ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವೈದ್ಯ ಜಾವೇದ್ ಅಲಿ ಸೋಂಕಿಗೆ ಬಲಿ
ಹೊಸದಿಲ್ಲಿ: ದಿಲ್ಲಿಯಲ್ಲಿ ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ 42 ವರ್ಷದ ವೈದ್ಯ ಡಾ. ಜಾವೇದ್ ಅಲಿ ಅವರು ಸೋಮವಾರ ಅದೇ ಸೋಂಕಿಗೆ ಬಲಿಯಾಗಿದ್ದಾರೆ. ಅವರು ದಿಲ್ಲಿ ಸರಕಾರದ ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಗುತ್ತಿಗೆ ವೈದ್ಯರಾಗಿ ಮಾರ್ಚ್ ತಿಂಗಳಿನಿಂದ ಕಾರ್ಯಾಚರಿಸುತ್ತಿದ್ದರು.
ಜೂನ್ 24ರಂದು ಅವರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಮೂರು ವಾರಗಳ ಸತತ ಚಿಕಿತ್ಸೆಯ ನಂತರವೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಕಳೆದ ಹತ್ತು ದಿನಗಳಿಂದ ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ನಲ್ಲಿದ್ದರು. ಅವರು ಪತ್ನಿ, ಆರು ವರ್ಷದ ಪುತ್ರ ಹಾಗೂ 12 ವರ್ಷದ ಪುತ್ರಿಯನ್ನು ಅಗಲಿದ್ದಾರೆ.
"ನನ್ನ ಪತಿಯ ಬಗ್ಗೆ ಹೆಮ್ಮೆಯಿದೆ. ಅವರು ಕೊನೆ ತನಕ ಕೆಲಸ ಮಾಡಿದ್ದಾರೆ. ಮಾರ್ಚ್ ನಿಂದ ಒಂದೇ ಒಂದು ದಿನ ರಜೆ ಪಡೆದಿಲ್ಲ, ಈದ್ ದಿನ ಕೂಡ ಕರ್ತವ್ಯ ನಿರ್ವಹಿಸಿದ್ದರು,'' ಎಂದು ಅವರ ಪತ್ನಿ ಹೇಳಿದ್ದಾರೆ.
ಇದೀಗ ಪರಿಹಾರಕ್ಕಾಗಿ ಬೇಡಿಕೆಯಿಟ್ಟಿರುವ ಅವರು ಗುತ್ತಿಗೆ ವೈದ್ಯರು ಹಗಲು ರಾತ್ರಿ ದುಡಿಯುತ್ತಿರುವ ಹೊರತಾಗಿಯೂ ಅವರಿಗೆ ಹೆಚ್ಚಿನ ಸಹಾಯವೇನೂ ದೊರಕುತ್ತಿಲ್ಲ, ಆರಂಭದಲ್ಲಿ ಡಾ. ಜಾವೇದ್ ಅಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಕುಟುಂಬವೇ ರೂ. 6 ಲಕ್ಷದಷ್ಟು ಚಿಕಿತ್ಸಾ ವೆಚ್ಚ ಭರಿಸಿತ್ತು, ಎಂದು ಹೇಳಿದ್ದಾರೆ.
ಈ ಕುರಿತಂತೆ ನ್ಯಾಷನಲ್ ಹೆಲ್ತ್ ಮಿಷನ್ ವೈದ್ಯರ ಕಲ್ಯಾಣ ಸಂಘ ಕೂಡ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಆವರಿಗೆ ಪತ್ರ ಬರೆದಿದೆ.