ಅಸ್ಸಾಂ ನೆರೆ: ಒಟ್ಟು 91 ಜನರು ಮೃತ್ಯು, ಕಾಝಿರಂಗಾದಲ್ಲಿ 123 ಪ್ರಾಣಿಗಳು ಬಲಿ

Update: 2020-07-23 13:50 GMT

ಗುವಾಹತಿ, ಜು. 23: ಭೀಕರ ನೆರೆಯಿಂದ ಅಸ್ಸಾಂನ 33 ಜಿಲ್ಲೆಗಳಲ್ಲಿ 25 ಜಿಲ್ಲೆಗಳ ಸುಮಾರು 27 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಕೊಕ್ರಝಾರ್ ಹಾಗೂ ಬೊಂಗಾಯ್‌ಗಾಂವ್‌ನಲ್ಲಿ ನೆರೆ ನೀರಿನಲ್ಲಿ ಇಬ್ಬರು ಮುಳುಗಿ ಮೃತಪಡುವುದರೊಂದಿಗೆ ರಾಜ್ಯದಲ್ಲಿ ನೆರೆಯಿಂದ ಮೃತಪಟ್ಟವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.

ನೆರೆಯಿಂದಾಗಿ ಕಾಝಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ 12 ಖಡ್ಗ ಮೃಗಗಳ ಸಹಿತ 123 ವನ್ಯ ಜೀವಿಗಳು ಸಾವನ್ನಪ್ಪಿವೆ. ಸಾವನ್ನಪ್ಪಿದ ಪ್ರಾಣಿಗಳಲ್ಲಿ 93 ಜಿಂಕೆ, 4 ಕಾಡೆಮ್ಮೆ ಹಾಗೂ ಇತರ ಪ್ರಾಣಿಗಳು ಸೇರಿವೆ. ಕಳೆದ ಕೆಲವು ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯಿಂದ ಬ್ರಹ್ಮಪುತ್ರ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಅದರ ಉಪ ನದಿಗಳಲ್ಲಿ ಕೂಡ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಇದರಿಂದ ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಗಂಭೀರವಾಗಿದೆ. ಗುವಾಹತಿಯಲ್ಲಿ ಬ್ರಹ್ಮಪುತ್ರ ನದಿಯ ನೀರಿನ ಮಟ್ಟ ಅಪಾಯದ ಮಟ್ಟ 49.68 ಮೀಟರ್ ಅನ್ನು ಮೀರಿದೆ. ಅಲ್ಲದೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈ 19ರಿಂದ ಬ್ರಹ್ಮಪುತ್ರ ನದಿಯ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಕೇಂದ್ರ ಜಲ ಆಯೋಗದ ನೌಕರ ಶರತ್ ಚಂದ್ರ ಕಾಲಿಟ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News