ಸುಳ್ಳುಗಳ ಸಾಂಸ್ಥೀಕರಣ: ಕೇಂದ್ರ ಸರಕಾರದ ವಿರುದ್ಧ ರಾಹುಲ್ ವಾಗ್ದಾಳಿ

Update: 2020-07-19 17:53 GMT

ಹೊಸದಿಲ್ಲಿ, ಜು.19: ಕೇಂದ್ರ ಸರಕಾರದ ವಿರುದ್ಧದ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸರಕಾರ ಸುಳ್ಳುಗಳನ್ನು ಸಾಂಸ್ಥೀಕರಣಗೊಳಿಸಿದೆ ಎಂದು ಆರೋಪಿಸಿದ್ದಾರೆ. ಅರ್ಥವ್ಯವಸ್ಥೆ, ಕೊರೋನ ವ್ಯಾಧಿ ಹಾಗೂ ಚೀನಾದೊಂದಿಗಿನ ಗಡಿ ವಿವಾದವನ್ನು ಮೋದಿ ಸರಕಾರ ಅಸಮರ್ಪಕವಾಗಿ ನಿರ್ವಹಿಸಿದ್ದರಿಂದ ಭಾರತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ಸರಕಾರ ಕೋವಿಡ್-19ರ ಪರೀಕ್ಷೆಯನ್ನು ನಿಯಂತ್ರಿಸಿದೆ ಮತ್ತು ಮೃತರ ಸಂಖ್ಯೆಯ ಬಗ್ಗೆ ಸುಳ್ಳು ಹೇಳಿದೆ. ಜಿಡಿಪಿಯನ್ನು ಹೊಸ ರೀತಿ ಲೆಕ್ಕಾಚಾರ ಹಾಕಿ ಸುಳ್ಳು ಹೇಳಿದೆ. ಚೀನಾದ ಅತಿಕ್ರಮಣದ ಬಗ್ಗೆ ಪ್ರಶ್ನಿಸಿದರೆ ಮಾಧ್ಯಮಗಳನ್ನು ಬೆದರಿಸುವ ಮೂಲಕ ಸುಳ್ಳು ಹೇಳುತ್ತಿದೆ. ಈ ಮೋಸ ಶೀಘ್ರ ಬಯಲಾಗಲಿದ್ದು ಭಾರತ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ರವಿವಾರ ಬೆಳಿಗ್ಗೆ ರಾಹುಲ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಕೊರೋನ ವೈರಸ್ ಪ್ರಕರಣ 1 ಮಿಲಿಯನ್ ದಾಟಿ ಗಗನಮುಖಿಯಾಗುತ್ತಿರುವಂತೆ, ಸಾವಿನ ಸಂಖ್ಯೆಯಲ್ಲಿ ಮಾತ್ರ ನಿಗೂಢತೆ ಇದೆ ಎಂದು ‘ವಾಷಿಂಗ್ಟನ್ ಪೋಸ್ಟ್ ‘ನಲ್ಲಿ ಪ್ರಕಟವಾದ ಲೇಖನವನ್ನು ಟ್ವೀಟ್ ಜೊತೆಗೆ ಅವರು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News