ಲಾಕ್‌ಡೌನ್ ಎಂಬ ಕಣ್ಣಾಮುಚ್ಚಾಲೆ ಆಟ ಸಾಕು!

Update: 2020-07-23 04:49 GMT

ಒ ಂದು ವಾರದ ಮಿನಿ ಲಾಕ್‌ಡೌನ್ ಮುಗಿದಿದೆ. ಇದರ ಜೊತೆ ಜೊತೆಗೇ ‘‘ರಾಜ್ಯದಲ್ಲಿ ಇನ್ನು ಮುಂದೆ ಲಾಕ್‌ಡೌನ್ ಇಲ್ಲ’’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ಘೋಷಿಸಿದ್ದಾರೆ. ‘ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ’’ ಎಂದೂ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಬಡತನ, ಅನಕ್ಷರತೆ ತಾಂಡವವಾಡುತ್ತಿರುವ ಭಾರತದಲ್ಲಿ ಲಾಕ್‌ಡೌನ್ ಜಾರಿ ಸೋಂಕು ನಿಯಂತ್ರಣಕ್ಕೆ ಪರಿಹಾರವಲ್ಲ ಎನ್ನುವ ಮುಖ್ಯಮಂತ್ರಿಯವರ ಮಾತಿನಲ್ಲಿ ‘ಜ್ಞಾನೋದಯ’ವಿದೆ. ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಮಾತ್ರವಲ್ಲ, ಪರೋಕ್ಷವಾಗಿ ಸೋಂಕು ಹರಡುವಿಕೆಯನ್ನು ಇದು ಹೆಚ್ಚಿಸುವ ಸಾಧ್ಯತೆಗಳಿವೆ ಎನ್ನುವುದನ್ನು ಈಗಾಗಲೇ ಬೇರೆ ಬೇರೆ ವಲಯಗಳ ತಜ್ಞರು ಬಹಿರಂಗಪಡಿಸಿದ್ದಾರೆ. ಅದು ಆರ್ಥಿಕತೆಯ ಮೇಲೆ ಬೀರುವ ದುಷ್ಪರಿಣಾಮಗಳಿಂದಾಗಿ ಇನ್ನಿತರ ಸಮಸ್ಯೆಗಳು, ರೋಗಗಳು ಇನ್ನಷ್ಟು ಬಿಗಡಾಯಿಸುವ ಅಪಾಯಗಳಿವೆ.

ಕೊರೋನ ಸೋಂಕಿನ ಮೇಲಿರುವ ಅತಿ ದೊಡ್ಡ ಆರೋಪವೆಂದರೆ, ಇದು ಅತಿ ವೇಗವಾಗಿ ಇತರರಿಗೆ ಹರಡುತ್ತದೆ ಎನ್ನುವುದು ಹೊರತು, ಅತಿ ವೇಗವಾಗಿ ರೋಗಿಗಳನ್ನು ಸಾಯಿಸುತ್ತದೆ ಎಂದಲ್ಲ. ರೋಗ ಹರಡಿದಾಕ್ಷಣ ಒಬ್ಬ ಸತ್ತೇ ಹೋಗುತ್ತಾನೆ ಎನ್ನುವ ಆತಂಕ ನಮ್ಮ ನಡುವೆ ಈಗಲೂ ಇಲ್ಲ. ಬದಲಿಗೆ ಆತ ಅದನ್ನು ಇತರರಿಗೆ ಹರಡುತ್ತಾನೆ ಎನ್ನುವುದು ವೈದ್ಯರ ಭಯ. ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿರುವ ಜನರಲ್ಲಿ ಇದು ಹರಡಿದರೆ ಅವರು ಅಪಾಯದಲ್ಲಿ ಸಿಲುಕಿಕೊಳ್ಳಬಹುದೇ ಹೊರತು, ಆರೋಗ್ಯವಂತರಿಗೆ ಈ ಸೋಂಕು ಹರಡಿದರೆ ಅವರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎನ್ನುವುದನ್ನು ಈಗಾಗಲೇ ಹಲವು ನುರಿತ ವೈದ್ಯರು ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಈ ಕಾರಣದಿಂದಲೇ, ಭಾರತದಲ್ಲಿ ಲಕ್ಷಾಂತರ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆಯಾದರೂ, ಅವರೆಲ್ಲರೂ ಯಾವುದೇ ಔಷಧಿಗಳಿಲ್ಲದೆ ಗುಣಮುಖರಾಗಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಈ ದೇಶದ 18 ಕೋಟಿ ಮಂದಿಗೆ ಈ ಕೊರೋನ ಈಗಾಗಲೇ ಬಂದು ಹೋಗಿದೆ. ಅಂದರೆ ಸೋಂಕು ಬಂದವರಿಗೆ ‘ತಮಗೆ ಸೋಂಕು ಇದೆ’ ಎನ್ನುವ ಅರಿವೇ ಇಲ್ಲದಂತೆ ಬಂದು ಹೋಗಿದೆ ಎಂದು ಸಮೀಕ್ಷೆಯೊಂದು ತಿಳಿಸುತ್ತದೆ. ಕೆಲವೊಮ್ಮೆ ಯಾವುದೇ ರೋಗ ಲಕ್ಷಣಗಳಿಲ್ಲದವರಲ್ಲೂ ಈ ಸೋಂಕು ಕಾಣಿಸಿಕೊಳ್ಳಬಹುದು. ಹೀಗೆ ಲಕ್ಷಾಂತರ ಜನರಲ್ಲಿ ಇದು ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ. ಯಾವುದೇ ಔಷಧಿ ಅಥವಾ ಉಪಚಾರಗಳಿಲ್ಲದೆಯೇ ಇದು ಇವರಲ್ಲಿ ಕೆಲ ಕಾಲ ತಂಗಿ ಹೊರಟು ಹೋಗಿದೆ ಎನ್ನುವುದನ್ನು ಥೈರೋಕೇರ್ ಲ್ಯಾಬ್ ಸಮೀಕ್ಷೆ ಹೇಳುತ್ತದೆ.

ಇದೇ ಸಂದರ್ಭದಲ್ಲಿ ಕೆಲವರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಅವರು ಹೊರಗಡೆ ಸಂಚಾರ ಮಾಡದೆ ಮನೆಯಲ್ಲೇ ವಿಶ್ರಾಂತಿ ಪಡೆದು ಗುಣಪಡಿಸಿಕೊಂಡ ಸಹಸ್ರಾರು ಪ್ರಕರಣಗಳು ನಮ್ಮ ಮುಂದಿವೆ. ಜ್ವರ ಇನ್ನಿತರ ರೋಗಲಕ್ಷಣಗಳನ್ನೂ ಯಾವುದೇ ಔಷಧಿಗಳಿಲ್ಲದೆಯೇ ಈ ಸಂದರ್ಭದಲ್ಲಿ ಜನರು ಎದುರಿಸಿರುವುದು ಇನ್ನೊಂದು ಮಹತ್ವದ ಅಂಶ. ಈ ಹಿಂದೆಲ್ಲ ಜ್ವರ, ನೆಗಡಿಯಂತಹ ಕಾಯಿಲೆ ಬಂದಾಗ ಆಸ್ಪತ್ರೆಗೆ ಓಡಾಡುತ್ತಿದ್ದ ಜನರು, ಈ ಬಾರಿ ಕೊರೋನ ಪರೀಕ್ಷೆಯ ಆತಂಕದಿಂದ ಹೆದರಿ ಆಸ್ಪತ್ರೆಗಳ ಮೆಟ್ಟಿಲನ್ನೇ ತುಳಿಯುತ್ತಿಲ್ಲ. ಮನೆಯಲ್ಲಿದ್ದೇ, ಸಣ್ಣ ಪುಟ್ಟ ಔಷಧಿಗಳ ಮೂಲಕ ಈ ಕಾಯಿಲೆಗಳನ್ನು ಜನರು ವಾಸಿ ಮಾಡಿಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ದೇಶದ ಜನರು ತಮ್ಮಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಅಂಶವೂ ಬಹಿರಂಗವಾಗಿದೆ. ಲಾಕ್‌ಡೌನ್ ಜನರಲ್ಲಿ ಆತಂಕ, ಒತ್ತಡಗಳನ್ನು ನಿರ್ಮಾಣ ಮಾಡುವುದನ್ನು ಬಿಟ್ಟರೆ, ಸೋಂಕು ನಿಯಂತ್ರಣಕ್ಕೆ ತನ್ನ ಕೊಡುಗೆಗಳನ್ನು ಕೊಟ್ಟಿರುವುದು ತೀರಾ ಕಡಿಮೆ. ದಿನದ ಕೆಲವು ಗಂಟೆ ಲಾಕ್‌ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಜನಸಾಮಾನ್ಯರು ಒಮ್ಮೆಲೆ ಅಂಗಡಿ ಮುಂಗಟ್ಟುಗಳಿಗೆ ನುಗ್ಗುವ ಸನ್ನಿವೇಶ ನಿರ್ಮಾಣವಾಗುತ್ತದೆ. ಇದು, ಲಾಕ್‌ಡೌನ್‌ನ ಉದ್ದೇಶವನ್ನೇ ಕೆಡಿಸುತ್ತದೆ.

ಇದೇ ಸಂದರ್ಭದಲ್ಲಿ, ಲಾಕ್‌ಡೌನ್ ಜನರ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮ ಕೊರೋನೇತರ ರೋಗಗಳಿಗೆ ಅವರನ್ನು ಬಲಿಯಾಗಿಸುತ್ತಿವೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಒಂದು ಪ್ರಮುಖ ಅಂಶವನ್ನು ನಮ್ಮನ್ನಾಳುವವರು ಗಮನಿಸಬೇಕಾಗಿದೆ. ಕೊರೋನ ಸೋಂಕು ಹರಡುವುದು ಅತಿ ವೇಗ ಎನ್ನುವ ಒಂದು ಅಪಾಯವನ್ನು ಗಂಭೀರವಾಗಿ ತೆಗೆದುಕೊಂಡು ನಾವು ನಮ್ಮ ಇದ್ದ ಬಿದ್ದ ಎಲ್ಲ ವ್ಯವಸ್ಥೆಗಳನ್ನು ಸರ್ವನಾಶ ಮಾಡಿ ಕೂತಿದ್ದೇವೆ. ಆದರೆ ಈ ದೇಶದಲ್ಲಿ ಅತಿ ವೇಗವಾಗಿ ಮನುಷ್ಯನನ್ನು ಕೊಲ್ಲುವ ರೋಗಗಳು ಕೊರೋನಕ್ಕಿಂತಲೂ ಮುಂಚೆಯೇ ಅಸ್ತಿತ್ವದಲ್ಲಿತ್ತು. ಮತ್ತು ಅದು ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡಿವೆ. ಅದರಲ್ಲಿ ಮುಖ್ಯವಾಗಿ ಕ್ಷಯ ರೋಗ ಈ ದೇಶವನ್ನು ಹಂತಹಂತವಾಗಿ ಕಿತ್ತು ತಿನ್ನುತ್ತಿದೆ. ಕ್ಷಯರೋಗದಿಂದ ಸಾಯುವವರು ಮತ್ತು ಆ ರೋಗದಿಂದ ಬಳಲುವವರ ಸಂಖ್ಯೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಕ್ಷಯ ಸಾಂಕ್ರಾಮಿಕವೂ ಹೌದು ಎನ್ನುವ ಅಂಶವನ್ನು ಗಮನಿಸಬೇಕಾಗಿದೆ. ಕೊರೋನ ವೇಗವಾಗಿ ಹರಡಿ ನಿಧಾನಕ್ಕೆ ಇಲ್ಲವಾಗಬಹುದು. ಆದರೆ ಕ್ಷಯ ಈ ದೇಶದಲ್ಲಿ ನಿಧಾನಕ್ಕೆ ಹರಡಿ, ಲಕ್ಷಾಂತರ ಪ್ರಾಣಗಳನ್ನು ತಿಂದು ಹಾಕಿದೆ. ತಿಂದು ಹಾಕುತ್ತಿದೆ. ಇದು ಕೇವಲ ಗ್ರಾಮೀಣ ಪ್ರದೇಶಗಳಿಗಷ್ಟೇ ಅಲ್ಲ, ನಗರ ಪ್ರದೇಶಗಳಲ್ಲೂ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಆದರೆ ಈ ಕ್ಷಯಕ್ಕೆ ಈವರೆಗೆ ಯಾವುದೇ ‘ಲಾಕ್‌ಡೌನ್’ ಘೋಷಿಸಲು ಮುಂದಾಗದ ಸರಕಾರ, ದೇಶಕ್ಕೆ ಬೀಗ ಹಾಕಿ ಕೊರೋನ ಹಬ್ಬದಂತೆ ಬಂದೋಬಸ್ತ್ ಮಾಡಲು ಹೊರಡುವುದೇ ಒಂದು ವ್ಯಂಗ್ಯವಾಗಿದೆ.

 ಕೊರೋನ ತಡೆಯಲು ಸರಕಾರ ವಿಧಿಸಿದ ‘ಲಾಕ್‌ಡೌನ್’ ಉಳಿದೆಲ್ಲ ಮಾರಕ ರೋಗಗಳನ್ನು ಕೆರಳಿಸಿರುವುದನ್ನು ಗಮನಿಸಬೇಕು. ದೇಶಾದ್ಯಂತ ಬಡತನ ತಾರಕಕ್ಕೇರಿದೆ. ಕ್ಷಯದಂತಹ ರೋಗಗಳಿಗೆ ಈಗಾಗಲೇ ವರ್ಷಗಳಿಂದ ಶುಶ್ರೂಷೆ ಮಾಡಿಕೊಳ್ಳುತ್ತಿರುವವರಿಗೆ ಔಷಧಿಗಳು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಈ ರೋಗಕ್ಕೆ ಪೌಷ್ಟಿಕ ಆಹಾರವೇ ಮೊದಲ ಮದ್ದು. ಇಂದು ದೇಶಾದ್ಯಂತ ಒಂದು ಹೊತ್ತಿನ ಊಟಕ್ಕೇ ತತ್ವಾರವಿದೆ. ಇದೇ ಸಂದರ್ಭದಲ್ಲಿ ಮಳೆಗಾಲದ ಹೊತ್ತಿನಲ್ಲಿ ಕಾಣಿಸಿಕೊಳ್ಳುವ ಡೆಂಗಿ, ಮಲೇರಿಯ ಇವೆಲ್ಲವುಗಳನ್ನು ತಡೆಯಲು ಈ ಲಾಕ್‌ಡೌನ್‌ಗೆ ಸಾಧ್ಯವಿದೆಯೆ? ಎಂಬ ಅಂಶದ ಕಡೆಗೆ ಸರಕಾರ ಈವರೆಗೆ ಗಮನ ಹರಿಸಿಲ್ಲ. ಕೊರೋನಕ್ಕೆ ಔಷಧಿಯಿಲ್ಲ ಮತ್ತು ಔಷಧಿಯಿಲ್ಲದೆಯೂ ಇದು ಗುಣವಾಗಬಹುದು. ಆದರೆ ಔಷಧಿಯಿರುವ ಡೆಂಗಿ, ಮಲೇರಿಯ, ಟಿಬಿಯಂತಹ ಕಾಯಿಲೆಯಿಂದ ಬಳಲುತ್ತಿರುವವರು ಔಷಧಿಯೇ ದೊರಕದೆ ಸಾಯುತ್ತಿದ್ದಾರೆ.

ಹೀಗೆ ಸಾಯುವವರಲ್ಲಿ ಕೊರೋನ ಸೋಂಕು ಕಂಡು ಬಂದರೆ ಮಾತ್ರ ಅವರನ್ನು ಮಾಧ್ಯಮಗಳು ಲೆಕ್ಕಕ್ಕೆ ತೆಗೆದುಕೊಳ್ಳುತ್ತವೆ. ಸದ್ಯಕ್ಕೆ ಲಾಕ್‌ಡೌನ್ ಎನ್ನುವ ಕಣ್ಣಾಮುಚ್ಚಾಲೆ ಆಟ ಆಡಿದ್ದು ಸಾಕು. ಇಂದು ಕೊರೋನ ಮಾತ್ರವಲ್ಲ, ಈ ದೇಶವನ್ನು ಕಾಡುವ ಇನ್ನಿತರ ಸಾಂಕ್ರಾಮಿಕ ರೋಗಗಳ ಕಡೆಗೂ ಸರಕಾರ ಗಮನ ಹರಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವೆಂಟಿಲೇಟರ್‌ನಲ್ಲಿರುವ ಈ ನಾಡಿನ ಅರ್ಥವ್ಯವಸ್ಥೆಯನ್ನು ಮೊದಲು ಹೊರಗೆ ತರಬೇಕಾಗಿದೆ. ಅದಕ್ಕೆ ಅಂಟಿಕೊಂಡಿರುವ ವೈರಸ್‌ಗಳನ್ನು ಗುರುತಿಸಿ ಔಷಧಿ ನೀಡುವ ಕೆಲಸ ತುರ್ತಾಗಿ ನಡೆಯಬೇಕು. ಆರ್ಥಿಕತೆ ಚಿಗುರದೆ ಬರೇ ಕೊರೋನ ಸೋಂಕಿನಿಂದ ಪಾರಾಗಿ ಜೀವವನ್ನು ಉಳಿಸಿಕೊಳ್ಳಲು ಈ ನಾಡಿನ ಜನರಿಗೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ಜನರು ಕೊರೋನಾ ಕುರಿತು ಸ್ವಯಂ ಜಾಗೃತರಾಗುವುದೇ ಇರುವ ಒಂದೇ ಒಂದು ಮಾರ್ಗ. ಸರಕಾರ ಲಾಕ್‌ಡೌನ್ ಮಾನಸಿಕತೆಯಿಂದ ಹೊರ ಬಂದು, ಈ ನಾಡಿನ ಆರ್ಥಿಕತೆಯನ್ನು ಸುಧಾರಿಸುವ ಕಡೆಗೆ ಗಮನ ಕೊಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News