ದಿಲ್ಲಿ ಹಿಂಸಾಚಾರ: ಪ್ರತ್ಯೇಕವಾದ ಬಿತ್ತಿದವರು ಯಾರು?

Update: 2020-07-18 04:56 GMT

ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಸಲ್ಲಿಸುತ್ತಿರುವ ಅಫಿಡವಿಟ್‌ಗಳು ತೀವ್ರ ಚರ್ಚೆಗೊಳಗಾಗುತ್ತಿವೆ. ದಿಲ್ಲಿ ಹಿಂಸಾಚಾರದಲ್ಲಿ ಪೊಲೀಸರ ತನಿಖೆಗಳು ನಿಷ್ಪಕ್ಷವಾಗಿಲ್ಲ ಎನ್ನುವುದು ಅವರ ಅಫಿಡವಿಟ್‌ನಿಂದ ಬಹಿರಂಗವಾಗುತ್ತಿವೆೆ ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಒಂದೆಡೆ ದಿಲ್ಲಿ ಹಿಂಸಾಚಾರದಲ್ಲಿ ತೊಂದರೆ ಅನುಭವಿಸಿದವರು, ನಾಶ, ನಷ್ಟ ಎದುರಿಸಿದವರು ಶೇ. 80ರಷ್ಟು ಮುಸ್ಲಿಮರು ಎನ್ನುವುದನ್ನು ಪೊಲೀಸರ ಅಫಿಡವಿಟ್ ಸ್ಪಷ್ಟ ವಾಗಿ ಉಲ್ಲೇಖಿಸುತ್ತದೆ. ಸಾವು, ಗಾಯಾಳುಗಳಲ್ಲಿ ಮುಸ್ಲಿಮರ ಸಂಖ್ಯೆಯೇ ಅಧಿಕ. ಇದೇ ಸಂದರ್ಭದಲ್ಲಿ ದಿಲ್ಲಿ ಹಿಂಸಾಚಾರದಲ್ಲಿ ಸಂಘಪರಿವಾರ ಕೇವಲ ಮುಸ್ಲಿಮರನ್ನಷ್ಟೇ ಅಲ್ಲ, ದಲಿತರನ್ನೂ ಗುರಿಯಾಗಿ ದಾಳಿ ನಡೆಸಿದೆ ಎನ್ನುವುದು ಅಫಿಡವಿಟ್‌ನಿಂದ ಬಹಿರಂಗವಾಗುತ್ತದೆ. ಆದರೆ ಪೊಲೀಸರು ಬಂಧಿಸಿದ ದುಷ್ಕರ್ಮಿಗಳನ್ನು ಗಮನಿಸಿದರೆ, ಸಂಘಪರಿವಾರ ಕಾರ್ಯಕರ್ತರನ್ನು ರಕ್ಷಿಸುವುದಕ್ಕೆ ಗರಿಷ್ಠ ಮಟ್ಟದಲ್ಲಿ ಶ್ರಮಿಸಿರುವುದು ಎದ್ದು ಕಾಣುತ್ತದೆ. ಅಷ್ಟೇ ಅಲ್ಲ, ಗಲಭೆಯಲ್ಲಿ ಹಿಂದೂಗಳಿಗೂ ಅಪಾರ ನಷ್ಟವಾಗಿದೆ ಎನ್ನುವುದನ್ನು ತೋರಿಸುವುದಕ್ಕಾಗಿಯೇ ಕೆಲವು ಕೃತಕ ಪ್ರಕರಣಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಹಾನಿಗೊಳಗಾದ ದೇವಸ್ಥಾನಗಳ ಸಂಖ್ಯೆಯ ಕುರಿತಂತೆ ಪೊಲೀಸರಲ್ಲಿರುವ ಗೊಂದಲಗಳು ಈ ಅನುಮಾನವನ್ನು ಪುಷ್ಟೀಕರಿಸುತ್ತದೆ. ಕಳೆದ ತಿಂಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಉತ್ತರಿಸಿದ್ದ ಪೊಲೀಸರು, ಗಲಭೆಯಲ್ಲಿ 2 ದೇವಸ್ಥಾನ ಮತ್ತು 13 ಮಸೀದಿಗಳಿಗೆ ಹಾನಿಯಾಗಿವೆ ಎಂದು ತಿಳಿಸಿದ್ದರು. ಆದರೆ ಇದೀಗ ಅಫಿಡವಿಟ್‌ನಲ್ಲಿ ದೇವಸ್ಥಾನಗಳ ಸಂಖ್ಯೆ ಏಕಾಏಕಿ 6ಕ್ಕೇರಿದೆ. ಹಲವು ಪ್ರಕರಣಗಳನ್ನು ಪೊಲೀಸರು ಮತ್ತು ಸಂಘಪರಿವಾರ ಸಂಘಟನೆಗಳು ಜೊತೆ ಸೇರಿ ಸೃಷ್ಟಿಸಿವೆ ಎಂದು ಸಾಮಾಜಿಕ ಕಾರ್ಯಕತರು ಅನುಮಾನಿಸುತ್ತಿದ್ದಾರೆ. ರಾಜಧಾನಿ ಶಾಲೆೆಯ ಬಳಿಯ ಹನುಮಾನ್ ದೇವಸ್ಥಾನ ಮತ್ತು ಶಿವವಿಹಾರದ ಬಳಿ ಇರುವ ಗೌರಿ ಶಂಕರ ಮಂದಿರಕ್ಕೆ ದುಷ್ಕರ್ಮಿಗಳು ಕಲ್ಲೆಸೆದಿರುವ ಬಗ್ಗೆ ಬಲಪಂಥೀಯ ವೆಬ್‌ಸೈಟ್ ಒಂದು ವರದಿ ಮಾಡಿತ್ತು. ಆದರೆ ಇದನ್ನು ಸ್ವತಃ ಆ ಮಂದಿರದ ಅರ್ಚಕರೇ ನಿರಾಕರಿಸಿದ್ದಾರೆ. ಅಂದರೆ, ದಿಲ್ಲಿ ಹಿಂಸಾಚಾರದಲ್ಲಿ ಭಾಗವಹಿಸಿದ ಆರೋಪಿಗಳನ್ನು ರಕ್ಷಿಸುವ ಭಾಗವಾಗಿ ಸಂತ್ರಸ್ತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಪೊಲೀಸರು ಪ್ರಯತ್ನಿಸುತ್ತಿರುವುದನ್ನು ಇದು ಹೇಳುತ್ತದೆ. ಕೆಲವು ದಿನಗಳ ಹಿಂದೆ, ದಿಲ್ಲಿಯ ಪೊಲೀಸ್ ಮುಖ್ಯಸ್ಥರೇ ‘ಸಂಘಪರಿವಾರ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸುತ್ತಿರುವುದರ ಬಗ್ಗೆ ಹಿಂದೂ ಮುಖಂಡರಿಗೆ ಅಸಮಾಧಾನವಿದೆ’ ಎಂದು ಇಲಾಖೆಯ ಸಿಬ್ಬಂದಿಯನ್ನು ಎಚ್ಚರಿಸಿದ್ದರು. ಅಂದರೆ, ಹಿಂಸಾಚಾರದಲ್ಲಿ ಭಾಗವಹಿಸಿದ ದುಷ್ಕರ್ಮಿಗಳನ್ನು ಬಂಧಿಸದಂತೆ ಪೊಲೀಸರಿಗೆ ರಾಜಕಾರಣಿಗಳಿಂದ, ಸಂಘಪರಿವಾರ ಸಂಘಟನೆಗಳಿಂದ ನೇರ ಒತ್ತಡಗಳಿರುವುದು ಇದರಿಂದ ಬಹಿರಂಗವಾಗುತ್ತದೆ. ಅವರನ್ನು ಸಮಾಧಾನಿಸುವುದಕ್ಕಾಗಿಯೇ ಸಂತ್ರಸ್ತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಪೊಲೀಸರಿಂದ ನಡೆಯುತ್ತಿದೆಯೆ ಎಂದು ಸಾರ್ವಜನಿಕರು ಅನುಮಾನಿಸುವಂತಾಗಿದೆ.

ದಿಲ್ಲಿ ಹಿಂಸಾಚಾರದ ತನಿಖೆಯ ಅತ್ಯಂತ ಆಘಾತಕಾರಿ ಅಂಶವೆಂದರೆ, ಹಿಂಸಾಚಾರವನ್ನು ಪೊಲೀಸರು ಸಿಎಎ ವಿರೋಧಿ ಪ್ರತಿಭಟನಾಕಾರರ ತಲೆಗೆ ಕಟ್ಟಲು ಹವಣಿಸಿರುವುದು. ದಿಲ್ಲಿ ಹಿಂಸಾಚಾರ ನಡೆದಿರುವುದು, ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ದಮನಿಸುವುದಕ್ಕಾಗಿ. ಅವರನ್ನು ಬೆದರಿಸಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡುವುದೇ ಹಿಂಸಾಚಾರಕ್ಕೆ ಕರೆ ಕೊಟ್ಟವರ ಗುರಿಯಾಗಿತ್ತು. ಆದರೆ ಪೊಲೀಸರು ವ್ಯತಿರಿಕ್ತವಾದ ನಿರ್ಧಾರಕ್ಕೆ ಬಂದಿದ್ದಾರೆ. ಪೊಲೀಸರ ಪ್ರಕಾರ, ಸಿಎಎ ಕಾಯ್ದೆಯಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆ. ಈಗಾಗಲೇ ಹಲವು ಆರೋಪಿಗಳಿಂದ ಅದೇ ದಾಟಿಯ ಹೇಳಿಕೆಗಳನ್ನೂ ಪೊಲೀಸರು ದಾಖಲಿಸಿದ್ದಾರೆ ಮತ್ತು ಹಿಂಸಾಚಾರಕ್ಕೆ ಪ್ರೇರೇಪಿಸಿದ ಆರೋಪವನ್ನು ಸಿಎಎ ಕಾಯ್ದೆಯ ವಿರುದ್ಧ ಹೋರಾಟ ನಡೆಸಿದ್ದ ವಿದ್ಯಾರ್ಥಿ ಮುಖಂಡರು, ಸಾಮಾಜಿಕ ಕಾರ್ಯಕರ್ತರ ತಲೆಗೆ ಕಟ್ಟಲು ಪೊಲೀಸರು ಯತ್ನಿಸಿದ್ದಾರೆ. ಪೊಲೀಸರು ತಮ್ಮ ಅಫಿಡವಿಟ್‌ನಲ್ಲಿ, ‘ಸಿಎಎ ವಿರೋಧಿ ಪ್ರತಿಭಟನೆಯ ಮುಖ್ಯ ಉದ್ದೇಶವೇ ಪ್ರತ್ಯೇಕವಾದವಾಗಿದೆ’ ಎಂದು ತಿಳಿಸಿದ್ದಾರೆ. ‘‘ಎರಡು ಸಮುದಾಯಗಳ ನಡುವೆ ಗಲಭೆ ಸೃಷ್ಟಿಸುವುದು ಅಥವಾ ಕಾನೂನು ಬದ್ಧವಾಗಿ ರಚನೆಯಾದ ಸರಕಾರದ ವಿರುದ್ಧ ಸಶಸ್ತ್ರ ಬಂಡುಕೋರರನ್ನು ಉತ್ತೇಜಿಸುವ ಮೂಲಕ ಪ್ರತ್ಯೇಕತಾವಾದಿ ಚಳವಳಿಯನ್ನು ಬೆಳೆಸುವುದು ಇದರ ಉದ್ದೇಶ’’ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

ಸಿಎಎ ವಿರುದ್ಧ ನಡೆದಿರುವ ಹೋರಾಟ ಯಾವುದೇ ಒಂದು ನಿರ್ದಿಷ್ಟ ಧರ್ಮೀಯರು ಆರಂಭಿಸಿರುವುದಲ್ಲ. ಈ ಹೋರಾಟ ಮೊದಲು ಆರಂಭವಾದದ್ದೇ ಅಸ್ಸಾಮಿನಲ್ಲಿ. ಅವರೆಲ್ಲರೂ ಬಹುತೇಕ ಮುಸ್ಲಿಮೇತರರು. ಸರಕಾರ ನಡೆಸಿದ ಅಸಾಂವಿಧಾನಿಕವಾದ ಎನ್‌ಆರ್‌ಸಿಯಿಂದಾಗಿ ಅಸ್ಸಾಮಿನಲ್ಲಿ ಲಕ್ಷಾಂತರ ಜನರು ತಮ್ಮ ಪೌರತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇವರೆಲ್ಲರೂ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಲ್ಲ. ಬೇರೆ ಬೇರೆ ಜಾತಿ ಧರ್ಮಕ್ಕೆ ಸೇರಿದವರಾಗಿದ್ದಾರೆ. ಧರ್ಮದ ಹೆಸರಿನಲ್ಲಿ ಈ ದೇಶವನ್ನು ಒಡೆದಿರುವುದು ‘ಸಿಎಎ ಕಾಯ್ದೆ’ಯೇ ಹೊರತು, ಈ ಕಾಯ್ದೆಯ ವಿರುದ್ಧ ನಡೆದ ಹೋರಾಟಗಳಲ್ಲ. ‘ನಾವೆಲ್ಲರೂ ಈ ದೇಶದ ಪ್ರಜೆಗಳು’ ಎನ್ನುವ ವಾದವನ್ನು ಹಿಡಿದೆತ್ತಿ ರಾಷ್ಟ್ರ ಧ್ವಜಗಳ ಜೊತೆಗೆ ದೇಶಾದ್ಯಂತ ಜನರು ಬೀದಿಗಿಳಿದರು. ಅವರೆಲ್ಲರ ಉದ್ದೇಶ ‘ತಮ್ಮ ಪೌರತ್ವವನ್ನು ಸಂಶಯಿಸುವುದನ್ನು ನಿಲ್ಲಿಸಿ’ ಎನ್ನುವ ಬೇಡಿಕೆ ಹೊರತು, ಈ ದೇಶವನ್ನು ಒಡೆಯುವುದಾಗಿರಲಿಲ್ಲ. ಸಿಎಎ ಕಾಯ್ದೆ ಈ ದೇಶವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಯತ್ನಿಸಿತು. ಪ್ರತಿಭಟನಾಕಾರರನ್ನು ಅವರು ಧರಿಸಿದ ಬಟ್ಟೆಯಿಂದ ಗುರುತಿಸಲು ಪ್ರಯತ್ನಿಸಿತು.

ಆದರೆ ಸಿಎಎ ಕಾಯ್ದೆಯ ವಿರುದ್ಧ ದೇಶದ ಹಿಂದೂ-ಮುಸ್ಲಿಮರೆಲ್ಲರೂ ಒಂದಾಗಿ ಪ್ರತಿಭಟನೆ ನಡೆಸಿದರು. ರಾಜಕಾರಣಿಗಳ ಒಡೆಯುವ ಪ್ರಯತ್ನ, ಸಿಎಎ ಪ್ರತಿಭಟನಾಕಾರರ ದೆಸೆಯಿಂದಾಗಿ ಭಾಗಶಃ ವಿಫಲವಾಯಿತು. ದಿಲ್ಲಿ ಹಿಂಸಾಚಾರವನ್ನು ಬಳಸಿಕೊಂಡು, ಸಿಎಎ ವಿರುದ್ಧದ ಪ್ರತಿಭಟನೆಯನ್ನು ದಮನಿಸಲು ಸರಕಾರ ಪೊಲೀಸರನ್ನು ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಆದುದರಿಂದಲೇ, ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಆರೋಪಿಗಳಿಗೆ ಶಿಕ್ಷೆಯಾಗುವುದು ಪಕ್ಕಕ್ಕಿರಲಿ, ಸಂತ್ರಸ್ತರೇ ಜೈಲು ಸೇರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಕಾನೂನನ್ನು ಬಳಸಿಕೊಂಡು ನೋವುಂಡವರ ಎದೆಗೆ ಮತ್ತೊಮ್ಮೆ ಬೆಂಕಿ ಹಾಕಲಾಗಿದೆ. ದಿಲ್ಲಿ ಹಿಂಸಾಚಾರ ನಡೆದಿರುವುದು ಈ ದೇಶದ ಸಂವಿಧಾನವನ್ನು ದಮನಿಸುವುದಕ್ಕಾಗಿ ಮತ್ತು ಇದೀಗ ಅದೇ ಹಿಂಸಾಚಾರವನ್ನು ಬಳಸಿಕೊಂಡು ಪೊಲೀಸರ ಮೂಲಕ ದೇಶದ ಸಂವಿಧಾನವನ್ನು ಬಂಧಿಸಿ ಜೈಲಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ಕೊರೋನ, ಲಾಕ್‌ಡೌನ್ ಮರೆಯಲ್ಲಿ ನಡೆಯುತ್ತಿರುವ ಈ ಸಂಚನ್ನು ಒಂದಾಗಿ ಪ್ರತಿಭಟಿಸದೇ ಇದ್ದರೆ, ದೇಶದ ಭವಿಷ್ಯ ಇನ್ನಷ್ಟು ಭೀಕರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News