ಆಂಧ್ರಪ್ರದೇಶ: ದಲಿತ ವ್ಯಕ್ತಿಯ ಥಳಿಸಿ ತಲೆಬೋಳಿಸಿದ ಪೊಲೀಸರು

Update: 2020-07-22 17:26 GMT

ಹೈದರಾಬಾದ್, ಜು.22: ಪೊಲೀಸ್ ಠಾಣೆಯಲ್ಲಿ ದಲಿತ ವ್ಯಕ್ತಿಯೊಬ್ಬನನ್ನು ಥಳಿಸಿ ಮೀಸೆ ಮತ್ತು ತಲೆಗೂದಲು ಬೋಳಿಸಿ ಅವಮಾನಗೊಳಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ರಾಜ್ಯದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕನ ಪ್ರಚೋದನೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಠಾಣೆಯೊಳಗೆ ಸೋಮವಾರ ನಡೆದಿರುವ ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ಮತ್ತು ಟೀಕೆ ವ್ಯಕ್ತವಾಗಿದ್ದು ‘ಜಂಗಲ್‌ರಾಜ್‌ನ ಮರುಕಳಿಕೆ’ ಎಂದು ವಿಪಕ್ಷಗಳು ಘಟನೆಯನ್ನು ವಿಶ್ಲೇಷಿಸಿವೆ. ಮೂವರು ಆರೋಪಿ ಪೊಲೀಸರನ್ನು(ಸಬ್‌ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಕಾನ್‌ಸ್ಟೆಬಲ್) ಅಮಾನತುಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆದಿದೆ. ಘಟನೆಯನ್ನು ಖಂಡಿಸಿರುವ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಗೌತಮ್ ಸಾವಂಗ್, ತನಿಖೆಗೆ ಆದೇಶಿಸಿದ್ದಾರೆ.

ಪೊಲೀಸರ ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ವೆದುಲ್ಲಪಲ್ಲಿ ಗ್ರಾಮದ ವರಪ್ರಸಾದ್ ಎಂಬ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರಕ್ಕೆ ಮರಳು ಸಾಗಿಸುವ ಟ್ರಕ್‌ಗಳ ಸಂಚಾರವನ್ನು ವರಪ್ರಸಾದ್ ಮತ್ತವರ ಇಬ್ಬರು ಸಹಾಯಕರು ತಡೆದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ರಾಜಕಾರಣಿಯೊಬ್ಬ ವರಪ್ರಸಾದ್‌ಗೆ ಕಾರು ಡಿಕ್ಕಿ ಹೊಡೆಸಿದ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಶಾಸಕ, ವರಪ್ರಸಾದ್‌ಗೆ ಪಾಠ ಕಲಿಸುವಂತೆ ಪ್ರೊಬೇಷನರಿ ಅವಧಿಯಲ್ಲಿದ್ದ ಪೊಲೀಸ್ ಅಧಿಕಾರಿಗೆ ಸೂಚಿಸಿದರು ಎಂದು ಆರೋಪಿಸಲಾಗಿದೆ.

ಮರುದಿನ ತನ್ನನ್ನು ಠಾಣೆಗೆ ಕರೆದೊಯ್ದ ಪೊಲೀಸರು ಬೆಲ್ಟ್‌ನಿಂದ ಮನಬಂದಂತೆ ಥಳಿಸಿ ಒದ್ದರು. ಬಳಿಕ ಕ್ಷೌರಿಕನೊಬ್ಬನನ್ನು ಠಾಣೆಗೆ ಕರೆಸಿ ಮೀಸೆ ಮತ್ತು ತಲೆಗೂದಲನ್ನು ಬೋಳಿಸಲಾಗಿದೆ. ಬಿಟ್ಟುಬಿಡುವಂತೆ ಗೋಗರೆದರೂ ಕೇಳಲಿಲ್ಲ ಎಂದು ಪ್ರಸಾದ್ ಹೇಳಿರುವುದಾಗಿ ವರದಿಯಾಗಿದೆ.

 ಎಸ್‌ಸಿ/ಎಸ್‌ಟಿ ದೌರ್ಜನ್ಯ(ತಡೆ)ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್‌ಗಳಡಿ ಸಬ್‌ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವಕನನ್ನು ಅಪಮಾನಗೊಳಿಸಿದ ಈ ಘಟನೆಗೆ ವಿಷಾದಿಸುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಐಜಿ(ಎಲ್ಲೂರು) ಕೆವಿ ಮೋಹನ್ ರಾವ್ ಹೇಳಿದ್ದಾರೆ.

ಪ್ರಕರಣವನ್ನು ಖಂಡಿಸಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ‘ಜಂಗಲ್‌ರಾಜ್ ಆಂಧ್ರಪ್ರದೇಶಕ್ಕೆ ಮರಳಿದೆ. ವೈಸಿಆರ್‌ಸಿ ಪಕ್ಷದ ಮುಖಂಡರು ವರಪ್ರಸಾದರ ಮೀಸೆ ಮತ್ತು ತಲೆ ಬೋಳಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲರನ್ನೂ ಬಂಧಿಸಬೇಕು. ನ್ಯಾಯ ಒದಗಿಸಲು ವಿಫಲವಾದರೆ ಅದು ಪ್ರತಿಭಟನೆಗೆ ದಾರಿ ಮಾಡಿಕೊಡುತ್ತದೆ ಎಂದು ಕಾಂಗ್ರೆಸ್ ಮುಖಂಡ ಹರ್ಷ ಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News