ಒಂದು ವರ್ಷ ಪಯಣದ ನಂತರ ಮಹಾರಾಷ್ಟ್ರದಿಂದ ಕೇರಳ ತಲುಪಿದ ಬಾಹ್ಯಾಕಾಶ ಉಪಕರಣ ಹೊತ್ತ ಟ್ರಕ್

Update: 2020-07-20 06:55 GMT
Photo: Twitter(@ANI)

ತಿರುವನಂತಪುರಂ: ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿನ ಬಾಹ್ಯಾಕಾಶ ಸಂಶೋಧನಾ ಯೋಜನೆಯೊಂದಕ್ಕೆ ಅಗತ್ಯವಿರುವ ಅತ್ಯಾಧುನಿಕ ಘನ ಉಪಕರಣಗಳನ್ನು ಹೊತ್ತು ಕಳೆದ ವರ್ಷದ ಜುಲೈ 8ರಂದು ಮಹಾರಾಷ್ಟ್ರದ ನಾಸಿಕ್‍ನಿಂದ ಹೊರಟಿದ್ದ ಟ್ರಕ್ ರವಿವಾರ ಕೇರಳ ತಲುಪಿದೆ.

"ನಾವು ನಾಲ್ಕು ರಾಜ್ಯಗಳನ್ನು ಹಾದು ಒಂದು ವರ್ಷದ ನಂತರ ತಿರುವನಂತಪುರಂ ತಲುಪಿದ್ದೇವೆ,'' ಎಂದು ಟ್ರಕ್‍ನಲ್ಲಿದ್ದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಟ್ರಕ್ ದಿನವೊಂದಕ್ಕೆ ಐದು ಕಿಮೀ ದೂರ ಕ್ರಮಿಸುತ್ತಿತ್ತು. ಅದರಲ್ಲಿ 32  ಮಂದಿ ಸಿಬ್ಬಂದಿಯಿದ್ದರು. ಟ್ರಕ್‍ನಲ್ಲಿದ್ದ ಯಂತ್ರದ ತೂಕ ಸುಮಾರು 70 ಟನ್ ಆಗಿದ್ದು ಅದರ ಉದ್ದ 7.5 ಮೀಟರ್ ಹಾಗೂ ಅಗಲ 6.65 ಮೀಟರ್ ಆಗಿದೆ. ನಾಸಿಕ್‍ನಲ್ಲಿ ತಯಾರಿಗೊಂಡ ಈ ಉಪಕರಣವನ್ನು ಸದ್ಯದಲ್ಲಿಯೇ ಬಾಹ್ಯಾಕಾಶ ಸಂಶೋಧನೆಗೆ ಬಳಸಲಾಗುವುದು.

ಹಗ್ಗಗಳ ಸಹಾಯದಿಂದ ಈ ಉಪಕರಣವನ್ನು ಟ್ರಕ್‍ನಲ್ಲಿರಿಸಲಾಗಿದ್ದು ಎದುರುಗಡೆ ಹಾಗೂ ಹಿಂದುಗಡೆ ಎರಡು ಆ್ಯಕ್ಸಲ್‍ಗಳಿವೆ, ತಲಾ 32 ಚಕ್ರಗಳಿದ್ದು  ಪುಲ್ಲರ್‍ಗೆ 10 ಚಕ್ರಗಳಿವೆ. ಡ್ರಾಪ್ ಡೆಕ್ ತೂಕ 10 ಟನ್ ಆಗಿದ್ದರೆ,  ಯಂತ್ರದ ಒಟ್ಟು ತೂಕ 78 ಟನ್ ಆಗಿದ್ದು ಎರಡು ಆ್ಯಕ್ಸಲ್‍ಗಳು ಈ ತೂಕವನ್ನು ಸಮಾನವಾಗಿ ಹಂಚಿಕೊಂಡಿವೆ.

ಟ್ರಕ್‍ನಲ್ಲಿರುವ ಯಂತ್ರದ ಹೆಸರು ಏರೋಸ್ಪೇಸ್ ಹೊರಿಝಾಂಟಲ್ ಆಟೋಕ್ಲೇವ್ ಆಗಿದ್ದು ಅದನ್ನು ಘನರಹಿತ ವಸ್ತು ನಿರ್ಮಾಣಕ್ಕೆ ಬಳಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News