ಈ ಬಾರಿ ಸರಳ ಸ್ವಾತಂತ್ರ್ಯ ದಿನಾಚರಣೆ: ಮಕ್ಕಳ ಬದಲು ಕೊರೋನ ಯೋಧರಿಗೆ ಆಹ್ವಾನ

Update: 2020-07-24 18:03 GMT

ಹೊಸದಿಲ್ಲಿ, ಜು.24: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷ ದಿಲ್ಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನಡೆಯಲಿದೆ. ಶಾಲಾ ಮಕ್ಕಳು ಈ ಬಾರಿಯ ಸಂಭ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ಆಮಂತ್ರಿತ ಗಣ್ಯವ್ಯಕ್ತಿಗಳ ಸಂಖ್ಯೆಯೂ ಕಡಿಮೆ ಇರಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಕೊರೋನ ಸೇನಾನಿಗಳಾದ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ನೈರ್ಮಲ್ಯ ಕೆಲಸಗಾರರನ್ನು ಸಮಾರಂಭಕ್ಕೆ ಆಹ್ವಾನಿಸುವುದು ಒಳ್ಳೆಯದು ಎಂದು ಕೇಂದ್ರ ಸರಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹಾ ಪತ್ರ ರವಾನಿಸಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಆಮಂತ್ರಿಸುವ ಆಹ್ವಾನಿತರ ಸಂಖ್ಯೆ ಕಡಿಮೆಯಾಗಲಿದೆ . ಇದುವರೆಗೆ ಗೊತ್ತುಪಡಿಸಿದ ಸ್ಥಳದಲ್ಲೇ ಅತಿಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸುತ್ತಿದ್ದರೆ, ಈ ಬಾರಿ 6 ಅಡಿ ಅಂತರದಲ್ಲಿ ಆಸನ ವ್ಯವಸ್ಥೆ ಇರಲಿದೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಎನ್‌ಸಿಸಿ ಕೆಡೆಟ್‌ ಗಳಿಂದ ಕವಾಯತು ಪ್ರದರ್ಶನ ಇರಲಿದೆ. ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗುವುದು ಮತ್ತು ಸಿಬ್ಬಂದಿಗಳಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಯಾನಿಟೈಸ್ ಮಾಡಲು ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ ನಡೆಸಲು ಚಾರಿತ್ರಿಕ ಕೆಂಪುಕೋಟೆಯನ್ನು ಆಗಸ್ಟ್ 1ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚಲಾಗುವುದು ಎಂದವರು ಹೇಳಿದ್ದಾರೆ.

74ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ರಾಷ್ಟ್ರಧ್ವಜ ಅರಳಿಸಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಗೆ ಸಶಸ್ತ್ರ ಪಡೆಯವರು ಮತ್ತು ದಿಲ್ಲಿ ಪೊಲೀಸರಿಂದ ಗೌರವ ಸಲ್ಲಿಕೆ, ರಾಷ್ಟ್ರಧ್ವಜ ಅರಳಿಸುವುದು, ರಾಷ್ಟ್ರಗೀತೆ ನುಡಿಸುವುದು, 21 ಗನ್ ಸಿಡಿಸಿ ವಂದನೆ ಸಲ್ಲಿಸುವುದು, ಪ್ರಧಾನಿಯಿಂದ ಭಾಷಣ, ಭಾಷಣ ಮುಗಿದೊಡನೆ ರಾಷ್ಟ್ರಗೀತೆ, ತ್ರಿವರ್ಣದ ಬಲೂನುಗಳನ್ನು ಹಾರಿಸುವುದು ಇತ್ಯಾದಿ ಕಾರ್ಯಕ್ರಮ ನಡೆಯಲಿದೆ ಎಂದು ಗೃಹ ಇಲಾಖೆಯ ಹೇಳಿಕೆ ತಿಳಿಸಿದೆ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬದಲಾವಣೆಯಿಲ್ಲ ಎಂದು ಗೃಹ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News