ವರವರ ರಾವ್ ಸಹಿತ ಎಲ್ಗರ್ ಪರಿಷದ್ ಹೋರಾಟಗಾರರ ಬಿಡುಗಡೆಗೆ 145 ಅಂತರ್ ರಾಷ್ಟ್ರೀಯ ವಿದ್ವಾಂಸರ ಆಗ್ರಹ

Update: 2020-07-20 17:20 GMT

ಹೊಸದಿಲ್ಲಿ, ಜು.20: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ತೆಲುಗು ಕವಿ ವರವರ ರಾವ್ ಸಹಿತ ಎಲ್ಗರ್ ಪರಿಷದ್ ಪ್ರಕರಣದ 11 ಆರೋಪಿಗಳನ್ನು ಜೈಲಿನಿಂದ ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ 145 ಅಂತರ್ ರಾಷ್ಟ್ರೀಯ ವಿದ್ವಾಂಸರ ತಂಡ ಸೋಮವಾರ ಹೇಳಿಕೆ ಬಿಡುಗಡೆಗೊಳಿಸಿದೆ.

 ರಾವ್‌ರನ್ನು 2018ರಿಂದ ಮುಂಬೈಯ ತಲೋಜಾ ಜೈಲಿನಲ್ಲಿ ಬಂಧನದಲ್ಲಿಡಲಾಗಿದ್ದು ಇವರಿಗೆ ಕೊರೋನ ಸೋಂಕು ತಗಲಿರುವುದು ಜುಲೈ 16ರಂದು ದೃಢಪಟ್ಟಿದೆ. ಕವಿ-ಹೋರಾಟಗಾರ ಮತ್ತು ಅಧಿಕಾರದವರಿಗೆ ದೀರ್ಘಾವಧಿಯಿಂದ ಸತ್ಯವನ್ನು ಹೇಳುತ್ತಿರುವ ರಾವ್ ವಿರುದ್ಧ ಇತರ ಹೋರಾಟಗಾರರ ಜೊತೆಗೆ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಆರೋಪವಿದೆ. ಈ ಆರೋಪ ಸುಳ್ಳೆಂದು ಈಗಾಗಲೇ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ ಮತ್ತು ಕಳೆದ ಎರಡು ವರ್ಷಗಳಿಂದ ಸರಕಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಲು ವಿಫಲವಾಗಿದೆ ಎಂದು ಹೇಳಿಕೆಗೆ ಸಹಿ ಹಾಕಿರುವ ವಿದ್ವಾಂಸರು ಹೇಳಿದ್ದಾರೆ.

ಇವರನ್ನು ಸೆರೆಯಲ್ಲಿಟ್ಟಿರುವ ಜೈಲುಗಳಲ್ಲಿ ಅನಾರೋಗ್ಯಕರ ಪರಿಸ್ಥಿತಿಯಿದೆ ಮತ್ತು ಇಲ್ಲಿ ಸೋಂಕು ರೋಗ ಹರಡುವ ಭೀತಿ ಹೆಚ್ಚಿದೆ. ಈಗ 80 ವರ್ಷದವರಾಗಿರುವ ರಾವ್‌ಗೆ ಕೊರೋನ ಸೋಂಕು ದೃಢಪಟ್ಟಿದ್ದು ಇತರ ಹಲವು ರೋಗಗಳಿಂದ ಗಂಭೀರ ಅಸ್ವಸ್ಥರಾಗಿದ್ದಾರೆ. ಅವರ ಆರೋಗ್ಯ ಹದಗೆಡಲು ಜೈಲಿನ ಅಧಿಕಾರಿಗಳೇ ಕಾರಣವಾಗಿದ್ದು, ತಕ್ಷಣ ರಾವ್ ಹಾಗೂ ಇತರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

    ನೊವಾನ್ ಚೊಮ್ಸ್ಕಿ, ಬಾರ್ಬರಾ ಹ್ಯಾರಿಸ್-ವೈಟ್, ಜೋನಾಥನ್ ಸ್ಪೆನ್ಸರ್, ಜೆನ್ಸ್ ಲೆರ್ಚ್, ಇಂದ್ರಜಿತ್ ರಾಯ್, ಡೇವಿಡ್ ಮೋಸ್ಸ್ ಸಹಿತ 145 ವಿದ್ವಾಂಸರು ಹೇಳಿಕೆಗೆ ಸಹಿ ಹಾಕಿದ್ದಾರೆ. 2018ರ ಆಗಸ್ಟ್ 31ರಿಂದ ರಾವ್‌ರನ್ನು ತಲೋಜಾ ಜೈಲಿನಲ್ಲಿ ಬಂಧನದಲ್ಲಿಡಲಾಗಿದ್ದು ಇವರ ವಿರುದ್ಧದ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಇವರ ಆರೋಗ್ಯ ಸ್ಥಿತಿ ನಿರಂತರ ಕ್ಷೀಣಿಸುತ್ತಿರುವುದರಿಂದ ಮತ್ತು ವಿಶೇಷವಾಗಿ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ಸೇವೆ ಒದಗಿಸಬೇಕೆಂದು ಸಾವಿರಾರು ಜನರು ಆಗ್ರಹಿಸಿದ್ದರು. ರಾವ್ ಆರೋಗ್ಯ ಸ್ಥಿತಿಯ ಬಗ್ಗೆ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಶುಕ್ರವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಹಾರಾಷ್ಟ್ರದ ಬಂದಿಖಾನೆ ಮಹಾನಿರ್ದೇಶಕರಿಗೆ ನೋಟಿಸ್ ನೀಡಿತ್ತು. ಈ ಮಧ್ಯೆ, ಆಸ್ಪತ್ರೆಗೆ ದಾಖಲಿಸಿದ್ದ ರಾವ್‌ರನ್ನು ರವಿವಾರ ಮುಂಬೈಯ ಸೈಂಟ್ ಜಾರ್ಜ್ ಆಸ್ಪತ್ರೆಯಿಂದ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಾವ್‌ರೊಂದಿಗೆ ಜೈಲಿನ ಕೋಣೆಯಲ್ಲಿದ್ದ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ ಮತ್ತು ವೆರ್ನಾನ್ ಗೋನ್ಸಾಲ್ವಿಸ್ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜೈಲಿನಲ್ಲಿ ರಾವ್‌ರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಕಾರಣ ತಮಗೂ ಕೊರೋನ ಸೋಂಕು ತಗಲಿರುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ತಮ್ಮ ವಯಸ್ಸು ಹಾಗೂ ಹದಗೆಟ್ಟಿರುವ ಆರೋಗ್ಯದ ಕಾರಣ ಸೋಂಕು ತಗಲುವ ಭೀತಿ ಹೆಚ್ಚಿರುವುದರಿಂದ ತಮ್ಮನ್ನೂ ಕೊರೋಣ ಸೋಂಕು ಪರೀಕ್ಷೆಗೆ ಗುರಿಪಡಿಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News