ಜನಕವಿಯ ಜೀವ ಅಪಾಯದಲ್ಲಿ

Update: 2020-07-21 06:49 GMT

ಅಕಾಡಮಿ ಪ್ರಶಸ್ತಿಗಳಿಗಾಗಿ, ಡಾಕ್ಟರೇಟ್ ಡಿಗ್ರಿಗಳಿಗಾಗಿ, ಎಂಎಲ್‌ಸಿ ಸೀಟಿಗಾಗಿ ತಮ್ಮನ್ನೇ ಮಾರಾಟಕ್ಕಿಟ್ಟುಕೊಳ್ಳುವ ಸಾಹಿತಿಗಳನ್ನು ನೋಡಿದ್ದೇವೆ. ಆದರೆ, ವರವರ ರಾವ್‌ಮಾರಾಟವಾಗುವ ಮನುಷ್ಯನಲ್ಲ. ದೇಶ ಮಾರಾಟ ಮಾಡಲು ಹೊರಟಿರುವ ದಗಾಕೋರರರ ವಿರುದ್ಧ ಸಮರ ಸಾರಿದವರು. ಈ ಸಮರದಲ್ಲಿ ಇವರ ಅಸ್ತ್ರ ಬಂದೂಕಲ್ಲ. ಲೇಖನಿ. ಪ್ರಭುತ್ವ ಹೆದರಿದ್ದು ಈ ಲೇಖನಿಗೆ. ತನಗಾಗದವರೆಲ್ಲ ‘ಅರ್ಬನ್ ನಕ್ಸಲ್’ ಎಂದು ಕರೆದು ಒಳಗೆ ತಳ್ಳಿತು. ಈಗ ಕವಿಯ ಜೀವ ಅಪಾಯದಲ್ಲಿದೆ.


ವರವರ ರಾವ್ ಅವರು ಅವಿಭಜಿತ ಆಂಧ್ರಪ್ರದೇಶದ ಹೆಸರಾಂತ ತೆಲುಗು ಕವಿ. ಜೊತೆಗೆ ತಳ ಸಮುದಾಯಗಳ ಮತ್ತು ಕೆಳಗೆ ಬಿದ್ದವರ ನೋವು ಸಂಕಟಗಳಿಗೆ ಸ್ಪಂದಿಸುತ್ತ ಬಂದ ಹೋರಾಟಗಾರ. ಈ ಜನಪರ ಕಾಳಜಿಯೇ ಅವರ ಪ್ರಾಣಕ್ಕೆ ಅಪಾಯ ತಂದೊಡ್ಡಿದೆ. ಉಳ್ಳವರ ಹಿತರಕ್ಷಣೆ ಮಾಡುವ ಪ್ರಭುತ್ವ ವರವರ ರಾವ್‌ಲೇಖನಿಗೆ ಹೆದರಿ ಅವರಿಂದ ಅಪಾಯವಿದೆ ಎಂದು ಜೈಲಿಗೆ ತಳ್ಳಿ ಎರಡು ವರ್ಷಗಳಾದವು.

ವರವರ ರಾವ್ ಅವಿಭಜಿತ ಆಂಧ್ರಪ್ರದೇಶದ ಹೆಸರಾಂತ ಕವಿ. ತಮಗಾಗಿ ಅವರು ಬರೆಯಲಿಲ್ಲ. ಬರೆದು ಹಣ ಮಾಡಿಕೊಳ್ಳಲಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಕಾಡಮಿಗಳ ಪ್ರಶಸ್ತಿಗಳು ಮನೆ ಬಾಗಿಲಿಗೆ ಬಂದರೂ ಕಣ್ಣೆತ್ತಿ ನೋಡಲಿಲ್ಲ. ಬರೆದದ್ದೆಲ್ಲ ಮತ್ತು ಬದುಕಿದ್ದೆಲ್ಲ ಜನರಿಗಾಗಿ. ಅದೂ ತಳ ಸಮುದಾಯದ ದಮನಿತ ಜನರಿಗಾಗಿ. ಅಂತಲೇ ಆಂಧ್ರ ಮತ್ತು ತೆಲಂಗಾಣದಲ್ಲಿ ಅವರು ಮನೆ ಮಾತಾಗಿದ್ದಾರೆ.

ತೆಲಂಗಾಣದ ವಾರಂಗಲ್ ಜಿಲ್ಲೆಯ ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದಲ್ಲಿ 1940ರಲ್ಲಿ ಜನಿಸಿದ ವರವರ ರಾವ್‌ಸಾಹಿತ್ಯ ಪಯಣ ಆರಂಭವಾಗಿದ್ದು ಚಿಕ್ಕ ವಯಸ್ಸಿನಲ್ಲಿ. 17ನೇ ವಯಸ್ಸಿನಲ್ಲಿ ಪದ್ಯ ಬರೆಯಲಾರಂಭಿಸಿದ ವರವರ ರಾವ್‌ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ತೆಲುಗು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ವಾರಂಗಲ್‌ನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾದರು. ಮಾರ್ಕ್ಸ್‌ವಾದದ ಪ್ರಭಾವದಿಂದ ಜನಕವಿಯಾದರು.

ವರವರ ರಾವ್‌ಅವರಿಗೆ ಮೋದಿ ಸರಕಾರ ಯಾವ ಪರಿ ಚಿತ್ರಹಿಂಸೆ ನೀಡುತ್ತಿದೆ ಅಂದರೆ ಅವರಿಗೆ ಈಗ ಕೋವಿಡ್ ಸೋಂಕು ಅಂಟಿದೆ (ಅಂಟಿಸಲಾಗಿದೆ ಎಂಬುದು ಹೆಚ್ಚು ಸೂಕ್ತ ಪದ). 81ರ ಇಳಿವಯಸ್ಸಿನ ಈ ಕವಿಯ ಜೀವ ಈಗ ಅಪಾಯದಲ್ಲಿದೆ. ಇಂತಹ ಮಹಾಕವಿಯ ಮೇಲೆ ಭೀಮಾ ಕೋರೆಗಾಂವ್ ಹಿಂಸಾಚಾರ ಮತ್ತು ಪ್ರಧಾನಿ ಮೋದಿ ಅವರ ಹತ್ಯೆಯ ಸುಳ್ಳು ಖಟ್ಲೆಗಳನ್ನು ಹಾಕಿ ಜೈಲಿನಲ್ಲಿ ಕೊಳೆ ಹಾಕಲಾಗಿದೆ.

ಉನ್ನತ ವ್ಯಾಸಂಗ ಮಾಡಿ ಹಲವಾರು ಡಿಗ್ರಿಗಳನ್ನು ಸಂಪಾದಿಸಿ ವಾರಂಗಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವಾಗಲೇ ಎಡಪಂಥದತ್ತ ವಾಲಿದ ವರವರ ರಾವ್‌ಜಾತಿ ಮತ ಭೇದವಿಲ್ಲದ ಸಮತಾ ಸಮಾಜ ಕಟ್ಟಲು ತಮ್ಮ ಬದುಕು ಮತ್ತು ಬರಹವನ್ನು ಮೀಸಲಿಟ್ಟರು. ಇಂತಹ ವರವರ ರಾವ್‌ಈಗ ಪ್ರಭುತ್ವದ ಮಹಾ ಶತ್ರು. ಇವರೊಬ್ಬರೇ ಅಲ್ಲ, ಇವರೊಂದಿಗೆ ಚಿಂತಕರ ಮತ್ತು ಲೇಖಕರ ದೊಡ್ಡ ದಂಡೇ ಇದೆ.

ದಲಿತರು, ದಮನಿತರು, ನೊಂದವರು, ವಂಚಿತರು ಮತ್ತು ಕೆಳಗೆ ಬಿದ್ದವರ ಪರವಾಗಿ ಧ್ವನಿಯೆತ್ತಿದ ಯಾರನ್ನೂ ಈ ಸಮಾಜ ಸುಮ್ಮನೆ ಬಿಟ್ಟಿಲ್ಲ. ಅಂಥವರ ಮಾತನ್ನು ಮೌನವಾಗಿಸಲು ಎಂತಹ ಕ್ರೌರ್ಯಕ್ಕೆ ಕೈ ಹಾಕಲೂ ಅದು ಹೇಸುವುದಿಲ್ಲ. ಚರಿತ್ರೆಯ ಪುಟಗಳನ್ನು ತಿರುವುತ್ತ ಹೋದಾಗ ಇಂತಹ ಸಾವಿರಾರು ದಾರುಣ ಚಿತ್ರಗಳು ನಮಗೆ ಗೋಚರಿಸುತ್ತವೆ. ಇದು ಭಾರತ ಮಾತ್ರವಲ್ಲ, ಜಗತ್ತಿನ ಕತೆಯೂ ಹೌದು. ನಮ್ಮ ಪರಿಸರವನ್ನೇ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಇಲ್ಲಿ ಬುದ್ಧ, ಬಸವಣ್ಣ, ಸಂತ ತುಕಾರಾಮ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹೀಗೆ ಅನೇಕರ ಕತೆ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ ಬಸವಣ್ಣನವರ ಅಂತ್ಯ ಹೇಗಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೊಡ್ಡವರ ಸಾವಿನ ಬಗ್ಗೆ ಅಗೌರವದಿಂದ ಮಾತಾಡಬಾರದೆಂದು ಬಸವಣ್ಣ ಕೂಡಲ ಸಂಗಮನಾಥನಲ್ಲಿ ಐಕ್ಯನಾದ ಎಂದು ಹೇಳುತ್ತೇವೆ. ತುಕಾರಾಮನ ಸುತ್ತಮುತ್ತಲೂ ಇಂತಹದ್ದೇ ಕತೆಗಳಿವೆ. ಅದರ ವಿವರ ಈಗ ಬೇಡ. ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಯೋಚಿಸೋಣ.

ಅಕಾಡಮಿ ಪ್ರಶಸ್ತಿಗಳಿಗಾಗಿ, ಡಾಕ್ಟರೇಟ್ ಡಿಗ್ರಿಗಳಿಗಾಗಿ, ಎಂಎಲ್‌ಸಿ ಸೀಟಿಗಾಗಿ ತಮ್ಮನ್ನೇ ಮಾರಾಟಕ್ಕಿಟ್ಟುಕೊಳ್ಳುವ ಸಾಹಿತಿಗಳನ್ನು ನೋಡಿದ್ದೇವೆ. ಆದರೆ, ವರವರ ರಾವ್‌ಮಾರಾಟವಾಗುವ ಮನುಷ್ಯನಲ್ಲ. ದೇಶ ಮಾರಾಟ ಮಾಡಲು ಹೊರಟಿರುವ ದಗಾಕೋರರರ ವಿರುದ್ಧ ಸಮರ ಸಾರಿದವರು. ಈ ಸಮರದಲ್ಲಿ ಇವರ ಅಸ್ತ್ರ ಬಂದೂಕಲ್ಲ.ಲೇಖನಿ. ಪ್ರಭುತ್ವ ಹೆದರಿದ್ದು ಈ ಲೇಖನಿಗೆ. ತನಗಾಗದವರೆಲ್ಲ ‘ಅರ್ಬನ್ ನಕ್ಸಲ್‌‘ ಎಂದು ಕರೆದು ಒಳಗೆ ತಳ್ಳಿತು. ಈಗ ಕವಿಯ ಜೀವ ಅಪಾಯದಲ್ಲಿದೆ.

ಭೀಮಾ ಕೋರೆಗಾಂವ್‌ನ ಎಲ್ಗಾರ್ ಪರಿಷತ್ತಿನ ಪ್ರಕರಣದಲ್ಲಿ 2018ರ ಜೂನ್‌ನಲ್ಲಿ ಬಂಧಿಸಲ್ಪಟ್ಟಿರುವ ವರವರ ರಾವ್ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ನವಿ ಮುಂಬೈನ ತಲೊಜಾ ಜೈಲಿನಲ್ಲಿಡಲಾಗಿದ್ದ ವರವರ ರಾವ್‌ಅವರನ್ನು ಅಸ್ವಸ್ಥರಾದ ಕಾರಣ ಕಳೆದ ವಾರ ಮುಂಬೈನ ಜೆ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅನಾರೋಗ್ಯದ ಸುದ್ದಿ ಅವರ ಮನೆಯವರಿಗೂ ತಿಳಿಸಿರಲಿಲ್ಲ. ಕೊನೆಗೆ ಸುದ್ದಿ ಗೊತ್ತಾಗಿ ವರವರ ರಾವ್‌ಪತ್ನಿ ಹೇಮಲತಾ ಅವರು ಮೂವರು ಪುತ್ರಿಯರೊಂದಿಗೆ ಮುಂಬೈಗೆ ಧಾವಿಸಿ ಬಂದರು. ಅವರನ್ನು ಆಸ್ಪತ್ರೆಯ ವಾರ್ಡ್‌ನಲ್ಲಿ ಭೇಟಿಯಾಗಿ ದಿಗ್ಭ್ರಮೆಗೊಳಗಾದರು. ವರವರ ರಾವ್‌ಪತ್ನಿ ಮತ್ತು ಪುತ್ರಿಯರನ್ನು ಗುರುತು ಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ. ವಾರ್ಡ್‌ನಲ್ಲಿ ಅವರನ್ನು ನೋಡಿಕೊಳ್ಳಲು ದಾದಿಯರಾಗಲಿ ಇತರ ಸಿಬ್ಬಂದಿಯಾಗಲಿ ಇರಲಿಲ್ಲ. ವಾರ್ಡ್‌ನಲ್ಲಿ ಮೂತ್ರ ಹರಿಯುತ್ತಿತ್ತು. ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದರೂ ಅರಣ್ಯ ರೋದನವಾಗಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಬಡವರ ಪರವಾಗಿ, ಸತ್ಯದ ಪರವಾಗಿ ಹೋರಾಡುವವರನ್ನು, ಬರೆಯುವವರನ್ನು ಶತ್ರುಗಳೆಂದು ಪರಿಗಣಿಸಲಾಗುತ್ತಿದೆ. ಇಂತಹವರನ್ನೆಲ್ಲ ಮಾವೋವಾದಿಗಳ ಸಂಪರ್ಕ ಹೊಂದಿದವರೆಂದು ಆರೋಪ ಹೊರಿಸಿ ಸೆರೆಮನೆಗೆ ತಳ್ಳಲಾಗುತ್ತದೆ. ವಿಚಾರಣೆಯಿಲ್ಲದೆ ವರ್ಷಾನುಗಟ್ಟಲೆ ಜೈಲುಗಳಲ್ಲಿ ಕೊಳೆಯಿಸಲಾಗುತ್ತದೆ. ಪುಣೆಯ ಭೀಮಾ ಕೊರೇಗಾಂವ್‌ಹಿಂಸಾಚಾರದ ಪ್ರಕರಣದಲ್ಲಿ ಎರಡು ವರ್ಷಗಳ ಹಿಂದೆ ಬಂಧಿಸಲ್ಪಟ್ಟವರ ಮೇಲೆ ಪ್ರಧಾನಿ ಹತ್ಯೆಯ ಸಂಚಿನ ಆರೋಪವನ್ನು ಹೊರಿಸಲಾಗಿದೆ. ಇವರೆಲ್ಲ ಅಂತಿಂಥವರಲ್ಲ, ಕವಿ ವರವರ ರಾವ್ ಅವರಲ್ಲದೆ ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕ ಲೇಖಕ ಆನಂದ ತೇಲ್ತುಂಬ್ಡೆ, ಪತ್ರಕರ್ತ ಗೌತಮ್ ನವ್ಲಾಖಾ, ಆದಿವಾಸಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿದ್ದ ಹೆಸರಾಂತ ನ್ಯಾಯವಾದಿ ಸುಧಾ ಭಾರದ್ವಾಜ್, ನಾಗಪುರ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಶೋಮಾ ಸೇನ್, ನಾಗಪುರದ ವಕೀಲ ಸುರೇಂದ್ರ ಗಾಡ್ಲಿಂಗ್, ಮರಾಠಿ ದಲಿತ ಲೇಖಕ, ನಟ, ಸುಧೀರ್ ಧವಳೆ, ಭಾರತ ಜನಾಂದೋಲನದ ಮಹೇಶ್ ರಾವುತ್, ಅರುಣ್ ಫೆರೇರಾ, ರೋನಾ ವಿಲ್ಸನ್, ಮಾನವ ಹಕ್ಕು ಹೋರಾಟಗಾರ ಗೊನ್ಸಾಲ್ವಿಸ್ ಮುಂತಾದವರಿದ್ದಾರೆ

ನರೇಂದ್ರ ದಾಭೋಲ್ಕ್ಕರ್, ಗೋವಿಂದ ಪನ್ಸಾರೆ, ಡಾ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್‌ರ ಹತ್ಯೆಗಳು ಕೂಡ ಈ ಫ್ಯಾಶಿಸ್ಟ್ ಅಸಹನೆಗೆ ಒಂದು ಉದಾಹರಣೆಯಾಗಿದೆ. ತುರ್ತು ಪರಿಸ್ಥಿತಿಯಲ್ಲೂ ರಾಜಕೀಯ ವಿರೋಧಿಗಳನ್ನು ಈ ರೀತಿ ನಡೆಸಿಕೊಂಡಿರಲಿಲ್ಲ. ಅವರನ್ನು ರಾಜಕೀಯ ಕೈದಿಗಳನ್ನಾಗಿ ಪರಿಗಣಿಸಿ ಎಲ್ಲ ಸೌಕರ್ಯಗಳನ್ನು ನೀಡಲಾಗಿತ್ತು. ಆದರೆ ಸೇಡಿನ ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ಸರಕಾರ ಸೈದ್ಧಾಂತಿಕ ವಿರೋಧಿಗಳು ಹಾಗೂ ಲೇಖಕ, ಚಿಂತಕರನ್ನು ಸುಳ್ಳು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಿ ಚಿತ್ರಹಿಂಸೆ ನೀಡುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಫ್ಯಾಶಿಸ್ಟ್ ವರ್ತನೆ ಸರಿಯಲ್ಲ, ಜನ ರೊಚ್ಚಿಗೇಳುವ ಮುನ್ನ ಸರಕಾರ ತನ್ನ ಲೋಪವನ್ನು ಸರಿಪಡಿಸಿಕೊಂಡು ಇವರನ್ನೆಲ್ಲ ಬಿಡುಗಡೆ ಮಾಡಲಿ.

 ವರವರ ರಾವ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ನೇರ ನಿಯಂತ್ರಣದಲ್ಲಿರುವ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಅಡ್ಡಗಾಲು ಹಾಕಿದೆ.ಬಂಧಿತರೆಲ್ಲ ಮಾಡಿದ ಅಪರಾಧವಾದರೂ ಏನು? ಇವರೆಲ್ಲ ಕೇಂದ್ರ ಸರಕಾರದ ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸುತ್ತ ಬಂದವರು. ಛತ್ತೀಸ್‌ಗಡ ಮುಂತಾದ ಕಡೆ ನೂರಾರು ವರ್ಷಗಳಿಂದ ಅಲ್ಲೇ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳನ್ನು ಎತ್ತಂಗಡಿ ಮಾಡುವ ಸರಕಾರದ ಧೋರಣೆಯನ್ನು ಪ್ರತಿಭಟಿಸುತ್ತ ಬಂದವರು. ಸೈದ್ಧಾಂತಿಕವಾಗಿ ಸಂಘಪರಿವಾರದ ವಿರೋಧಿಗಳು. ಈ ಕಾರಣಕ್ಕಾಗಿಯೇ ಇವರ ಧ್ವನಿಯನ್ನು ಹತ್ತಿಕ್ಕಲು ಸಂಬಂಧವೇ ಇಲ್ಲದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಇವರನ್ನು ಸಿಲುಕಿಸಲಾಗಿದೆ. ವಾಸ್ತವವಾಗಿ ಅಂದು ದಲಿತರ ಮೇಲೆ ಹಿಂಸೆಗೆ ಪ್ರಚೋದಿಸಿದ ಸಂಭಾಜಿ ಭಿಡೆ ಮತ್ತು ಮಿಲಿಂದ ಎಕಬೋಟೆಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈಗ ಕೊರೋನ ಎಲ್ಲೆಡೆ ವ್ಯಾಪಿಸುತ್ತಿದೆ. ಜೈಲುಗಳಲ್ಲಿ ದಟ್ಟಣೆಯಾಗಬಾರದೆಂದು ಸುಪ್ರೀಂ ಕೋರ್ಟ್ ಕೆಲ ಕೈದಿಗಳ ಬಿಡುಗಡೆ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆದೇಶ ನೀಡಿದೆ. ವರವರ ರಾವ್‌ಅವರನ್ನು ಬಂಧಿಸಿಟ್ಟಿರುವ ನವಿ ಮುಂಬೈ ಜೈಲಿನಲ್ಲಿ 2,134 ಜನರನ್ನು ಬಂಧಿಸಿಡಬಹುದಾಗಿದೆ. ಆದರೆ, ಅಲ್ಲಿ ಮಿತಿಮೀರಿ 2,317 ಮಂದಿ ಕೈದಿಗಳನ್ನು ಒತ್ತೊತ್ತಾಗಿ ತುಂಬಲಾಗಿದೆ. ಇದರ ಪರಿಣಾಮವಾಗಿ ವರವರ ರಾವ್‌ಅವರಿಗೆ ಕೊರೋನ ಸೋಂಕು ಅಂಟಿ ಕೊಂಡಿದೆ. ಅವರ ಜೀವಕ್ಕೆ ಏನಾದರೂ ಆದರೆ, ಯಾರು ಹೊಣೆ?

 ಈ ದೇಶದಲ್ಲಿ 90ರ ದಶಕದ ನಂತರ ಜಾಗತೀಕರಣದ ಜೊತೆ ಫ್ಯಾಶಿಸ್ಟ್ ಕೋಮುವಾದ ಬಲವಾಗಿ ನೆಲೆಯೂ ರಿತು. ಅಸಹನೆ ಇದರ ಹುಟ್ಟುಗುಣ, ಜಾತ್ಯತೀತ ಬಹುತ್ವ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವುದು ಇದರ ಒಳಗುರಿ. ಇದರೊಂದಿಗೆ ಈ ದೇಶದ ಕೋಟ್ಯಂತರ ಜನರಿಗೆ ಸೇರಿದ ಸಂಪತ್ತನ್ನು ದೋಚುತ್ತಿರುವ ಕಾರ್ಪೊರೇಟ್ ಬಂಡವಾಳಶಾಹಿಯೂ ಸೇರಿದೆ. ಇವೆರಡರ ಮೈತ್ರಿ ಸರಕಾರ ದೇಶವನ್ನಾಳುತ್ತಿದೆ. ಇದಕ್ಕೆ ಅಡ್ಡಿಯಾಗಿರುವವರ ಮೇಲೆ ನಾನಾ ವಿಧದ ದಾಳಿಗಳು ನಡೆದಿವೆ. ಒಂದೆಡೆ ಸುಳ್ಳು ಕೇಸು ಹಾಕಿ ಜನಪರ ಹೋರಾಟಗಾರರ ಬಾಯಿ ಮುಚ್ಚಿಸಲು ಹುನ್ನಾರ ನಡೆದಿದೆ. ಇನ್ನೊಂದೆಡೆ ಗೂಂಡಾ ಗುಂಪುಗಳು ಹಾದಿ ಬೀದಿಗಳಲ್ಲಿ ಹಲ್ಲೆಗಳನ್ನು ನಡೆಸಿವೆ. ಕಳೆದ ವರ್ಷ ಜಾರ್ಖಂಡ್‌ನಲ್ಲಿ ಸ್ವಾಮಿ ಅಗ್ನಿವೇಶ್ ಅವರ ಮೇಲೆ ನಡೆದ ದೈಹಿಕ ಹಲ್ಲೆ, ದಿಲ್ಲಿಯಲ್ಲಿ ನ್ಯಾಯಾಲಯದ ಆವರಣದಲ್ಲಿ ಕನ್ಹಯ್ಯಾ ಕುಮಾರ್ ಮೇಲೆ ವಕೀಲರೆಂಬ ಗೂಂಡಾಗಳು ನಡೆಸಿದ ದಾಳಿ, ಸುಪ್ರೀಂ ಕೋರ್ಟ್ ವಕೀಲರಾದ ಪ್ರಶಾಂತ್ ಭೂಷಣ್ ಮೇಲೆ ನಡೆದ ಹಲ್ಲೆ ಇವೆಲ್ಲ ಅಸಹನೆಯ ಸಂಸ್ಕೃತಿಗೆ ಸಾಕ್ಷಿಯಾಗಿವೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News