ಭಾರತದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಆಲಿಬಾಬಾ ಯುಸಿ ವೆಬ್ ಬ್ರೌಸರ್

Update: 2020-07-16 16:47 GMT

ಹೊಸದಿಲ್ಲಿ: ಭಾರತವು 59 ಚೀನಿ ಆ್ಯಪ್ ಗಳನ್ನು ನಿಷೇಧಿಸಿದ ನಂತರ ಆಲಿಬಾಬಾ ಗ್ರೂಪ್ ನ ಯುಸಿ ವೆಬ್ ಭಾರತದಲ್ಲಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇದರಲ್ಲಿ ಯುಸಿ ವೆಬ್ ಬ್ರೌಸರ್ ಕೂಡ ಸೇರಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ಗಲ್ವಾನ್ ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ನಂತರ ಭಾರತವು 59 ಚೀನಿ ಆ್ಯಪ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು.

ದಶಕಗಳ ಹಿಂದೆ ಭಾರತ ಪ್ರವೇಶಿಸಿದ ಯುಸಿ ವೆಬ್ , ನ್ಯೂಸ್ ಆ್ಯಪ್ ಒಂದನ್ನು ಮತ್ತು ವಿಮೇಟ್ ತುಣುಕು ವಿಡಿಯೋಗಳ ಆ್ಯಪನ್ನು ಹೊಂದಿದ್ದು, ಜುಲೈ 15ರ ಪ್ರಕಟನೆಯಲ್ಲಿ ‘ನೀವು ಕೆಲಸಗಳನ್ನು ಕಳೆದುಕೊಳ್ಳುತ್ತೀರಿ’ ಎಂದು ಉದ್ಯೋಗಿಗಳಿಗೆ ತಿಳಿಸಿರುವುದಾಗಿ ರಾಯ್ಟರ್ಸ್ ವರದಿ ತಿಳಿಸಿದೆ.

ಭಾರತದಲ್ಲಿ ಯುಸಿ ಬ್ರೌಸರ್ ಅನ್ನು 130 ಮಿಲಿಯನ್ ಜನರು ಬಳಸುತ್ತಿದ್ದರೆ, ಭಾರತದಲ್ಲಿ 100ಕ್ಕೂ ಹೆಚ್ಚು ನೇರ ಉದ್ಯೋಗಿಗಳಿದ್ದರೆ, ನೂರಾರು ಸಂಖ್ಯೆಯಲ್ಲಿ ಥರ್ಡ್ ಪಾರ್ಟಿ ಕೆಲಸಗಾರರಿದ್ದರು.

ಮತ್ತೊಂದೆಡೆ ಇ ಕಾಮರ್ಸ್ ಆ್ಯಪ್ ಕ್ಲಬ್ ಫ್ಯಾಕ್ಟರಿ ಭಾರತೀಯ ಮಾರಾಟಗಾರರಿಗೆ ನೀಡಬೇಕಾಗಿರುವ ಬಾಕಿ ಮೊತ್ತವನ್ನು ತಡೆಹಿಡಿದಿದೆ.

“ಮಾರಾಟಗಾರರೊಂದಿಗಿನ ಎಲ್ಲಾ ಬಾಕಿ ಮೊತ್ತವನ್ನು ಕ್ಲಬ್ ಫ್ಯಾಕ್ಟರಿ ಆ್ಯಪ್ ಮತ್ತು ವೆಬ್ ಸೈಟ್ ಮೇಲಿನ ನಿಷೇಧ ಒ ಹಿಂಪಡೆಯುವವರೆಗೆ ತಡೆಹಿಡಿಯಲಾಗಿದೆ” ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಭಾರತದಲ್ಲಿ ಕ್ಲಬ್ ಫ್ಯಾಕ್ಟರಿಯ ಸುಮಾರು 30 ಸಾವಿರ ಮಾರಾಟಗಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News