ಸಹಕಾರ ಕೋರಿ ಹರ್ಯಾಣ ಪೊಲೀಸರಿಗೆ ಪತ್ರ ಬರೆದ ರಾಜಸ್ಥಾನ ಪೊಲೀಸರು
ಜೈಪುರ, ಜು.21: ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಪಿತೂರಿ ನಡೆಸಿರುವ ಆರೋಪ ಎದುರಿಸುತ್ತಿರುವ ಬಂಡಾಯ ಶಾಸಕರ ವಿಚಾರಣೆ ನಡೆಸಲು ತಮಗೆ ಸಹಕರಿಸುವಂತೆ ಕೋರಿ ರಾಜಸ್ಥಾನ ಪೊಲೀಸರು, ಹರ್ಯಾಣದ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ರಾಜಸ್ಥಾನ ಪೊಲೀಸ್ ಸ್ಪೆಷಲ್ ಗ್ರೂಪ್ (ಎಸ್‍ಒಜಿ)ತಂಡವು ಸಚಿನ್ ಪೈಲಟ್ ಬಣ ಕಳೆದ ಒಂದು ವಾರದಿಂದ ತಂಗಿರುವ ಮನೆಸರ್ ಹಾಗೂ ದಿಲ್ಲಿಯಲ್ಲಿರುವ ಎರಡು ರೆಸಾರ್ಟ್‍ಗಳಿಗೆ ತೆರಳಿತ್ತು. ಆದರೆ, ಬರಿಗೈಯಲ್ಲಿ ವಾಪಸಾಗಿತ್ತು. ಹರ್ಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಪೈಲಟ್ ಬಣಕ್ಕೆ ಸಕ್ರಿಯ ಬೆಂಬಲ ನೀಡುತ್ತಿರುವುದನ್ನು ಕಾಂಗ್ರೆಸ್ ದೃಢಪಡಿಸಿಕೊಂಡಿದೆ.
ಅಮಾನತುಗೊಂಡಿರುವ ಇಬ್ಬರು ಶಾಸಕರಾದ ಭನ್ವರ್ ಲಾಲ್ ಶರ್ಮಾ ಹಾಗೂ ವಿಶ್ವೇಂದ್ರ ಸಿಂಗ್ ಕಾಂಗ್ರೆಸ್ ಶಾಸಕರಿಗೆ ಪಕ್ಷಾಂತರ ಮಾಡಲು ಹಣದ ಆಮಿಷ ಒಡ್ಡಿರುವ ಆರೋಪ ಎದುರಿಸುತ್ತಿದ್ದಾರೆ. ಶರ್ಮಾ ಅವರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಜತೆ ಡೀಲ್ ಕುದುರಿಸುತ್ತಿರುವುದು ಆನ್‍ಲೈನ್‍ನಲ್ಲಿ ವೈರಲ್ ಆಗಿರುವ ಆಡಿಯೊ ಕ್ಲಿಪ್‍ನಲ್ಲಿ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ದೂರಿದೆ.
ರಾಜಸ್ಥಾನ ಪೊಲೀಸರು ಭನ್ವರ್ ಲಾಲ್ ಶರ್ಮಾ ಅವರ ಧ್ವನಿ ಮಾದರಿ ಸಂಗ್ರಹಿಸಲು ಹರ್ಯಾಣಕ್ಕೆ ತೆರಳಿದ್ದರು. ಪೊಲೀಸ್ ತಂಡ ಶುಕ್ರವಾರ ಐಟಿಸಿ ಭಾರತ್ ಹೊಟೇಲ್ ಬಳಿ ತೆರಳಿದಾಗ ಅವರನ್ನು ಹರ್ಯಾಣ ಪೊಲೀಸರು 20 ನಿಮಿಷಗಳ ಕಾಲ ತಡೆದಿದ್ದರು. ಕೊನೆಗೂ ಹೊಟೇಲ್ ಒಳಗೆ ಪ್ರವೇಶಿಸಿದ ರಾಜಸ್ಥಾನ ಪೊಲೀಸರು ಬಂಡಾಯ ಶಾಸಕರ ಪತ್ತೆ ಹಚ್ಚಲು ವಿಫಲರಾಗಿದ್ದಾರೆ.
ರವಿವಾರ ರಾಜಸ್ಥಾನದ ಪೊಲೀಸರು ಬಂಡಾಯ ಶಾಸಕರ ಪತ್ತೆ ಹಚ್ಚಲು ಮತ್ತೊಂದು ಪಂಚತಾರ ಹೊಟೇಲ್‍ಗೆ ತೆರಳಿದ್ದರು. ಆದರೆ ಅಲ್ಲಿ ಅವರಿಗೆ ಹೊಟೇಲ್ ಗೇಟನ್ನು ತೆರೆದಿಲ್ಲ. 20 ನಿಮಿಷಗಳ ಕಾಲ ಕಾದ ಬಳಿಕ ಪೊಲೀಸರು ವಾಪಸಾಗಿದ್ದರು.