ಕರಿಯರ ನಿರ್ವಂಶ ಮಾಡುವುದಕ್ಕಾಗಿ ಸಂತಾನಹರಣ ಕಾರ್ಯಕ್ರಮ: ಅಧ್ಯಯನದಲ್ಲಿ ಆರೋಪ

Update: 2020-07-25 17:37 GMT

ವಾಶಿಂಗ್ಟನ್, ಜು. 25: ಅಮೆರಿಕದ ನಾರ್ತ್ ಕ್ಯಾರಲೈನ್ ರಾಜ್ಯದಲ್ಲಿ 1929ರಿಂದ 1974ರವರೆಗೆ ನಡೆಸಿಕೊಂಡು ಬರಲಾಗಿರುವ ಸಂತಾನಹರಣ ಕಾರ್ಯಕ್ರಮವನ್ನು ಕರಿಯ ವರ್ಣೀಯ ನಾಗರಿಕರ ಸಂತಾನವನ್ನು ನಿರ್ವಂಶ ಮಾಡುವ ವಿಶೇಷ ಉದ್ದೇಶಕ್ಕಾಗಿಯೇ ರೂಪಿಸಲಾಗಿತ್ತು ಹಾಗೂ ಅದು ವಿಶ್ವಸಂಸ್ಥೆಯ ಜನಾಂಗೀಯ ಹತ್ಯೆ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಈ ವಾರ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.

‘‘ದುರ್ಬಲ ಮನಸ್ಸಿನವರು’’ ಹಾಗೂ ಇತರರು ಮಕ್ಕಳನ್ನು ಹೊಂದುವುದನ್ನು ತಡೆಯುವ ‘‘ಸಾರ್ವಜನಿಕ ಹಿತಾಸಕ್ತಿ’’ಗಾಗಿ ರೂಪಿಸಲಾಗಿದೆಯೆನ್ನಲಾದ ಕಾರ್ಯಕ್ರಮದಡಿ ಸುಮಾರು 7,600 ಪುರುಷರು, ಮಹಿಳೆಯರು ಮತ್ತು 10 ವರ್ಷದಷ್ಟು ಚಿಕ್ಕ ಮಕ್ಕಳಿಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಈ ಪೈಕಿ ಹೆಚ್ಚಿನವರನ್ನು ಬಲವಂತಪಡಿಸಲಾಗಿತ್ತು. ಆದರೆ, ಕೆಲವು ಮಹಿಳೆಯರಿಗೆ ಬೇರೆ ಜನನ ನಿಯಂತ್ರಣ ಆಯ್ಕೆಗಳು ಇರಲಿಲ್ಲವಾದುದರಿಂದ ತಮ್ಮನ್ನು ತಾವು ಅನರ್ಹ ತಾಯಂದಿರುವ ಎಂದು ಘೋಷಿಸಿಕೊಳ್ಳುವ ಮೂಲಕ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಬಯಸಿದ್ದರು ಎಂದು ಅಧ್ಯಯನ ತಿಳಿಸಿದೆ.

ಈ ನೂತನ ಅಧ್ಯಯನವು ‘ಅಮೆರಿಕನ್ ರಿವ್ಯೆ ಆಫ್ ಪೊಲಿಟಿಕಲ್ ಎಕಾನಮಿ’ಯಲ್ಲಿ ಪ್ರಕಟಗೊಂಡಿದೆ.

ಅಧ್ಯಯನದಲ್ಲಿ 1958ರಿಂದ 1968ರವರೆಗಿನ ಅವಧಿಯ ಅಂಕಿಅಂಶಗಳನ್ನು ಪರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ರಾಜ್ಯದ 100 ಕೌಂಟಿಗಳಲ್ಲಿ 2,100ಕ್ಕೂ ಅಧಿಕ ಅಧಿಕೃತ ಸಂತಾನಹರಣ ಶಸ್ತ್ರಕ್ರಿಯೆಗಳು ನಡೆದಿವೆ.

ನಿರುದ್ಯೋಗಿ ಕರಿಯರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂತಾನಹರಣ ಶಸ್ತ್ರಕ್ರಿಯೆಗಳ ಸಂಖ್ಯೆಯೂ ಹೆಚ್ಚಿದೆ; ಆದರೆ, ಇದೇ ಪ್ರಮಾಣದಲ್ಲಿ ನಿರುದ್ಯೋಗಿ ಬಿಳಿಯರು ಮತ್ತು ಇತರ ಜನಾಂಗೀಯರ ಸಂತಾನಹರಣ ಶಸ್ತ್ರಕ್ರಿಯೆ ನಡೆದಿಲ್ಲ ಎನ್ನುವುದನ್ನು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News