ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿಯ ಸೇವೆಗೆ ಅವಕಾಶ

Update: 2020-07-23 17:24 GMT

ಹೊಸದಿಲ್ಲಿ, ಜು.23: ಭಾರತದ ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿಯ ಸೇವೆಗೆ ಅವಕಾಶ ನೀಡುವಂತೆ ಕೇಂದ್ರ ಸರಕಾರ ಆದೇಶಿಸಿದೆ.

ಭಾರತದ ಸೇನಾಪಡೆಯ ಎಲ್ಲಾ 10 ವಿಭಾಗಗಳಲ್ಲಿ , ಜಡ್ಜ್ ಆ್ಯಂಡ್ ಅಡ್ವೊಕೇಟ್ ಜನರಲ್(ಜೆಎಜಿ) ಮತ್ತು ಆರ್ಮಿ ಎಜುಕೇಶನ್ ಕಾರ್ಪ್ಸ್(ಎಇಸಿ)ಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ಡ್(ಅಲ್ಪಾವಧಿ ಸೇವೆಯ)ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿ ಸೇವೆಯ ಅವಕಾಶ ಒದಗಿಸಿರುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಹಿಳಾ ಅಧಿಕಾರಿಗಳನ್ನು ಸಶಕ್ತಗೊಳಿಸಿ ಹೆಚ್ಚಿನ ಜವಾಬ್ದಾರಿಗೆ ಹೆಗಲು ನೀಡಲು ಈ ಆದೇಶ ದಾರಿ ಮಾಡಿಕೊಡಲಿದೆ ಎಂದು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ. ಸಂಬಂಧಿತ ಮಹಿಳಾ ಅಧಿಕಾರಿಗಳು ತಮ್ಮ ಆಯ್ಕೆ ಸೂಚಿಸಿ ಸಂಪೂರ್ಣ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಕೂಡಲೇ ಅವರ ಆಯ್ಕೆ ಮಂಡಳಿಯನ್ನು ನಿಗದಿಗೊಳಿಸಲಾಗುತ್ತದೆ ಎಂದವರು ಹೇಳಿದ್ದಾರೆ.

ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಹಿಳಾ ಅಧಿಕಾರಿಗಳಿಗೂ ಪೂರ್ಣಾವಧಿ ಸೇವೆಗೆ ಅವಕಾಶ ನೀಡಬೇಕೆಂದು ದಿಲ್ಲಿ ಹೈಕೋರ್ಟ್ 2010ರಲ್ಲಿ ನೀಡಿದ್ದ ಆದೇಶವನ್ನು ಗೌರವಿಸಿ ಅನುಷ್ಟಾನಗೊಳಿಸಬೇಕು ಎಂದು ಫೆಬ್ರವರಿ 17ರಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಒಂದು ತಿಂಗಳೊಳಗೆ ತನ್ನ ಆದೇಶವನ್ನು ಜಾರಿಗೊಳಿಸಬೇಕು ಎಂದು ಈ ತಿಂಗಳ ಆರಂಭದಲ್ಲಿ ಮತ್ತೆ ಕೇಂದ್ರಕ್ಕೆ ಸ್ಪಷ್ಟ ಸೂಚನೆ ನೀಡಿತ್ತು.

ಸೇನಾಪಡೆಗಳಲ್ಲಿ ಮಹಿಳೆಯರ ನೇಮಕಾತಿ ವಿಕಾಸದ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದ ಸುಪ್ರೀಂಕೋರ್ಟ್, ಮಹಿಳಾ ಅಧಿಕಾರಿಗಳ ಉದ್ಯೋಗಕ್ಕೆ ಸಂಬಂಧಿಸಿದ ಕೇಂದ್ರದ ನಿರ್ಧಾರಗಳು ವಿಶಿಷ್ಟವಾಗಿವೆ ಎಂದು ಅಭಿಪ್ರಾಯ ಪಟ್ಟಿತ್ತು.

ಕರ್ತವ್ಯವನ್ನು ಮೀರಿದ ಕಾರ್ಯ ನಿರ್ವಹಿಸಲು ಮಹಿಳೆಯರು ಅನರ್ಹರೆಂದು ಬಿಂಬಿಸುವ ಕೇಂದ್ರ ಸರಕಾರದ ಟಿಪ್ಪಣಿಯ ಬಗ್ಗೆ ಆದೇಶದಲ್ಲಿ ಅತೃಪ್ತಿ ಸೂಚಿಸಲಾಗಿದೆ. ಮಹಿಳೆಯರ ಮತ್ತು ಪುರುಷರ ದೈಹಿಕ ಶಕ್ತಿಯ ಕುರಿತ ಕೇಂದ್ರ ಸರಕಾರದ ವಾದ (ಮಾತೃತ್ವ, ಕುಟುಂಬ ಇತ್ಯಾದಿ) ಸಮಾನತೆಯನ್ನು ಉಲ್ಲಂಘಿಸುತ್ತದೆ. ಸೇನೆಯಲ್ಲಿ ಮಹಿಳೆಯರ ಪಾತ್ರ ಹಾಗೂ ಸಾಧನೆಯ ಕುರಿತು ಅಪಶಬ್ದ ಬಳಸಿರುವುದು ಭಾರತೀಯ ಮಹಿಳೆಯರಿಗೆ ಮಾತ್ರವಲ್ಲ, ಭಾರತದ ಸೇನಾಪಡೆಗೇ ಮಾಡಿರುವ ಅವಮಾನವಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News