ಅಶೋಕ್ ಗೆಹ್ಲೋಟ್ ವಿಶೇಷ ಕರ್ತವ್ಯದ ಅಧಿಕಾರಿಯನ್ನು ಪ್ರಶ್ನಿಸಿದ ಸಿಬಿಐ
ಜೈಪುರ, ಜು.21: ಮೇ ತಿಂಗಳಲ್ಲಿ ಪೊಲೀಸ್ ಅಧಿಕಾರಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಇಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿಶೇಷ ಕರ್ತವ್ಯದ ಅಧಿಕಾರಿಯನ್ನು ಪ್ರಶ್ನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸೋಮವಾರದಂದು ಕಾಂಗ್ರೆಸ್ ಶಾಸಕಿ ಕೃಷ್ಣಾ ಪೂನಿಯಾರನ್ನು ವಿಚಾರಣೆ ನಡೆಸಿತ್ತು.
ಸಚಿನ್ ಪೈಲಟ್ ಬಣ ಬಂಡಾಯ ಎದ್ದ ಪರಿಣಾಮವಾಗಿ ರಾಜಸ್ಥಾನ ಸರಕಾರದಲ್ಲಿ ರಾಜಕೀಯ ಬಿಕ್ಕಟ್ಟಿರುವ ಹೊತ್ತಿನಲ್ಲೇ ಸಿಬಿಐ ವಿಚಾರಣೆ ನಡೆಯುತ್ತಿದೆ.
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯದ ಅಧಿಕಾರಿಯಾಗಿರುವ ದೇವ ರಾಮ ಸೈನಿ ಅವರನ್ನು ಜೈಪುರದಲ್ಲಿರುವ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಪೊಲೀಸ್ ಅಧಿಕಾರಿಯ ಸಾವಿನ ತನಿಖೆಯ ಭಾಗವಾಗಿ ದಿಲ್ಲಿಯ ಸಿಬಿಐ ಘಟಕ ಜೈಪುರದಲ್ಲಿ ಸೈನಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು.
ಪೊಲೀಸ್ ಅಧಿಕಾರಿ ವಿಶುದತ್ತ ವಿಷ್ಣು ಮೇ 23ರಂದು ಚುರು ಜಿಲ್ಲೆಯ ತನ್ನ ಅಧಿಕೃತ ನಿವಾಸದಲ್ಲಿ ಮೃತಪಟ್ಟಿದ್ದರು. ತನ್ನ ಸಹೋದರ ತೀವ್ರ ಒತ್ತಡದಿಂದ ಬಳಲುತ್ತಿದ್ದು, ಸಹೋದರನ ಆತ್ಮಹತ್ಯೆಗೆ ಒತ್ತಡವೇ ಕಾರಣವಾಗಿದೆ ಎಂದು ರಾಜಸ್ಥಾನದ ಪೊಲೀಸರಿಗೆ ದೂರು ನೀಡಿದ್ದರು.