ಕೋವಿಡ್-19: ದೇಶದಲ್ಲಿ 28 ಸಾವಿರ ದಾಟಿದ ಸಾವಿನ ಸಂಖ್ಯೆ
ಹೊಸದಿಲ್ಲಿ, ಜು21: ದೇಶದಲ್ಲಿ ಸೋಮವಾರ 593 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 28 ಸಾವಿರದ ಗಡಿ ದಾಟಿದೆ. ರವಿವಾರಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ ಮತ್ತು ಹೊಸ ಪ್ರಕರಣಗಳ ಸೇರ್ಪಡೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಸೋಮವಾರ ಒಟ್ಟು 37,009 ಮಂದಿಗೆ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 7 ಲಕ್ಷ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷ ದಾಟಿದೆ.
ಜುಲೈ ಮೊದಲ 20 ದಿನಗಳಲ್ಲಿ 5.7 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಹಿಂದಿನ ಎಲ್ಲ ತಿಂಗಳುಗಳ ಒಟ್ಟು ಪ್ರಕರಣಗಳ ಸಂಖ್ಯೆ 5.8 ಲಕ್ಷ. ಈ ತಿಂಗಳಲ್ಲಿ ಇದುವರೆಗೆ 10,662 ಮಂದಿ ಮೃತಪಟ್ಟಿದ್ದಾರೆ.
ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಜುಲೈಯಲ್ಲಿ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ಕರ್ನಾಟಕದ ಇದುವರೆಗಿನ ಒಟ್ಟು ಪ್ರಕರಣಗಳ ಪೈಕಿ ಶೇಕಡ 76 ಹಾಗೂ ಆಂಧ್ರದ ಒಟ್ಟು ಪ್ರಕರಣಗಳಲ್ಲಿ ಶೇಕಡ 71ರಷ್ಟು ಪ್ರಕರಣಗಳು ಜುಲೈನಲ್ಲೇ ವರದಿಯಾಗಿವೆ. ಉಳಿದಂತೆ ಅಸ್ಸಾಂ (66%), ತೆಲಂಗಾಣ, ಕೇರಳ ಹಾಗೂ ಗೋವಾ (64%), ಬಿಹಾರ (62%), ಒಡಿಶಾ (59%) ಮತ್ತು ಬಂಗಾಳ (59%)ದಲ್ಲಿ ಕೂಡಾ ಜುಲೈನಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿವೆ.
ದೇಶಾದ್ಯಂತ ಒಟ್ಟು ಪ್ರಕರಣಗಳ ಪೈಕಿ ಶೇಕಡ 48ರಷ್ಟು ಪ್ರಕರಣಗಳು ಜುಲೈನಲ್ಲಿ ವರದಿಯಾಗಿವೆ. ದಿಲ್ಲಿ ಮಾತ್ರ ಪ್ರಸಕ್ತ ತಿಂಗಳು ಕೋವಿಡ್-19 ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, ಒಟ್ಟು ಪ್ರಕರಣಗಳ ಪೈಕಿ ಈ ತಿಂಗಳಲ್ಲಿ ಇಲ್ಲಿ ವರದಿಯಾಗಿರುವ ಪ್ರಕರಣಗಳ ಪ್ರಮಾಣ ಶೇಕಡ 29.
ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11,54,068ಕ್ಕೇರಿದ್ದರೆ ಸಾವಿನ ಸಂಖ್ಯೆ 28,054ಕ್ಕೇರಿದೆ.
ಗೋವಾದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಾವಿನ ಸಂಖ್ಯೆಯ ಪೈಕಿ ಶೇಕಡ 86ರಷ್ಟು ಈ ತಿಂಗಳು ಸಂಭವಿಸಿದೆ. ಉಳಿದಂತೆ ಕರ್ನಾಟಕ (82%), ಅಸ್ಸಾಂ (77%), ಆಂಧ್ರ ಪ್ರದೇಶ ಹಾಗೂ ಒಡಿಶಾ (73%)ಗಳಲ್ಲಿ ಕೂಡಾ ಈ ತಿಂಗಳು ಗರಿಷ್ಠ ಸಾವು ವರದಿಯಾಗಿದೆ. ದೇಶಾದ್ಯಂತ ಸಂಭವಿಸಿದ ಒಟ್ಟು ಕೋವಿಡ್-19 ಸಾವಿನ ಪೈಕಿ ಜುಲೈನಲ್ಲಿ ಇದುವರೆಗೆ ಶೇಕಡ 37ರಷ್ಟು ಸಾವು ಸಂಭವಿಸಿದೆ. ಗುಜರಾತ್‌ನಲ್ಲಿ ಕನಿಷ್ಠ ಎಂದರೆ ಒಟ್ಟು ಸಾವಿನ ಸಂಖ್ಯೆಯ ಪೈಕಿ ಶೇಕಡ 14ರಷ್ಟು ಮಾತ್ರ ಜುಲೈನಲ್ಲಿ ಸಂಭವಿಸಿದೆ.