×
Ad

ವಲಸೆ ಕಾರ್ಮಿಕರಿಗೆ ಗರಿಷ್ಠ ಉದ್ಯೋಗ ಸೃಷ್ಟಿಸಿದ ಹೆಗ್ಗಳಿಕೆ ಈ ರಾಜ್ಯದ್ದು

Update: 2020-07-21 09:50 IST
ಸಾಂದರ್ಭಿಕ ಚಿತ್ರ

ಜೈಪುರ, ಜು.21: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿಪ್ಲವಗಳ ನಡುವೆಯೂ ರಾಜಸ್ಥಾನ ಸರ್ಕಾರ ಇಡೀ ದೇಶದಲ್ಲೇ, ಕೋವಿಡ್-19 ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ಕಾರಣದಿಂದ ತವರಿಗೆ ಮರಳಿದ ವಲಸೆ ಕಾರ್ಮಿಕರಿಗಾಗಿ ಗರಿಷ್ಠ ಉದ್ಯೋಗ ಸೃಷ್ಟಿಸಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಘೋಷಿಸಿದ 50 ಸಾವಿರ ಕೋಟಿ ರೂಪಾಯಿ ವೆಚ್ಚದ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ ಯೋಜನೆಯಲ್ಲಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಹಾಗೂ ಒಡಿಶಾ ರಾಜ್ಯಗಳ 116 ಜಿಲ್ಲೆಗಳನ್ನು ಸೇರಿಸಲಾಗಿತ್ತು. ಯೋಜನೆಗೆ ಚಾಲನೆ ನೀಡಲಾದ ಬಿಹಾರ ರಾಜ್ಯದಲ್ಲಿ ಗರಿಷ್ಠ ಹಣ ವೆಚ್ಚವಾಗಿದೆ.

ಮಾರ್ಚ್ 25ರಂದು ಘೋಷಣೆಯಾದ ಉತ್ತರ ಪ್ರದೇಶ ಹೊರತುಪಡಿಸಿದರೆ ಗರಿಷ್ಠ ಸಂಖ್ಯೆಯ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ಸಾಗಿದ್ದು, ಈ ಯೋಜನೆಯಡಿ 2,558 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಗರಿಷ್ಠ ಉದ್ಯೋಗ ಸೃಷ್ಟಿಯಲ್ಲಿ ರಾಜಸ್ಥಾನ ಅಗ್ರಸ್ಥಾನಿಯಾಗಿದ್ದು, ಒಂದು ತಿಂಗಳ ಅವಧಿಯಲ್ಲಿ 4.11 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಸುಮಾರು ಒಂದು ಕೋಟಿ ವಲಸೆ ಕಾರ್ಮಿಕರು ಲಾಕ್‌ಡೌನ್ ಬಳಿಕ ತವರಿಗೆ ಮರಳಿ ಜೀವನಾಧಾರ ಕಳೆದುಕೊಳ್ಳುವ ಆತಂಕ ಎದುರಿಸಿದ ಹಿನ್ನೆಲೆಯಲ್ಲಿ ಈ ಯೋಜನೆ ಘೋಷಿಸಲಾಗಿತ್ತು. ಈ ಯೋಜನೆಯಡಿ ಉದ್ಯೋಗ ಸೃಷ್ಟಿಸಲು, ಕೌಶಲಯುಕ್ತ ವಲಸೆ ಕಾರ್ಮಿಕರನ್ನು ಬಳಸಿಕೊಳ್ಳುವ ನಿರ್ಮಾಣ ಕಾರ್ಯ ಸೇರಿದಂತೆ 25 ವಿವಿಧ ಯೋಜನೆಗಳನ್ನು ಜತೆಗೂಡಿಸಿದ್ದರು.

ಕನಿಷ್ಠ 25 ಸಾವಿರ ಮಂದಿ ವಲಸೆ ಕಾರ್ಮಿಕರು ಆ ಜಿಲ್ಲೆಗೆ ಮರಳಿದ್ದರೆ ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಲು ಆ ಜಿಲ್ಲೆ ಅರ್ಹವಾಗುತ್ತದೆ. ಈ ಯೋಜನೆ ಒಟ್ಟು 11.02 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಆರು ರಾಜ್ಯಗಳಲ್ಲಿ ಸೃಷ್ಟಿಸಿದೆ. ಉಳಿದಂತೆ ಕೌಶಲರಹಿತ ಕಾರ್ಮಿಕರಿಗಾಗಿ ಇರುವ ನರೇಗಾ ಯೋಜನೆಯಡಿ ಆರು ರಾಜ್ಯಗಳು 125 ದಿನಗಳಲ್ಲಿ 9,699.62 ಕೋಟಿ ರೂಪಾಯಿ ವೆಚ್ಚ ಮಾಡಿವೆ. ರಾಜಸ್ಥಾನದಲ್ಲಿ 2,502.67 ಕೋಟಿ ರೂ. ವೆಚ್ಚದಲ್ಲಿ 41.1 ದಶಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ. 24 ಸಾವಿರ ಗ್ರಾಮೀಣ ಗೃಹ ನಿರ್ಮಾಣ ಮತ್ತು 13 ಸಾವಿರ ಫೈಬರ್ ಕೇಬಲ್ ಅಳವಡಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News