ಕೇಂದ್ರದ 3 ಆಧ್ಯಾದೇಶ ವಿರೋಧಿಸಿ ಟ್ರ್ಯಾಕ್ಟರ್‌ಗಳೊಂದಿಗೆ ರೈತರ ಪ್ರತಿಭಟನೆ

Update: 2020-07-21 18:01 GMT

ಚಂಡೀಗಢ, ಜು.21: ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೊಳಿಸಿರುವ ಮೂರು ಆಧ್ಯಾದೇಶಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಪಂಜಾಬ್, ಹರ್ಯಾಣ ಮತ್ತು ರಾಜಸ್ತಾನದ ರೈತರು ಮಂಗಳವಾರ ಟ್ರ್ಯಾಕ್ಟರ್ ಸಹಿತ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೃಷಿ ಮಾರುಕಟ್ಟೆಗಳ ಸುಧಾರಣೆಯ ಆಧ್ಯಾದೇಶ, ಅಗತ್ಯ ವಸ್ತುಗಳ ಕಾಯ್ದೆಯನ್ನು ದುರ್ಬಲಗೊಳಿಸಿರುವ ಆಧ್ಯಾದೇಶ ಮತ್ತು ಗುತ್ತಿಗೆ ಕೃಷಿಗೆ ಅವಕಾಶ ನೀಡುವ ಆಧ್ಯಾದೇಶವನ್ನು ಹಿಂಪಡೆಯಬೇಕು ಹಾಗೂ ತೈಲ ಬೆಲೆ ಇಳಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಪಂಜಾಬ್ ಮತ್ತು ಹರ್ಯಾಣದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ರಾಜಸ್ತಾನದ ಶ್ರೀ ಗಂಗಾನಗರ ಜಿಲ್ಲೆಗಳಲ್ಲಿ ರೈತರು ಟ್ರ್ಯಾಕ್ಟರ್ ಸಹಿತ ಬೀದಿಗಿಳಿದು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯ ಮೂಲಕ ತಮ್ಮ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದರು.

ರಸ್ತೆ ಬದಿ ಟ್ರಾಕ್ಟರ್ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದೇವೆ. ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ ಮುಂತಾದ ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದು, ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ರೈತರ ಕಾನೂನುಬದ್ದ ಹಕ್ಕು ಎಂದು ಪರಿಗಣಿಸುವಂತೆಯೂ ಆಗ್ರಹಿಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News