ಸಚಿನ್ ಪೈಲಟ್ ಗೆ ಮೊದಲ ಗೆಲುವು: ಹೈಕೋರ್ಟ್ ಆದೇಶ ನೀಡಬಹುದು ಎಂದ ಸುಪ್ರೀಂ ಕೋರ್ಟ್

Update: 2020-07-23 17:20 GMT

ಹೊಸದಿಲ್ಲಿ, ಜು.23: ರಾಜಸ್ತಾನದ ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸುವುದಾಗಿ ವಿಧಾನಸಭೆಯ ಸ್ಪೀಕರ್ ನೀಡಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ಹೈಕೋರ್ಟ್ ಆದೇಶ ನೀಡಬಹುದು ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದ್ದು, ಇದರಿಂದ ಬಂಡಾಯ ಶಾಸಕರ ಬಣಕ್ಕೆ ಗೆಲುವು ಲಭಿಸಿದಂತಾಗಿದೆ.

 ಸ್ಪೀಕರ್ ತಮ್ಮ ಅರ್ಜಿಯಲ್ಲಿ ಮಹತ್ವದ ಪ್ರಶ್ನೆಯನ್ನು ಎತ್ತಿರುವ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆಯ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯದ ಧ್ವನಿಯನ್ನು ಹತ್ತಿಕ್ಕಲಾಗದು. ಅನರ್ಹತೆಗೆ ಅವಕಾಶವಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ನ್ಯಾಯಾಧೀಶರಾದ ಅರುಣ್ ಮಿಶ್ರಾ, ಬಿಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಹೇಳಿದ್ದು, ಭಿನ್ನಾಭಿಪ್ರಾಯ ಸೂಚಿಸಿದ ಶಾಸಕರ ವಿರುದ್ಧ ಅನರ್ಹತೆಯ ಕ್ರಮ ಕೈಗೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿತು ಮತ್ತು ಮುಂದಿನ ವಿಚಾರಣೆಯನ್ನು ಜುಲೈ 27ಕ್ಕೆ ನಿಗದಿಗೊಳಿಸಿದೆ.

ಸಂವಿಧಾನದ 10ನೇ ಕಲಂನಡಿ ತಾನು ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆ ಕೈಗೊಂಡಿದ್ದು, ಇದರಲ್ಲಿ ಮಧ್ಯಪ್ರವೇಶಿಸುವ ಹಕ್ಕು ಹೈಕೋರ್ಟ್‌ಗೆ ಇಲ್ಲ ಎಂದು ಸ್ಪೀಕರ್ ಸಿಪಿ ಜೋಷಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ನೀಡದಂತೆ ತಡೆಹಿಡಿಯಲು ಸಾಧ್ಯವಿಲ್ಲ . ಆದರೆ, ಸ್ಪೀಕರ್ ಸಲ್ಲಿಸಿದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ‌ನಲ್ಲಿ ನಡೆದು ಹೊರಬೀಳುವ ತೀರ್ಪಿಗೆ ಹೈಕೋರ್ಟ್ ನೀಡುವ ತೀರ್ಪು ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಸರ್ವೋಚ್ಛ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್, ಈ ಶಾಸಕರು ಪಕ್ಷದ ಸಭೆಗೆ ಹಾಜರಾಗಿರಲಿಲ್ಲ ಮತ್ತು ತಮ್ಮದೇ ಪಕ್ಷದ ಸರಕಾರವನ್ನು ಅಸ್ಥಿರಗೊಳಿಸುವ ಪಿತೂರಿ ಹೂಡಿದ್ದರು. ಹರ್ಯಾಣದ ಹೋಟೆಲ್‌ನಲ್ಲಿ ಉಳಿದುಕೊಂಡು, ಸರಕಾರ ವಿಶ್ವಾಸಮತ ಯಾಚಿಸಬೇಕು ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ ಎಂದರು. ಅಲ್ಲದೆ ಅರ್ನಹತೆಯ ಪ್ರಕ್ರಿಯೆಗೆ ಅವಕಾಶವಿದೆಯೇ ಎಂಬುದು ಅರ್ಜಿಯ ವಿಷಯವಲ್ಲ. ನಮ್ಮ ದೂರು ಸಂಪೂರ್ಣವಾಗಿ ಸಾಂವಿಧಾನಿಕವಾಗಿದೆ ಮತ್ತು ಸ್ಪೀಕರ್ ನಿರ್ಧಾರ ಕೈಗೊಳ್ಳುವವರೆಗೆ ಯಾವುದೇ ಆದೇಶ ಜಾರಿಗೊಳಿಸಬಾರದು ಎಂದು ಸಿಬಲ್ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News