ಈ ಕಾರಣಕ್ಕಾಗಿ ಮೋದಿ ಸರಕಾರದೊಂದಿಗೆ ಬಿನ್ನಾಭಿಪ್ರಾಯ ಆರಂಭವಾಯಿತು...

Update: 2020-07-24 15:10 GMT

ಹೊಸದಿಲ್ಲಿ, ಜು. 25: ನೂತನ ದಿವಾಳಿತನದ ನಿಯಮವನ್ನು ದುರ್ಬಲಗೊಳಿಸುವ ನರೇಂದ್ರ ಮೋದಿ ಸರಕಾರದ ನಡೆಯು ಕೇಂದ್ರ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂದು ಆರ್‌ಬಿಐಯ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಶುಕ್ರವಾರ ಹೇಳಿದ್ದಾರೆ.

ತನ್ನ ಹೊಸ ಪುಸ್ತಕ ‘ಓವರ್‌ಡ್ರಾಫ್ಟ್: ಸೇವಿಂಗ್ ದಿ ಇಂಡಿಯನ್ ಸೇವರ್’ನಲ್ಲಿ ಊರ್ಜಿತ್ ಪಟೇಲ್ ಅವರು, ಮೋದಿ ಸರಕಾರದೊಂದಿಗಿನ ತನ್ನ ಭಿನ್ನಾಭಿಪ್ರಾಯ ಹಾಗೂ ತರುವಾಯ ತಾನು ಆರ್‌ಬಿಐಯ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗೆಗಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಮರುಪಾವತಿ ವಿಳಂಬವಾದಾಗ ಬ್ಯಾಂಕ್‌ಗಳು ಸಾಲಗಾರರನ್ನು ತಕ್ಷಣವೇ ಸುಸ್ಥಿದಾರರು ಎಂದು ವರ್ಗೀಕರಿಸಬೇಕು ಎಂದು ಆರ್‌ಬಿಐ 2018 ಮೇಯಲ್ಲಿ ಸುತ್ತೋಲೆ ಹೊರಡಿಸಿತ್ತು. ಈ ನಿಯಮ ಹರಾಜಿನ ಸಂದರ್ಭ ಕಂಪೆನಿಯ ಸಂಸ್ಥಾಪಕರು ತಮ್ಮ ಸಂಸ್ಥೆಗಳನ್ನು ಮರಳಿ ಖರೀದಿಸಲು ಪ್ರಯತ್ನಿಸುವುದನ್ನು ನಿರ್ಬಂಧಿಸುತ್ತಿತ್ತು. ಆದುದರಿಂದ ಈ ನಿಯಮ ಭಿನ್ನಾಭಿಪ್ರಾಯದ ಕೇಂದ್ರ ಬಿಂದುವಾಗಿತ್ತು ಎಂದು ಪಟೇಲ್ ಪುಸ್ತಕದಲ್ಲಿ ಹೇಳಿದ್ದಾರೆ.

ಕೇಂದ್ರ ಸರಕಾರ ಅನಂತರ ಈ ಕಾನೂನಿನ ಬಗ್ಗೆ ಆಸಕ್ತಿ ಕಳೆದುಕೊಂಡಂತೆ ಹಾಗೂ ನಿರ್ಲಕ್ಷಿಸಿದಂತೆ ಕಾಣುತ್ತದೆ. ಅಲ್ಲಿವರೆಗೆ ನಾನು ಮತ್ತು ಕೇಂದ್ರ ಹಣಕಾಸು ಸಚಿವರು ಒಂದೇ ರೀತಿಯಲ್ಲಿ ಚಿಂತಿಸುತ್ತಿದ್ದೆವು. ಚಾರಿತ್ರಿಕ ಕಾನೂನಿನ ದಕ್ಷ ಕಾರ್ಯಾಚರಣೆಯನ್ನು ಹೆಚ್ಚಿಸಲು ಆಗಾಗ ಚರ್ಚೆ ನಡೆಸುತ್ತಿದ್ದೆವು ಎಂದು ಅವರು ಹೇಳಿದ್ದಾರೆ.

ಆರ್‌ಬಿಐಯು ಈ ಸುತ್ತೋಲೆ ಹಿಂದೆ ತೆಗೆದುಕೊಳ್ಳುವಂತೆ ತಿಳಿಸಲಾಗಿತ್ತು. ಸಣ್ಣ ಉದ್ಯಮಿಗಳ ಮೇಲೆ ಈ ಕಾನೂನು ದುಷ್ಪರಿಣಾಮ ಉಂಟು ಮಾಡುತ್ತದೆ ಎಂಬಂತಹ ತಪ್ಪು ಸಲಹೆಯೊಂದಿಗೆ ನಿಯಮವನ್ನು ಅಪಖ್ಯಾತಿಗೊಳಿಸಲು ತಪ್ಪು ಮಾಹಿತಿಯನ್ನು ಕೂಡ ತೇಲಿ ಬಿಡಲಾಯಿತು ಎಂದೂ ಊರ್ಜಿತ್ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News