ತಿರುಪತಿ ದೇವಸ್ಥಾನದ ಮಾಜಿ ಮುಖ್ಯ ಅರ್ಚಕ ಕೊರೋನಾದಿಂದ ಮೃತ್ಯು
Update: 2020-07-20 21:43 IST
ಅಮರಾವತಿ, ಜು.20: ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಮುಖ್ಯ ಅರ್ಚಕ ಶ್ರೀನಿವಾಸ ದೀಕ್ಷಿತುಲು ಕೊರೋನ ಸೋಂಕಿನಿಂದಾಗಿ ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 73 ವರ್ಷದ ದೀಕ್ಷಿತುಲುರನ್ನು ಗುರುವಾರ ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೀಕ್ಷಿತುಲು ನಿಧನಕ್ಕೆ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ತಿರುಪತಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಮುಂದುವರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನದ ಕನಿಷ್ಟ 140 ಸಿಬಂದಿಗಳಲ್ಲಿ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಸುಬ್ಬಾ ರೆಡ್ಡಿ ಕಳೆದ ವಾರ ಹೇಳಿದ್ದರು. ದೇವಸ್ಥಾನವನ್ನು ಕೆಲ ಸಮಯ ಮುಚ್ಚುವಂತೆ ಟ್ರಸ್ಟ್‌ನ ಸಲಹೆಗಾರ ಎವಿ ರಮಣ ದೀಕ್ಷಿತುಲು ಸಹಿತ ಹಲವರು ಆಗ್ರಹಿಸಿದ್ದಾರೆ.