2,426 ಸುಸ್ತಿದಾರರಿಂದ ದೇಶದ ಬ್ಯಾಂಕ್ ಗಳಿಗೆ 1.47 ಲಕ್ಷ ಕೋಟಿ ರೂ. ಬಾಕಿ: ಬ್ಯಾಂಕ್ ಯೂನಿಯನ್ ಮಾಹಿತಿ

Update: 2020-07-19 17:21 GMT

ಹೊಸದಿಲ್ಲಿ, ಜು.19: 2,426 ಉದ್ದೇಶಪೂರ್ವಕ ಸುಸ್ತಿದಾರರಿಂದ ಸಾರ್ವಜನಿಕ ಕ್ಷೇತ್ರದ 17 ಬ್ಯಾಂಕ್ ಗಳಿಗೆ 1.47 ಲಕ್ಷ ಕೋಟಿ ಸಾಲ ಮರುಪಾವತಿಗೆ ಬಾಕಿಯಿದೆ ಎಂದು ಪ್ರಮುಖ ಬ್ಯಾಂಕ್ ಯೂನಿಯನ್ ಮಾಹಿತಿ ನೀಡಿದೆ.

ಮೆಹುಲ್ ಚೊಕ್ಸಿ ನಿರ್ದೇಶಕನಾಗಿರುವ ಗೀತಾಂಜಲಿ ಜೆಮ್ಸ್ ಸಂಸ್ಥೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 4,644 ಕೋಟಿ ರೂ. ಪಾವತಿಸಲು ಬಾಕಿಯಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗೀತಾಂಜಲಿ ಸಮೂಹ ಸಂಸ್ಥೆಯ ಭಾಗವಾಗಿರುವ ಗಿಲಿ ಇಂಡಿಯಾ ಮತ್ತು ನಕ್ಷತ್ರ ಬ್ರಾಂಡ್ ಗಳೂ ಕ್ರಮವಾಗಿ 1,447 ಕೋಟಿ ರೂ. ಮತ್ತು 1,109 ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡಿವೆ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಹೇಳಿದೆ.

ಎಬಿಜಿ ಶಿಪ್ಯಾರ್ಡ್, ಆರ್ ಇಐ ಆಗ್ರೊ, ರುಚಿ ಸೋಯಾ ಇಂಡಸ್ಟ್ರೀಸ್, ವಿನ್ಸಮ್ ಡೈಮಂಡ್ಸ್ ಆ್ಯಂಡ್ ಜುವೆಲ್ಲರಿ, ಕುಡೋಸ್ ಕೆಮೀ, ಕೋಸ್ಟಲ್ ಪ್ರೊಜೆಕ್ಟ್ ಸಹಿತ 500 ಕೋಟಿ ರೂ. ಮತ್ತು ಹೆಚ್ಚಿನ ಮೊತ್ತ ಬಾಕಿ ಇರಿಸಿದ 33 ಸಂಸ್ಥೆಗಳಿಂದ 32,737 ಕೋಟಿ ರೂ. ಸಾಲ ಬಾಕಿಯಿದೆ. ಇದರಲ್ಲಿ ಭಾರತದ ಬೃಹತ್ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ  685 ಉದ್ದೇಶಪೂರ್ವಕ ಸುಸ್ತಿದಾರರು 43,887 ಕೋಟಿ ರೂ. ಪಾವತಿಗೆ ಬಾಕಿ ಇರಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 325 ಸುಸ್ತಿದಾರರು 22,370 ಕೋಟಿ ರೂ. ಪಾವತಿಸಲು ಬಾಕಿಯಿದೆ. ಬ್ಯಾಂಕ್ ಆಫ್ ಬರೋಡಾಕ್ಕೆ 355 ಸುಸ್ತಿದಾರರು 14,661 ಕೋಟಿ ರೂ, ಬ್ಯಾಂಕ್ ಆಫ್ ಇಂಡಿಯಾಕ್ಕೆ 184 ಸುಸ್ತಿದಾರರು 11,250 ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡಿದ್ದಾರೆ.

    ‘ಸೆಂಟ್ರಲ್ ರೆಪೊಸಿಟರಿ ಆಫ್ ಇನ್ಫಾರ್ಮೇಶನ್ ಆನ್ ಲಾರ್ಜ್ ಕ್ರೆಡಿಟ್ (ಸಿಆರ್ಐಎಲ್ಸಿ)ಯ ವರದಿಯ ಆಧಾರದಲ್ಲಿ ಈ ಅಂಕಿ ಅಂಶವನ್ನು ನೀಡಲಾಗಿದೆ ಎಂದು ಬ್ಯಾಂಕ್ ಯೂನಿಯನ್ ಹೇಳಿದೆ.

ಭಾರತದಲ್ಲಿ ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಿದ ದಿನದ (ಜುಲೈ 19, 1969) 51ನೇ ವಾರ್ಷಿಕೋತ್ಸವದ ಸಂದರ್ಭ ಬ್ಯಾಂಕ್ ಯೂನಿಯನ್ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ ಬಿಡುಗಡೆಗೊಳಿಸಿದೆ. ಖಾಸಗಿ ಸಂಸ್ಥೆಗಳಿಂದ ಬರಬೇಕಿರುವ ಸಾಲದ ಮೊತ್ತ ಆತಂಕಕಾರಿಯಾಗಿ ಹೆಚ್ಚುತ್ತಿರುವುದು ದೇಶದ ಬ್ಯಾಂಕ್ ಗಳು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಾಲ ವಸೂಲಿ ಮಾಡಿದರೆ ನಮ್ಮ ಬ್ಯಾಂಕ್ ಗಳು ದೇಶದ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಬಹುದು ಎಂದು ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಮ್ ಹೇಳಿದ್ದಾರೆ.

 ಸರಕಾರ ಬಡಜನರಿಗೆ ತೊಂದರೆ ನೀಡಿ ಆಪ್ತ ಬಂಡವಾಳಶಾಹಿಗಳನ್ನು ಬೆಂಬಲಿಸುತ್ತಿದೆ ಎಂದು ಟಿಎಂಸಿ ನಾಯಕ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರಿಯಾನ್ ಆರೋಪಿಸಿದ್ದಾರೆ. ಜನಸಾಮಾನ್ಯರ 1,47,350 ಕೋಟಿ ರೂಪಾಯಿಯನ್ನು ಲೂಟಿ ಮಾಡಲಾಗಿದೆ. ಇದು ಕೆಲಸವಿಲ್ಲದ ವಲಸೆ ಕಾರ್ಮಿಕರಿಗೆ ಲಕ್ಷಾಂತರ ರೂಪಾಯಿ ವರ್ಗಾಯಿಸಲು ಸಾಕಾಗುತ್ತಿತ್ತು ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News