ದಿಲ್ಲಿ ಹಿಂಸಾಚಾರ: ನ್ಯಾಯಕ್ಕಾಗಿ 50 ಪ್ರಕರಣಗಳಲ್ಲಿ ವಾದಿಸುತ್ತಿರುವ ವಕೀಲ ಅಬ್ದುಲ್ ಗಫ್ಫಾರ್

Update: 2020-07-17 04:09 GMT

ಹೊಸದಿಲ್ಲಿ, ಜು.17: 2020ರ ಫೆಬ್ರವರಿಯಲ್ಲಿ ಸಂಭವಿಸಿದ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ 50 ಪ್ರಕರಣಗಳಲ್ಲಿ ಕ್ರಿಮಿನಲ್ ವಕೀಲ ಅಬ್ದುಲ್ ಗಫ್ಫಾರ್ ವಾದಿಸುತ್ತಿದ್ದಾರೆ ಮತ್ತು ಇದರಲ್ಲಿ ಅರ್ಧದಷ್ಟು ಪ್ರಕರಣಗಳಲ್ಲಿ ಅವರು ಯಾವುದೇ ಶುಲ್ಕಗಳನ್ನು ಪಡೆಯುತ್ತಿಲ್ಲ.

“ನಾನು ಅವರಿಂದ ಯಾವ ಶುಲ್ಕವನ್ನು ಪಡೆಯಬಹುದು?. ನಾನು ಯಾವುದನ್ನು ಸರಿಯಾದದ್ದು ಎಂದು ನಂಬುತ್ತೇನೋ ಅದನ್ನು ಮಾಡುತ್ತಿದ್ದೇನೆ” ಎಂದವರು ವಿವರಿಸುತ್ತಾರೆ.

2013ರಲ್ಲಿ ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ಸಂಭವಿಸಿದ ಗಲಭೆಯ ಸಂತ್ರಸ್ತರಾಗಿದ್ದಾರೆ ಈ 40 ವರ್ಷದ ವಕೀಲ. ಆ ಗಲಭೆಯಲ್ಲಿ ಅವರ ಸೋದರ ಮಾವ ಮೃತಪಟ್ಟಿದ್ದರು. ಇದೇ ಸಂದರ್ಭ ಅವರ ಕುಟುಂಬವನ್ನು ರಕ್ಷಿಸಿದ್ದು ಹಿಂದೂ ಸರಪಂಚರೊಬ್ಬರು.

ತನ್ನ ಮಾವನ ಸಾವಿನ ಹಾಗೆಯೇ ತನ್ನ ಕುಟುಂಬಕ್ಕೆ ಹಿಂದೂ ಸರಪಂಚ ಮಾಡಿದ ಸಹಾಯವೂ ನೆನಪಿನಲ್ಲೇ ಉಳಿದಿದೆ ಎಂದವರು ಹೇಳುತ್ತಾರೆ. ಅವರ ಬಳಿ ಬರುವವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರೆ, ಅವರ ಜೊತೆ ಕೆಲಸ ಮಾಡುವ ಕಿರಿಯ ವಕೀಲರಲ್ಲಿ ಅರ್ಧದಷ್ಟು ಹಿಂದೂಗಳಿದ್ದಾರೆ.

“ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ತನಿಖಾ ಏಜೆನ್ಸಿಯ ಪಾತ್ರ ಸಾಕ್ಷಿಗಳನ್ನು ಕಲೆ ಹಾಕುವುದು ಮತ್ತು ಕೋರ್ಟ್ ಮುಂದೆ ಹಾಜರುಪಡಿಸುವುದು ಮಾತ್ರ. ಮೊತ್ತಮೊದಲ ಬಾರಿಗೆ ನಾನು ತನಿಖಾ ಏಜೆನ್ಸಿ ತನ್ನದೇ ಸಿದ್ಧಾಂತವನ್ನು ಮುಂದಿಡುತ್ತಿರುವುದನ್ನು ನೋಡುತ್ತಿದ್ದೇನೆ. ವೈಯಕ್ತಿಕ ಅಭಿಪ್ರಾಯಗಳನ್ನು, ಊಹೆಗಳನ್ನು ಸೃಷ್ಟಿಸುವುದು ಮತ್ತು ಅದರದ್ದೇ ಆದ ನಿರೂಪಣೆಯನ್ನು ನೀಡುತ್ತಿರುವುದನ್ನು ನೋಡುತ್ತಿದ್ದೇನೆ” ಎಂದವರು ಹೇಳಿದರು.

ಫೆಬ್ರವರಿಯಲ್ಲಿ ನಡೆದ ಈ ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಹಿಂಸಾಚಾರದ ಸಂದರ್ಭ ತಾನು ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿದ್ದಾಗಿ ಅವರು ಹೇಳುತ್ತಾರೆ. ಆ ಮುಸ್ಲಿಂ ವ್ಯಕ್ತಿಯ ಸಹೋದರ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದ. ಸಹೋದರನ ಮೃತದೇಹ ಬೇಕಾದರೆ ಲಂಚ ನೀಡಬೇಕೆಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ ಎಂದು ಆತ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದ. ಹಿಂಸಾಚಾರದಲ್ಲಿ ಆತನ ಅಂಗಡಿಯನ್ನೂ ದುಷ್ಕರ್ಮಿಗಳು ನಾಶಗೈದಿದ್ದರಿಂದ ಜೀವನ ನಡೆಸಲೂ ಆತನ ಬಳಿ ಹಣವಿರಲಿಲ್ಲ. ಹಾಗಾಗಿ ಗಫ್ಫಾರ್ ಅವರೇ ಆತನಿಗೆ ಹಣ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News