ಕೋವಿಡ್ ಯೋಧರ ಜೀವ ಅಪಾಯದಲ್ಲಿ

Update: 2020-07-24 05:10 GMT

ಕೊರೋನ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ಉತ್ತರ ಪ್ರದೇಶದ ವೈದ್ಯರೊಬ್ಬರನ್ನು ಈ ವೈರಾಣು ಬಲಿ ತೆಗೆದುಕೊಂಡಿದೆ. ತನ್ನ ಪ್ರಾಣದ ಹಂಗು ತೊರೆದು ಹಗಲೂ ರಾತ್ರಿ ಕಾಯಿಲೆ ಪೀಡಿತರ ಸೇವೆಯಲ್ಲಿ ತೊಡಗಿದ್ದ ರಾಜಸ್ಥಾನ ಮೂಲದ ಡಾ. ಅಝೀಝುದ್ದೀನ್ ಶೇಖ್ ಅವರು ನಲವತ್ತನೇ ವಯಸ್ಸಿನಲ್ಲಿ ಸಾವಿಗೀಡಾಗಿದ್ದಾರೆ.ಇದು ಒಬ್ಬ ಅಝೀಝುದ್ದೀನ್‌ರ ದುರಂತವಲ್ಲ. ದೇಶಾದ್ಯಂತ ಇಂತಹ ನೂರಾರು ಮಂದಿ ವೈದ್ಯರು, ದಾದಿಯರು, ಪೌರ ಕಾರ್ಮಿಕರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯನ್ನು ವೈರಾಣು ರೂಪದಲ್ಲಿ ಸಾವು ಬಲಿ ತೆಗೆದುಕೊಳ್ಳುತ್ತಲೇ ಇದೆ. ಇಂತಹವರು ಅಸುನೀಗಿದಾಗ ಸರಕಾರ ಮತ್ತು ನಾಗರಿಕ ಸಮಾಜ ಒಂದಿಷ್ಟು ಅನುಕಂಪಪೂರಿತ ಸಹಾನುಭೂತಿ ವ್ಯಕ್ತಪಡಿಸಿ ಕೈ ತೊಳೆದುಕೊಳ್ಳುತ್ತದೆ. ಆದರೆ ಇಂತಹ ಸಾವುಗಳು ನಿಲ್ಲುತ್ತಲೇ ಇಲ್ಲ.

ದೇಶದಲ್ಲಿ ಕೋವಿಡ್ ಸೋಂಕಿಗೊಳಗಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವೈಫಲ್ಯ ಎದ್ದು ಕಾಣುತ್ತಿದೆ.ಕೇಂದ್ರ ಸರಕಾರ ರಾಜ್ಯಗಳ ಮೇಲೆ, ರಾಜ್ಯಗಳು ಸ್ಥಳೀಯ ಆಡಳಿತ ಸಂಸ್ಥೆಗಳ ಹೆಗಲಿಗೆ ಹೊಣೆಯನ್ನು ವರ್ಗಾಯಿಸುತ್ತ ಬೇಜವಾಬ್ದಾರಿಯಾಗಿ ವರ್ತಿಸುತ್ತಿವೆ. ಅದರಲ್ಲೂ ಎಲ್ಲ ರಾಜ್ಯಗಳ ನೆರವಿಗೆ ಬರಬೇಕಾದ ಕೇಂದ್ರ ಸರಕಾರ ಕಾಸು ಬಿಚ್ಚಲು ತಯಾರಿಲ್ಲ. ಪ್ರಧಾನಿ ಮೋದಿ ಅವರು ಆಗಾಗ ಟಿ.ವಿ.ಗಳಲ್ಲಿ ಕಾಣಿಸಿಕೊಂಡು, ಇಲ್ಲವೇ ಆಕಾಶವಾಣಿಗಳಲ್ಲಿ ಮಾತನ್ನು ಧಾರಾಳವಾಗಿ ನೀಡಿದಂತೆ ಇನ್ನೇನನ್ನೂ ನೀಡುತ್ತಿಲ್ಲ. ಇನ್ನೊಂದೆಡೆ ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ಯೋಧರೆಂದು ಕರೆಯಲ್ಪಡುವ ವೈದ್ಯರು ಮತ್ತಿತರ ಸಿಬ್ಬಂದಿಗೆ ಕೋವಿಡ್ ಸೋಂಕು ಬೆಂಬತ್ತಿ ಕಾಡುತ್ತಿದೆ. ಪಿಪಿಇ ಕಿಟ್‌ಗಳಂತಹ ವೈಯಕ್ತಿಕ ಸುರಕ್ಷತಾ ಉಪಕರಣಗಳ ಕೊರತೆಯೇ ಸೋಂಕು ಅಂಟಿಕೊಳ್ಳಲು ಕಾರಣ ಎಂದು ಈ ಸಿಬ್ಬಂದಿ ದೂರುತ್ತಲೇ ಇದ್ದಾರೆ. ಇದು ಒಂದು ರಾಜ್ಯದ ಕತೆಯಲ್ಲ, ಕೇರಳ ಮತ್ತು ಸ್ವಲ್ಪಮಟ್ಟಿಗೆ ದಿಲ್ಲಿ ಹೊರತು ಪಡಿಸಿ ಎಲ್ಲ ರಾಜ್ಯಗಳ ವ್ಯಥೆಯಾಗಿದೆ.

ಬೇರೆ ರಾಜ್ಯದ ಮಾತೇಕೆ ನಮ್ಮ ಕರ್ನಾಟಕದ ಪರಿಸ್ಥಿತಿಯನ್ನು ಗಮನಿಸಿದರೆ ಕೋವಿಡ್ ಯೋಧರ ಸುರಕ್ಷತೆ ಬಗ್ಗೆ ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಅಗತ್ಯ ಸಂಖ್ಯೆಯಲ್ಲಿ ವೈಯಕ್ತಿಕ ಸುರಕ್ಷತಾ ಕವಚಗಳಿಲ್ಲದ ಕಾರಣ ಕೆಲ ವೈದ್ಯರು ಮಾತ್ರವಲ್ಲದೆ ಐದು ನೂರಕ್ಕೂ ಹೆಚ್ಚು ಪೊಲೀಸರು ಹಾಗೂ ಮೂವತ್ತಕ್ಕೂ ಹೆಚ್ಚು ಪೌರ ಕಾರ್ಮಿಕರು ಸೋಂಕು ಅಂಟಿಸಿಕೊಳ್ಳಬೇಕಾಗಿ ಬಂದಿದೆ. ದೇಶದಲ್ಲೇ ಕೋವಿಡ್ ತೀವ್ರವಾಗಿ ಹಬ್ಬುತ್ತಿರುವ ಬೆಂಗಳೂರಿನಲ್ಲಿ ಕೋವಿಡ್ ಯೋಧರು ದೊಡ್ಡ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

ವೈದ್ಯಕೀಯ ಸಿಬ್ಬಂದಿ ನಿತ್ಯವೂ ನೇರವಾಗಿ ಕೊರೋನ ಸೋಂಕಿನ ಬಾಧೆಗೊಳಗಾದವರ ಆರೈಕೆಯಲ್ಲಿ ತೊಡಗಿದರೆ, ಪೊಲೀಸರು ನಡು ಬೀದಿಯಲ್ಲಿ ನೂರಾರು ಜನರೊಂದಿಗೆ ವ್ಯವಹರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಯಾರು ಸೋಂಕಿತರು, ಯಾರು ಸೋಂಕಿತರಲ್ಲ ಎಂದು ಪ್ರತ್ಯೇಕಿಸಿ ನೋಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಗರಿಷ್ಠ ಪ್ರಮಾಣದ ಮುಂಜಾಗರೂಕತಾ ಕ್ರಮಕೈಗೊಳ್ಳುವುದು ಅತ್ಯಗತ್ಯವಾಗಿದೆ. ಆದರೆ ಅಂತಹ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಸಂದೇಹ ಉಂಟಾಗುತ್ತಿದೆ. ಬೆಂಗಳೂರಿನ ಎಲ್ಲ ಪೊಲೀಸ್ ಸಿಬ್ಬಂದಿಗೆ ಫೇಸ್ ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಝರ್ ಒದಗಿಸಿರುವುದಾಗಿ ಈ ಹಿಂದೆ ಪೊಲೀಸ್ ಆಯುಕ್ತರು ಹೇಳಿದ್ದರು. ಆದರೆ ಅದೇ ಪೊಲೀಸ್ ಆಯುಕ್ತರು ಇತ್ತೀಚೆಗೆ ಕೆಲವು ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದಾಗ ಅಲ್ಲಿ ಪೊಲೀಸರು ಮಾಸ್ಕ್ ಹೊರತುಪಡಿಸಿ ಯಾವ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಹೊಂದಿರಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇವರಿಗಿಂತ ನಮ್ಮ ಮಹಾನಗರಗಳನ್ನು ನಿತ್ಯ ಸ್ವಚ್ಚವಾಗಿಡುವ ಪೌರ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ.ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪೌರ ಕಾರ್ಮಿಕರಿಗೆ ಬಳಸಿ ಬಿಸಾಡುವ ಅಗ್ಗದ ಮಾಸ್ಕ್ ನೀಡಲಾಗಿದೆ. ಪೌರ ಕಾರ್ಮಿಕರಿಗೆ ಸಾಮಾನ್ಯ ದಿನಗಳಲ್ಲೂ ಗಮ್ ಬೂಟ್, ಕೈ ಕವಚ, ಮಾಸ್ಕ್ ಸೇರಿದಂತೆ ಇತರೆಲ್ಲ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಒದಗಿಸಬೇಕೆಂಬ ನಿಯಮವಿದೆ. ಆದರೆ ಕೊರೋನ ಸೋಂಕು ಹಬ್ಬುತ್ತಿರುವ ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಸುರಕ್ಷತೆಗೆ ನಗರ ಪಾಲಿಕೆಗಳು ಆದ್ಯತೆ ನೀಡಿಲ್ಲವೆಂಬುದು ಕಳವಳಕಾರಿ ಸಂಗತಿಯಾಗಿದೆ. ಅದರಲ್ಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ ಅಕ್ಷಮ್ಯವಾಗಿದೆ.

ಕೋವಿಡ್ ವಿರುದ್ಧ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವವರನ್ನು ಬರೀ ಕೋವಿಡ್ ವಾರಿಯರ್ಸ್ ಎಂದು ಹೊಗಳಿದರೆ ಸಾಲದು. ಅವರ ಸುರಕ್ಷತೆ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಕರ್ನಾಟಕ ಸರಕಾರದ ನಿರ್ಲಕ್ಷ ಎದ್ದು ಕಾಣುತ್ತಿದೆ. ಕೋವಿಡ್ ಎದುರಿಸುವಲ್ಲಿ ಸರಕಾರದಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಕೋವಿಡ್ ನಿಯಂತ್ರಣಕ್ಕಾಗಿ ಏಳು ಮಂದಿ ಸಂಪುಟ ದರ್ಜೆಯ ಸಚಿವರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಒಬ್ಬ ಶಾಸಕರನ್ನು ನಿಯೋಜಿಸಲಾಗಿದೆ. ಜೊತೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೂ ಕೋವಿಡ್‌ಗೆ ಸಂಬಂಧಿಸಿದ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇವರೆಲ್ಲರ ನಡುವೆ ಸಮನ್ವಯದ ಹೊಣೆಯನ್ನು ಮುಖ್ಯಮಂತ್ರಿಗಳು ಹೊತ್ತಿದ್ದಾರೆ. ಆದರೂ ಹೊಂದಾಣಿಕೆಯ ಕೊರತೆಯಿಂದಾಗಿ ಪರಿಸ್ಥಿತಿ ಹದಗೆಡುತ್ತಲೇ ಇದೆ. ಉಳಿದುದೇನೇ ಇರಲಿ, ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಸುರಕ್ಷತೆಯ ಬಗ್ಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇವರನ್ನು ಬರೀ ಯೋಧರೆಂದು ಹೊಗಳಿದರೆ ಸಾಲದು .ಅವರಿಗೆ ತುರ್ತಾಗಿ ಸುರಕ್ಷತಾ ಉಪಕರಣಗಳನ್ನು ಒದಗಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News