ಟ್ರಂಪ್ ಚರ್ಮದ ಬಣ್ಣ ನೋಡಿ ಜನರೊಡನೆ ವ್ಯವಹರಿಸುತ್ತಾರೆ: ಎದುರಾಳಿ ಜೋ ಬೈಡನ್ ವಾಗ್ದಾಳಿ

Update: 2020-07-23 15:04 GMT

ವಾಶಿಂಗ್ಟನ್, ಜು. 23: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಜನಾಂಗೀಯವಾದಿಯಾಗಿದ್ದಾರೆ ಎಂದು ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ಬುಧವಾರ ಹೇಳಿದ್ದಾರೆ.

ಸರ್ವಿಸ್ ಎಂಪ್ಲಾಯೀಸ್ ಇಂಟರ್‌ನ್ಯಾಶನಲ್ ಯೂನಿಯನ್ ಏರ್ಪಡಿಸಿದ ಅಶರೀರ ಟೌನ್‌ಹಾಲ್ ಕಾರ್ಯಕ್ರಮದಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷರು ಈ ಕಟು ಮಾತುಗಳನ್ನು ಆಡಿದರು. ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಏಶ್ಯನ್ನರನ್ನು ದೂರುವುದನ್ನು ಟ್ರಂಪ್ ಮುಂದುವರಿಸುತ್ತಿದ್ದಾರೆ ಎಂಬುದಾಗಿ ಆರೋಗ್ಯ ಕಾರ್ಯಕರ್ತರೊಬ್ಬರು ಕಳವಳ ವ್ಯಕ್ತಪಡಿಸಿದ ಬಳಿಕ ಬೈಡನ್ ಈ ಆರೋಪವನ್ನು ಮಾಡಿದರು.

‘‘ಈ ಕಳವಳ ನನ್ನಲ್ಲೂ ಇದೆ. ಟ್ರಂಪ್ ಪದೇ ಪದೇ ಕೊರೋನ ವೈರಸ್ ಸಾಂಕ್ರಾಮಿಕವನ್ನು ‘ಚೀನಾ ವೈರಸ್’ ಎಂಬುದಾಗಿ ಹೇಳುತ್ತಾರೆ. ಜನರ ಚರ್ಮದ ಬಣ್ಣ, ಅವರು ಯಾವ ದೇಶದಿಂದ ಬಂದವರು, ಅವರ ಮೂಲ ಮುಂತಾದ ವಿಷಯಗಳನ್ನು ಪರಿಗಣಿಸಿ ಜನರೊಂದಿಗೆ ಅವರು ವ್ಯವಹರಿಸುವುದು ಅಸಹ್ಯಕರವಾಗಿದೆ’’ ಎಂದು ಬೈಡನ್ ಅಭಿಪ್ರಾಯಪಟ್ಟರು.

‘‘ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರು ಯಾವತ್ತೂ ಹೀಗೆ ಮಾಡಿಲ್ಲ. ಯಾವುದೇ ರಿಪಬ್ಲಿಕನ್ ಅಧ್ಯಕ್ಷರು ಹೀಗೆ ಮಾಡಿಲ್ಲ. ಯಾವುದೇ ಡೆಮಾಕ್ರಟಿಕ್ ಅಧ್ಯಕ್ಷರು ಹೀಗೆ ಮಾಡಿಲ್ಲ. ನಮ್ಮಲ್ಲಿ ಜನಾಂಗೀಯವಾದಿಗಳಿದ್ದರು. ಅವರು ಹೋಗಿದ್ದಾರೆ. ಅವರು ಅಧ್ಯಕ್ಷರಾಗಿ ಆಯ್ಕೆಗೊಳ್ಳಲು ಯತ್ನಿಸಿದ್ದರು. ಟ್ರಂಪ್ ಆಯ್ಕೆಯಾಗಿರುವ ಮೊದಲ ಜನಾಂಗೀಯವಾದಿ ಅಧ್ಯಕ್ಷರಾಗಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News