ಮೊದಲ ದಿನವೇ 9.5 ಲಕ್ಷ ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿದ ಪುಸ್ತಕ !

Update: 2020-07-17 16:46 GMT

ನ್ಯೂಯಾರ್ಕ್, ಜು. 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಅವರ ಅಣ್ಣನ ಮಗಳು ಬರೆದ ಪುಸ್ತಕದ 9.5 ಲಕ್ಷ ಪ್ರತಿಗಳು ಬಿಡುಗಡೆಯಾದ ಮೊದಲ ದಿನವೇ ಮಾರಾಟವಾಗಿದೆ ಎಂದು ಪುಸ್ತಕದ ಪ್ರಕಾಶಕರು ಗುರುವಾರ ತಿಳಿಸಿದ್ದಾರೆ.

‘ಟೂ ಮಚ್ ಆ್ಯಂಡ್ ನೆವರ್ ಇನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟಡ್ ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ ಎಂಬ ತನ್ನ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ರ ಹಿರಿಯಣ್ಣ ಫ್ರೆಡ್ ಟ್ರಂಪ್ ಮಗಳು ಮೇರಿ ಟ್ರಂಪ್, ಡೊನಾಲ್ಡ್ ಟ್ರಂಪ್ ರನ್ನು ಅಹಂಕಾರಿ ಹಾಗೂ ಅಜ್ಞಾನಿ ಎಂಬುದಾಗಿ ಬಿಂಬಿಸಿದ್ದಾರೆ.

ಮುಂಚಿನ ಬೇಡಿಕೆಗಳು ಹಾಗೂ ಆಡಿಯೊ ಮತ್ತು ಡಿಜಿಟಲ್ ರೂಪಗಳು ಸೇರಿದಂತೆ 9,50,000 ಪ್ರತಿಗಳು ಮಂಗಳವಾರ ಮಾರಾಟವಾಗಿವೆ ಹಾಗೂ ಇದು ಪ್ರಕಾಶನ ಸಂಸ್ಥೆ ಸೈಮನ್ ಆ್ಯಂಡ್ ಶಸ್ಟರ್ ನ ದಾಖಲೆಯಾಗಿದೆ ಎಂದು ಪ್ರಕಾಶನ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅದೇ ವೇಳೆ, ಈ ಪುಸ್ತಕವು ಸುಳ್ಳುಗಳ ಸರಮಾಲೆ ಎಂಬುದಾಗಿ ಅಧ್ಯಕ್ಷರ ಶ್ವೇತಭವನ ಬಣ್ಣಿಸಿದೆ.

ಹೆಚ್ಚಿನ ಪ್ರತಿಗಳ ಮುದ್ರಣಕ್ಕಾಗಿ ಸೈಮನ್ ಆ್ಯಂಡ್ ಶಸ್ಟರ್ ಬೇಡಿಕೆ ಸಲ್ಲಿಸಿದೆ. ಅಮೆರಿಕದ ಮಾರುಕಟ್ಟೆಯೊಂದಕ್ಕೇ 11.5 ಲಕ್ಷ ಪ್ರತಿಗಳನ್ನು ಅದು ತೆಗೆದಿಟ್ಟಿದೆ. ಆನ್ಲೈನ್ ಮಾರಾಟ ಕಂಪೆನಿ ಅಮೆಝಾನ್ ನ ಕೆನಡ ಮತ್ತು ಆಸ್ಟ್ರೇಲಿಯಗಳ ಮಾರಾಟ ಪಟ್ಟಿಯಲ್ಲಿಯೂ ಪುಸ್ತಕವು ಮೊದಲ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News