×
Ad

ಒಬಿಸಿ ಸಮುದಾಯದ ಹಲವರು ಮೀಸಲಾತಿಯಿಂದ ವಂಚಿತರಾಗುವ ಆತಂಕ: ಪ್ರಧಾನಿ, ಅಮಿತ್ ಶಾ ನಡೆಗೆ ಪಕ್ಷದ ಸಂಸದರಿಂದಲೇ ವಿರೋಧ

Update: 2020-07-23 14:38 IST

ಹೊಸದಿಲ್ಲಿ: ಕೆನೆ ಪದರವನ್ನು ಗುರುತಿಸುವ ಉದ್ದೇಶದಿಂದ ‘ಒಟ್ಟು ವಾರ್ಷಿಕ ಆದಾಯ'ವನ್ನು ಲೆಕ್ಕ ಹಾಕಲು ‘ವೇತನ'ವನ್ನೂ ಸೇರಿಸುವ ಕೇಂದ್ರದ ಪ್ರಸ್ತಾವವನ್ನು ವಿರೋಧಿಸುವಂತೆ ಬಿಜೆಪಿಯ ಹಿಂದುಳಿದ ವರ್ಗಗಳಿಗೆ ಸೇರಿದ ಸಂಸದರಿಗೆ ಒಬಿಸಿ ಕಲ್ಯಾಣ ಕುರಿತಾದ ಸಂಸದೀಯ ಸಮಿತಿಯ ಅಧ್ಯಕ್ಷರೂ, ಹಿರಿಯ ಬಿಜೆಪಿ ಸದಸ್ಯರೂ ಆದ ಗಣೇಶ್ ಸಿಂಗ್ ಆಗ್ರಹಿಸಿ ಅಚ್ಚರಿ ಮೂಡಿಸಿದ್ದಾರೆ.

ಕೇಂದ್ರದ ನಿರ್ಧಾರದಂತೆಯೇ ಮುಂದುವರಿದಲ್ಲಿ ಅರ್ಹ ಒಬಿಸಿ ಅಭ್ಯರ್ಥಿಗಳನ್ನು ದೂರ ಸರಿಸಿದಂತಾಗುವುದಲ್ಲದೆ ಮಂಡಲ್ ಕೋಟಾ ಸೀಟುಗಳು ಭರ್ತಿಯಾಗದೆ ಬಾಕಿಯುಳಿಯಬಹುದು ಎಂದು ಅವರು ಎಚ್ಚರಿಸಿದ್ದಾರೆ. ಬಿಜೆಪಿಯ ಒಬಿಸಿ ಸಮುದಾಯಕ್ಕೆ ಸೇರಿದ ಎಲ್ಲಾ 113 ಸಂಸದರಿಗೆ ಅವರು ಪತ್ರ ಬರೆದು ತಮ್ಮ ವಿರೋಧವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ತಿಳಿಸುವಂತೆ ಹೇಳಿದ್ದಾರೆ.

 ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 27ರಷ್ಟು ಮೀಸಲಾತಿಗೆ ಅನರ್ಹ ಎಂದು ಪರಿಗಣಿಸಲಾಗಿರುವ ಒಬಿಸಿ ಕೆನೆ ಪದರವನ್ನು ಗುರುತಿಸುವ ನಿಟ್ಟಿನಲ್ಲಿನ ಮಾನದಂಡಗಳನ್ನು ಪರಿಶೀಲಿಸುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಚಿವ ಸಂಪುಟಕ್ಕೆ ಮನವಿ ಮಾಡಿದೆ. ಕುಟುಂಬದ ಆದಾಯವನ್ನು ಸದ್ಯ ಕೃಷಿ ಆದಾಯ ಮತ್ತು ವೇತನ ಹೊರತುಪಡಿಸಿ ``ಇತರ ಮೂಲಗಳಿಂದ ಆದಾಯ''ದ ಆಧಾರದಲ್ಲಿ ನಿರ್ಧರಿಸಲಾಗುವುದರಿಂದ ಸರಕಾರದ ಹೊಸ ನೀತಿ ಜಾರಿಯಾದಲ್ಲಿ ಹಲವು ಮಂದಿ ಕೆನೆಪದರ ವಿಭಾಗಕ್ಕೆ ಸೇರ್ಪಡೆಯಾಗಿ ಮೀಸಲಾತಿಯಿಂದ ವಂಚಿತರಾಗಬಹುದೆನ್ನುವ ಭಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News