35 ವರ್ಷಗಳ ಹಿಂದಿನ ಕೊಲೆ ಪ್ರಕರಣ: 11 ಪೊಲೀಸರ ಅಪರಾಧ ಸಾಬೀತು

Update: 2020-07-21 16:31 GMT

ಜೈಪುರ , ಜು.21: ರಾಜಸ್ತಾನದಲ್ಲಿ 1985ರಲ್ಲಿ ರಾಜಕೀಯ ಕೋಲಾಹಲ ಎಬ್ಬಿಸಿ ಮುಖ್ಯಮಂತ್ರಿಯ ರಾಜೀನಾಮೆಗೆ ಕಾರಣವಾಗಿದ್ದ ರಾಜಮನೆತದ ಮುಖ್ಯಸ್ಥ ರಾಜಾ ಮಾನ್ ಸಿಂಗ್ ಕೊಲೆ ಪ್ರಕರಣದಲ್ಲಿ 11 ಪೊಲೀಸರ ಅಪರಾಧ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಘೋಷಿಸಿದೆ.

1985ರ ಫೆಬ್ರವರಿ 21ರಂದು, ರಾಜಸ್ತಾನದ ಭರತಪುರ ರಾಜಮನೆತದ ಮುಖ್ಯಸ್ಥ ರಾಜಾ ಮಾನ್ ಸಿಂಗ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಇದು ರಾಜಸ್ತಾನದಲ್ಲಿ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು ಮತ್ತು ಕಾಂಗ್ರೆಸ್ ಮುಖ್ಯಮಂತ್ರಿ ಶಿವಚರಣ್ ಮಾಥುರ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. 1985ರ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ದೀಗ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಬೃಜೇಂದ್ರ ಸಿಂಗ್ ಕಣಕ್ಕಿಳಿದಿದ್ದರೆ ರಾಜಾ ಮಾನ್‌ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರತಪುರ ರಾಜಮನೆತದ ಧ್ವಜಕ್ಕೆ ಅವಮಾನ ಮಾಡಿದರೆಂಬ ಆಕ್ರೋಶದಲ್ಲಿ ಮಾನ್‌ಸಿಂಗ್ ಮತ್ತವರ ಬೆಂಬಲಿಗರು ಮುಖ್ಯಮಂತ್ರಿ ಮಾಥುರ್ ಮಾತಾಡಬೇಕಿದ್ದ ರ್ಯಾಲಿಗೆಂದು ಸಿದ್ಧಗೊಳಿಸಿದ್ದ ವೇದಿಕೆಯನ್ನು ಮತ್ತು ಮಾಥುರ್ ಅಲ್ಲಿಂದ ತೆರಳಲು ಸಿದ್ಧವಾಗಿಟ್ಟಿದ್ದ ಹೆಲಿಕಾಪ್ಟರ್ ಅನ್ನು ಧ್ವಂಸಗೊಳಿಸಿದ್ದರು. ಮರುದಿನ ರಾಜಾ ಮಾನ್‌ಸಿಂಗ್ ತನ್ನ ಇಬ್ಬರು ಸಹಚರರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಶರಣಾಗಲು ತೆರಳಿದ್ದಾಗ ಪೊಲೀಸ್ ಉಪಅಧೀಕ್ಷಕ ಕಾನ್‌ಸಿಂಗ್ ಭಾಟಿ ನೇತೃತ್ವದಲ್ಲಿ ಪೊಲೀಸರ ತಂಡವೊಂದು ಅವರ ಮೇಲೆ ಗುಂಡು ಹಾರಿಸಿದಾಗ ಮೂವರೂ ಸ್ಥಳದಲ್ಲೇ ಮೃತರಾಗಿದ್ದರು. ಈ ಪ್ರಕರಣ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು ಮತ್ತು 2 ದಿನಗಳ ಬಳಿಕ ಮುಖ್ಯಮಂತ್ರಿ ಮಾಥುರ್ ರಾಜೀನಾಮೆ ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಫೆ.28ರಂದು ಸಿಬಿಐಗೆ ವಹಿಸಲಾಗಿತ್ತು. ಆರಂಭದಲ್ಲಿ ರಾಜಸ್ತಾನದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಬಳಿಕ ಸುಪ್ರೀಂಕೋರ್ಟ್‌ನ ಸೂಚನೆಯಂತೆ ಉತ್ತರಪ್ರದೇಶದ ಮಥುರಾಕ್ಕೆ ವರ್ಗಾಯಿಸಲಾಗಿತ್ತು. 35 ವರ್ಷದ ವಿಚಾರಣೆ ಬಳಿಕ ಇದೀಗ ತೀರ್ಪು ಹೊರಬಿದ್ದಿದ್ದು ಡಿವೈಎಸ್ಪಿ ಕಾನ್‌ಸಿಂಗ್ ಭಟಿ ಸಹಿತ 11 ಪೊಲೀಸರನ್ನು ದೋಷಿಗಳೆಂದು ಗುರುತಿಸಲಾಗಿದೆ.

ಕಾಕತಾಳೀಯವಾಗಿ, ಈಗ ರಾಜಸ್ತಾನದ ಕಾಂಗ್ರೆಸ್ ಸರಕಾರ ಎದುರಿಸುತ್ತಿರುವ ಬಿಕ್ಕಟ್ಟಿಗೂ ಈ ಘಟನೆಗೂ ಸಂಬಂಧವಿದೆ. ಈಗಿನ ಮುಖ್ಯಮಂತ್ರಿ ವಿರುದ್ಧ ಬಂಡೆದ್ದಿರುವ 18 ಶಾಸಕರಲ್ಲಿ ಒಬ್ಬರಾಗಿರುವ ವಿಶ್ವೇಂದ್ರ ಸಿಂಗ್ ರಾಜಾ ಮಾನ್‌ಸಿಂಗ್ ಸೋದರಳಿಯನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News