130 ಟ್ವಿಟರ್ ಖಾತೆಗಳಿಗೆ ಕನ್ನ: ಟ್ವಿಟರ್ ಘೋಷಣೆ
ಲಾಸ್ ಏಂಜಲಿಸ್ (ಅಮೆರಿಕ), ಜು. 17: ಈ ವಾರ ನಡೆದ ಸೈಬರ್ ದಾಳಿಯಲ್ಲಿ, ಕನ್ನಗಾರರು ಸುಮಾರು 130 ಖಾತೆಗಳಿಗೆ ಕನ್ನ ಹಾಕಿದ್ದಾರೆ ಎಂದು ಟ್ವಿಟರ್ ಗುರುವಾರ ತಿಳಿಸಿದೆ. ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ಟ್ವಿಟರ್ ಖಾತೆಗಳನ್ನು ಕನ್ನಗಾರರು ತಮ್ಮ ವಶಕ್ಕೆ ಪಡೆದುಕೊಂಡು ಅವುಗಳ ಮೂಲಕ ಸಂದೇಶಗಳನ್ನು ಕಳುಹಿಸಿದ್ದಾರೆ.
ಸಣ್ಣ ಸಂಖ್ಯೆಯ ಟ್ವಿಟರ್ ಖಾತೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಅವುಗಳಿಂದ ಟ್ವೀಟ್ ಳನ್ನು ಕಳುಹಿಸುವಲ್ಲಿ ಕನ್ನಗಾರರು ಯಶಸ್ವಿಯಾಗಿದ್ದಾರೆ ಎಂದು ಟ್ವಿಟರ್ ತಿಳಿಸಿದೆ. ನಿರ್ದಿಷ್ಟ ಟ್ವಿಟರ್ ಖಾತೆಗಳಿಂದ ಖಾಸಗಿ ಮಾಹಿತಿಗಳನ್ನು ಪಡೆಯಲು ಕನ್ನಗಾರರಿಗೆ ಸಾಧ್ಯವಾಗಿದೆಯೇ ಎನ್ನುವುದನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಂಪೆನಿ ತಿಳಿಸಿದೆ.
ಬುಧವಾರ ನಡೆಸಿದ ಸೈಬರ್ ದಾಳಿಯಲ್ಲಿ, ವಂಚಕರು ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್, ಉದ್ಯಮಿ ಎಲಾನ್ ಮಸ್ಕ್, ಅಮೆಝಾನ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಬೆಝಾಸ್, ರೂಪದರ್ಶಿ ಕಿಮ್ ಕರ್ದಾಶಿಯನ್ ಸೇರಿದಂತೆ ಹಲವು ಗಣ್ಯರು ಮತ್ತು ಖ್ಯಾತನಾಮರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದರು.