ಆಸೀಸ್‌ನ ಪ್ರಾಥಮಿಕ ತಂಡದಲ್ಲಿ ಉಸ್ಮಾನ್ ಖ್ವಾಜಾ, ಸ್ಟೋನಿಸ್

Update: 2020-07-17 04:58 GMT

ಮೆಲ್ಬೋರ್ನ್: ಮುಂಬರುವ ಸೆಪ್ಟಂಬರ್‌ನಲ್ಲಿ ವೈಟ್‌ಬಾಲ್ ಕ್ರಿಕೆಟ್‌ಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯದ 26 ಮಂದಿಯ ಪ್ರಾಥಮಿಕ ತಂಡದಲ್ಲಿ ಅಗ್ರ ಸರದಿಯ ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ ಮತ್ತು ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್ ಸ್ಥಾನ ಪಡೆದಿದ್ದಾರೆ.

 ಕಳೆದ ಬೇಸಿಗೆಯಲ್ಲಿ ತವರಿನ ಸರಣಿಯಲ್ಲಿ ತೃಪ್ತಿಕರ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಇವರನ್ನು ಆಟಗಾರರ ನ್ಯಾಶನಲ್ ಕಂಟ್ರಾಕ್ಟ್ ಪಟ್ಟಿಯಿಂದ ಕೈ ಬಿಡಲಾಗಿತ್ತು. ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದ ಖ್ವಾಜಾ ಮತ್ತು ಸ್ಟೋನಿಸ್ ಇದೀಗ ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷ.

 ಪಶ್ಚಿಮ ಆಸ್ಟ್ರೇಲಿಯ ರಾಜ್ಯ ಗುತ್ತಿಗೆ ಆಟಗಾರರ ಪಟ್ಟಿಯಲ್ಲಿ ಅವಕಾಶ ಪಡೆಯದ ಖ್ಯಾತ ವೇಗಿ ಆ್ಯಂಡ್ರೋ ತೀ ಅವರನ್ನು ಕೂಡಾ ಪ್ರಾಥಮಿಕ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಕಳೆದ ವಿಶ್ವಕಪ್ ತಂಡದಲ್ಲಿದ್ದ ಶಾನ್ ಮಾರ್ಷ್ ಮತ್ತು ನಥಾನ್ ಕಾಲ್ಟರ್ ನೀಲ್ ಹಾಗೂ ವಿಕ್ಟೋರಿಯಾಬ್ಯಾಟ್ ್ಸಮನ್ ಪೀಟರ್ ಹ್ಯಾಂಡ್ಸ್‌ಕ್ಯಾಂಬ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

   ಆಸ್ಟ್ರೇಲಿಯದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ, ಇನ್ನು ಅಂತರ್‌ರಾಷ್ಟ್ರೀಯ ಕ್ಯಾಪ್ ಧರಿಸದ ಆಟಗಾರರಾದ ಡೇನಿಯಲ್ ಸ್ಯಾಮ್ಸ್, ರಿಲೆ ಮೆರೆಡಿತ್ ಮತ್ತು ಜೋಶ್ ಫಿಲಿಪ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

 ಎಡಗೈ ವೇಗಿ ಸ್ಯಾಮ್ಸ್ ಸಿಡ್ನಿ ಥಂಡರ್ ಪರ 30 ವಿಕೆಟ್ ಪಡೆದಿದ್ದಾರೆ. ಪ್ರಮುಖ ಸಿಡ್ನಿ ಸಿಕ್ಸರ್ಸ್‌ನ ವಿಕೆಟ್‌ಕೀಪರ್ - ಬ್ಯಾಟ್ಸ್‌ಮನ್ ಫಿಲಿಪ್ ಟ್ವೆಂಟಿ -20 ಪಂದ್ಯಾವಳಿಯಲ್ಲಿ 487 ರನ್ ಗಳಿಸಿದ್ದರು. ಇದರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧದ ಫೈನಲ್‌ನಲ್ಲಿ ಗಳಿಸಿದ್ದ ಅರ್ಧಶತಕವೂ ಸೇರಿದೆ.

 ವೇಗಿ ಮೆರೆಡಿತ್ ಹೊಬಾರ್ಟ್ ಹುರಿಕ್ಯಾನೆಸ್ ತಂಡದ ಪರ ಆರು ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ.

 ಕೋವಿಡ್-19 ಹರಡುವುದನ್ನು ತಡೆಯಲು ಪ್ರಯಾಣದ ನಿರ್ಬಂಧಗಳು ಮತ್ತು ಗಡಿ ನಿಯಂತ್ರಣಗಳಿಂದಾಗಿ ಗಾಯಾಳುಗಳ ಬದಲಿಗೆ ಆಟಗಾರರನ್ನು ಕಳುಹಿಸುವ ವ್ಯವಸ್ಥಾಪನಾ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯವು ಇಂಗ್ಲೆಂಡ್‌ಗೆ ದೊಡ್ಡ ತಂಡವನ್ನು ಕೊಂಡೊಯ್ಯುವ ಅವಶ್ಯಕತೆಯಿದೆ.

ಆಸ್ಟ್ರೇಲಿಯ ಈ ತಿಂಗಳ ಆರಂಭದಲ್ಲಿ ಮೂರು ಏಕದಿನ ಮತ್ತು ಮೂರು ಟ್ವೆಂಟಿ-20 ಪಂದ್ಯಗಳಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲು ನಿರ್ಧರಿಸಿತ್ತು ಆದರೆ ಕೋವಿಡ್-19 ಕಾರಣ ಸರಣಿಯನ್ನು ಮುಂದೂಡಲಾಯಿತು.

‘‘ಕ್ರಿಕೆಟ್ ಆಸ್ಟ್ರೇಲಿಯದ ಇಂಗ್ಲೆಂಡ್ ಪ್ರವಾಸವು ಮುಂದು ವರಿಯಬಹುದೆಂದು ದೃಢಪಡಿಸಿಕೊಳ್ಳಲು ಅಗತ್ಯದ ಎಲ್ಲವನ್ನು ಮಾಡಲಿದೆ’’ ಎಂದು ಆಯ್ಕೆ ಸಮಿತಿಯ ಟ್ರೆವರ್ ಹೊನ್ಸ್ ಹೇಳಿದರು.

‘‘ನಾವು ಇಸಿಬಿ ಮತ್ತು ಸರಕಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಪ್ರವಾಸದ ಬಗ್ಗೆ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು’’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News