ನರರೋಗ ಚಿಕಿತ್ಸೆಗೆ ನಾನಾವತಿ ಆಸ್ಪತ್ರೆಗೆ ವರವರ ರಾವ್ ಸ್ಥಳಾಂತರ
ಮುಂಬೈ, ಜು.19: ಕವಿ ಹಾಗೂ ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ವರವರರಾವ್ ಅವರನ್ನು ನರರೋಗ ಹಾಗೂ ಮೂತ್ರಾಂಗ ಚಿಕಿತ್ಸೆಗಾಗಿ ರವಿವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
80ರ ವಯಸ್ಸಿನ ರಾವ್ ಅವರ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಬಳಿಕ ಗುರುವಾರದಿಂದ ಸರಕಾರಿ ಸ್ವಾಮ್ಯದ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು.
ಕೋವಿಡ್-19 ಚಿಕಿತ್ಸೆಯ ವೇಳೆ ವೈದ್ಯರು ರಾವ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದು,ನರರೋಗ ಸಮಸ್ಯೆಯನ್ನು ಪರೀಕ್ಷಿಸಬೇಕಾಗಿದೆ ಎಂದಿದ್ದರು. ಸರಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆಯ ನರರೋಗ ತಜ್ಞರು ಶುಕ್ರವಾರ ರಾವ್ ಅವರ ತಪಾಸಣೆ ನಡೆಸಿದ್ದರು. ಅವರು ಗಂಭೀರ ಮಾನಸಿಕ ಅಶಾಂತಿಯಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ರಾವ್ ಅವರು ಕೋವಿಡ್-19 ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಎದೆ ಎಕ್ಸ್‌ರೇ ಹಾಗೂ ಇಸಿಜಿ ಸಾಮಾನ್ಯವಾಗಿದೆ.ಅವರಿಗೆ ಸಿಟಿ ಸ್ಕಾನಿಂಗ್ ಕೂಡ ಮಾಡಲಾಗಿದೆ. ಅವರನ್ನು ನರರೋಗ ಹಾಗೂ ಮೂತ್ರಾಂಗ ಚಿಕಿತ್ಸೆಗಾಗಿ ರವಿವಾರ ಬೆಳಗ್ಗಿನ ಜಾವ ಖಾಸಗಿ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.