ಪೊಲೀಸ್ ಅಧಿಕಾರಿಯ ಥಳಿಸಿ ಹತ್ಯೆ ಪ್ರಕರಣದ ಆರೋಪಿಯೊಂದಿಗೆ ಕಾಣಿಸಿಕೊಂಡ ಉ.ಪ್ರ. ಬಿಜೆಪಿ ನಾಯಕ
ಲಕ್ನೋ: ಬುಲಂದ್ ಶಹರ್ ಜಿಲ್ಲೆಯಲ್ಲಿ 2018ರಲ್ಲಿ ಉದ್ರಿಕ್ತ ಗುಂಪೊಂದು ಪೊಲಿಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ಹತ್ಯೆಗೈದ ಘಟನೆಯಲ್ಲಿ ಸಂಚು ಹೂಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಶಿಖರ್ ಅಗರ್ವಾಲ್ ಎಂಬಾತನಿಗೆ ಬುಲಂದ್ ಶಹರ್ ಬಿಜೆಪಿ ಅಧ್ಯಕ್ಷ ಅನಿಲ್ ಸಿಸೊಡಿಯಾ ಜುಲೈ 14ರಂದು ನಡೆದ ಸಮಾರಂಭದಲ್ಲಿ ಪ್ರಮಾಣಪತ್ರ ನೀಡುತ್ತಿರುವ ಚಿತ್ರ ವಿವಾದಕ್ಕೀಡಾಗಿದೆ.
ಬಿಜೆಪಿಯ ಬುಲಂದ್‌ಶಹರ್ ಅಧ್ಯಕ್ಷ ಅನಿಲ್ ಸಿಸೋಡಿಯ ಜುಲೈ 14ರಂದು ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಗಿ ಜಾಗೃತಿ ಅಭಿಯಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸಿಸೋಡಿಯಾ ಅವರು ಮಾಜಿ ಬಿಜೆಪಿ ಯೂತ್ ವಿಂಗ್‌ನ ಅಧ್ಯಕ್ಷ ಹಾಗೂ 2018ರಲ್ಲಿ ಬುಲಂದ್‌ಶಹರ್‌ನಲ್ಲಿ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್‌ರನ್ನು ಹತ್ಯೆಗೈದ ಸಂಚಿನಲ್ಲಿ ಆರೋಪಿಯಾಗಿರುವ ಶಿಖರ್ ಅಗರ್ವಾಲ್‌ಗೆ ಸರ್ಟಿಫಿಕೇಟ್‌ನ್ನು ಹಸ್ತಾಂತರಿಸಿದ್ದಾರೆ. ಈ ಫೋಟೊ ಇದೀಗ ಭಾರೀ ವೈರಲ್ ಗಿದೆ. ಅಗರ್ವಾಲ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ.
ಅಗರ್ವಾಲ್‌ಗೆ ಸರ್ಟಿಫಿಕೇಟ್ ನೀಡುವಾಗ ಆತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗಿತ್ತು.
2018ರಲ್ಲಿ ಇನ್ಸ್‌ಪೆಕ್ಟರ್ ಸುಭೋಧ್ ಕುಮಾರ ಸಿಂಗ್ ಮೇಲೆ ಸುಮಾರು 400ರಷ್ಟಿದ್ದ ಜನರ ಗುಂಪು ದಾಳಿ ನಡೆಸಿತ್ತು. ಸಿಂಗ್ ಅವರು ಅಕ್ರಮ ಗೋ ಹತ್ಯೆ ನಡೆದಿದೆ ಎಂದು ವದಂತಿಯ ಹರಡಿದ ಬಳಿಕ ಉಂಟಾಗಿರುವ ಹಿಂಸಾಚಾರ ನಡೆದ ಪ್ರದೇಶದಲ್ಲಿ ಶಾಂತಿ ಪುನರ್‌ಸ್ಥಾಪಿಸಲು ಸ್ಥಳಕ್ಕೆ ಭೇಟಿ ನೀಡಿದ್ದರು. ವ್ಯಕ್ತಿಯೊಬ್ಬನು ಕೊಡಲಿಯಿಂದ ನನ್ನ ಎರಡು ಬೆರಳನ್ನು ಕತ್ತರಿಸಿದ್ದ ಎಂದು ಪೊಲೀಸ್‌ನೊಬ್ಬ ಹೇಳಿದ್ದು, ಬಳಿಕ,ಪೊಲೀಸ್ ಅಧಿಕಾರಿಯ ತಲೆಗೆ ಹಲ್ಲೆ ಮಾಡಿದ್ದಾನೆ. ಇತರರು ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಸಿಂಗ್ ಮೃತದೇಹ ಬಳಿಕ ಗದ್ದೆಯಲ್ಲಿ ಅನಾಥವಾಗಿದ್ದ ಪೊಲೀಸ್ ವಾಹನದಲ್ಲಿ ಪತ್ತೆಯಾಗಿತ್ತು.
"ಬಿಜೆಪಿಗೂ ಸಂಘಟನೆಗೂ ಏನು ಸಂಬಂಧವಿಲ್ಲ. ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಇದಕ್ಕಿಂತ ಹೆಚ್ಚು ಮಾತನಾಡಲು ಏನು ಇಲ್ಲ'' ಎಂದು ಸಿಸೋಡಿಯಾ ಹೇಳಿದ್ದಾರೆ.