂಶಗಳ ಬಗ್ಗೆ ಸಂಪೂರ್ಣ ಭಿನ್ನ ನಿಯಮಾವಳಿಗಳು ಮತ್ತು ನಿಯಂತ್ರಣಗಳನ್ನು ಪ್ರಸ್ತಾಪಿಸಿದೆ. ನೂತನ ನಿಯಮಾವಳಿಗಳು ಉದ್ಯಮಗಳಿಗೆ ಪರವಾನಿಗೆ ನೀಡುವಾಗ ಅನುಸರಿಸಬೇಕಾದ ವಿಧಾನಗಳನ್ನು ಸುಲಭಗೊಳಿಸುತ್ತದೆ, ಹೆಚ್ಚಿನ ಯೋಜನೆಗಳ ಸಾರ್ವಜನಿಕ ವಿಚಾರಣೆಗಳನ್ನೇ ರದ್ದುಪಡಿಸಿದೆ ಹಾಗೂ ಉಳಿದ ಯೋಜನೆಗಳ ಸಾರ್ವಜನಿಕ ವಿಚಾರಣೆಗಳ ದಿನಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಒಟ್ಟಾರೆಯಾಗಿ, ಸರಕಾರದ ಕರಡು ಪ್ರಸ್ತಾವಗಳು ಸಾರ್ವಜನಿಕ ಸಮಾಲೋಚನೆ ಪ್ರಕ್ರಿಯೆಯನ್ನು ದುರ್ಬಲಗೊಳಿಸಿದೆ, ಪರಿಸರ ನಿಯಮಗಳ ಉಲ್ಲಂಘಕರಿಗೆ ಉತ್ತೇಜನ ನೀಡಿದೆ ಹಾಗೂ ಅಧಿಕಾರಿಗಳ ಅಪರಿಮಿತ ವಿವೇಚನಾ ಅಧಿಕಾರಗಳನ್ನು ನೀಡಿದೆ.

ಕೋವಿಡ್-19 ಸಾಂಕ್ರಾಮಿಕವು ಭಾರತವನ್ನು ಆಕ್ರಮಿಸಲು ಆರಂಭಿಸಿದ ಹೊತ್ತಿನಲ್ಲಿ, ಅಂದರೆ ಮಾರ್ಚ್ 12ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕರಡು ಇಐಎ ಅಧಿಸೂಚನೆಯನ್ನು ಹೊರಡಿಸಿತು. 60 ದಿನಗಳ ಅವಧಿಯಲ್ಲಿ  ಅದು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತು. ಸಾಂಕ್ರಾಮಿಕದಿಂದಾಗಿ ವಿಧಿಸಲಾಗಿರುವ ಲಾಕ್‍ ಡೌನ್‍ ನ ಹಿನ್ನೆಲೆಯಲ್ಲಿ ನೀಡಲಾದ ಅವಧಿಯಲ್ಲಿ ಪ್ರತಿಕ್ರಿಯಿಸಲು ಸಾರ್ವಜನಿಕರಿಗೆ ಸಾಧ್ಯವಾಗುವುದಿಲ್ಲ ಎಂಬುದಾಗಿ ಹಲವು ಬಾರಿ ಮನವಿಗಳನ್ನು ಮಾಡಿದ ಬಳಿಕ, ಸರಕಾರವು ಅಧಿಸೂಚನೆಯ ಅವಧಿಯನ್ನುಜೂನ್ 30ರವರೆಗೆ ವಿಸ್ತರಿಸಿತು. ದಿಲ್ಲಿ ಹೈಕೋರ್ಟ್‍ ಕರಡು ಪರಿಸರ ಪರಿಣಾಮ ಅಧ್ಯಯನ (ಇಐಎ)ಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸುವ ಅವಧಿಯನ್ನುಆಗಸ್ಟ್ 11ರವರೆಗೆ ವಿಸ್ತರಿಸಿತು. ಸಾರ್ವಜನಿಕರ ಸ್ಪಂದನೆಯ ಆಧಾರದಲ್ಲಿ ಅಧಿಸೂಚನೆಗೆ ತಿದ್ದುಪಡಿ ಮಾಡಬಹುದಾಗಿದೆ ಅಥವಾ ಸಾರ್ವಜನಿಕರ ಸಲಹೆಗಳನ್ನೇ ತಿರಸ್ಕರಿಸಬಹುದಾಗಿದೆ.

ಇಐಎ ಮೇಲೆ ಕಣ್ಣೇಕೆ?

ಪರಿಸರ ಅನುಮೋದನೆ ಪ್ರಕ್ರಿಯೆಗಳ ಮೇಲಿನ ದಾಳಿಯು ಅನಿರೀಕ್ಷಿತವೇನಲ್ಲ. ಕಳೆದ ಹಲವಾರು ವರ್ಷಗಳಿಂದ ಪರಿಸರ ಸಚಿವಾಲಯವು ಇಂತಹ ಪ್ರಕ್ರಿಯೆಗಳ ಬಗ್ಗೆ ಕೆಂಡಕಾರುತ್ತಲೇ ಬರುತ್ತಿತ್ತು. ಪರಿಸರ ಅನುಮೋದನೆ ಪ್ರಕ್ರಿಯೆಗಳಿಂದಾಗಿ ಕೈಗಾರಿಕಾ ಯೋಜನೆಗಳಲ್ಲಿನ ಪ್ರಗತಿಯು ಕುಂಠಿತಗೊಳ್ಳುತ್ತದೆ ಎಂದು ವಾದಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರವು ಈ ಪ್ರಕ್ರಿಯೆಗಳಿಗೆ ಸಂಪೂರ್ಣ ತಿಲಾಂಜಲಿ ನೀಡಲು ಅಥವಾ ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸಲು ಉತ್ಸುಕವಾಗಿದೆ. ಪರಿಸರ ಹಾನಿಯೆನ್ನುವುದು ಅಭಿವೃದ್ಧಿಗಾಗಿ ತೆರಬೇಕಾದ ಸ್ವೀಕಾರಾರ್ಹ ವೆಚ್ಚ ಎನ್ನುವಂತಾಗಿದೆ.

ನೂತನ ಇಐಎ ತಿದ್ದುಪಡಿಗಳು ಅಂಗೀಕಾರಗೊಂಡರೆ, ಭಾರತದಲ್ಲಿ ಕೈಗಾರಿಕಾ ಯೋಜನೆಗಳನ್ನು ಜಾರಿಗೊಳಿಸುವ ವಿಧಾನದಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ. ಕಲ್ಲಿದ್ದಲು ಗಣಿಗಳು, ರಿಯಲ್‍ ಎಸ್ಟೇಟ್ ಮತ್ತು ವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ಅಡೆತಡೆಗಳಿಲ್ಲದೆ ಅಂಗೀಕಾರ ದೊರೆಯುತ್ತದೆ.

ಭವಿಷ್ಯದ ಪರಿಣಾಮಗಳು

ಕೈಗಾರಿಕೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿದರೆ ಅವುಗಳನ್ನು ಹೇಗೆ ವರದಿ ಮಾಡಬೇಕು ಎನ್ನುವುದಕ್ಕೆ ಸಂಬಂಧಿಸಿದ ನೂತನ ಅಧಿಸೂಚನೆಯ ನಿಮಯವು ಹಾಸ್ಯಾಸ್ಪದವಾಗಿದೆ. ಈ ಸಂಭಾವ್ಯ ಉಲ್ಲಂಘನೆಗಳ ಬಗ್ಗೆ ಸರಕಾರಿ ಪ್ರಾಧಿಕಾರ ಅಥವಾ ಸ್ವತಃ ಕೈಗಾರಿಕೆಗಳೇ ವರದಿ ಮಾಡಬೇಕಾಗಿದೆ. ಉಲ್ಲಂಘನೆಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಲು ಯಾವುದೇ ಅವಕಾಶವಿಲ್ಲ. ತಮ್ಮ ಉಲ್ಲಂಘನೆಗಳನ್ನು ತಾವೇ ವರದಿ ಮಾಡುವ ಹೊರೆಯನ್ನುಉಲ್ಲಂಘಕರೇ ಹೊರಬೇಕಾಗಿದೆ.

Writer - ಶಾಶ್ವತ್ ಡಿ.ಸಿ., moneycontrol.com

contributor

Editor - ಶಾಶ್ವತ್ ಡಿ.ಸಿ., moneycontrol.com

contributor

Similar News