ಕೊರೋನ ಸೋಂಕು ಪ್ರಕರಣಗಳ ವರದಿ: ಕರ್ನಾಟಕದ ಅತ್ಯುತ್ತಮ ಸಾಧನೆ, ಉ.ಪ್ರದೇಶ, ಬಿಹಾರ ಕಳಪೆ

Update: 2020-07-26 14:25 GMT

ಹೊಸದಿಲ್ಲಿ, ಜು.26: ದೇಶದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೊರೋನ ಸೋಂಕು ಪ್ರಕರಣಗಳ ವರದಿ ಮಾಡುವಲ್ಲಿ ಅಸಮಾನತೆಯಿದೆ. ಕರ್ನಾಟಕದ ಸಾಧನೆ ಉತ್ತಮವಾಗಿದ್ದರೆ ಉತ್ತರಪ್ರದೇಶ ಮತ್ತು ಬಿಹಾರ ಅತ್ಯಂತ ಕಳಪೆ ಸಾಧನೆ ತೋರಿದೆ ಎಂದು ಸ್ಟಾನ್‌ಫೋರ್ಡ್ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದ ವರದಿ ತಿಳಿಸಿದೆ.

ಮೇ 19ರಿಂದ ಜೂನ್ 1ರರೆಗಿನ ಅವಧಿಯಲ್ಲಿ 29 ರಾಜ್ಯಗಳ ಕೋವಿಡ್-19 ಡೇಟಾ ರಿಪೋರ್ಟಿಂಗ್ ಸ್ಕೋರ್(ಸಿಡಿಆರ್‌ಎಸ್)ನ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ಉತ್ತಮ ಸಾಧನೆ ತೋರಿದ ರಾಜ್ಯಗಳಿಗೆ 1 ಸಿಡಿಆರ್‌ಎಸ್ ಅಂಕ, ಕಳಪೆ ಸಾಧನೆ ತೋರಿದ ರಾಜ್ಯಗಳಿಗೆ ಶೂನ್ಯ ಅಂಕ ನೀಡಲಾಗಿದೆ. ಲಭ್ಯತೆ, ಸುಗಮತೆ, ವಿಂಗಡಣೆ ಮತ್ತು ಗೌಪ್ಯತೆ ಈ ಆಧಾರದಲ್ಲಿ ರಾಜ್ಯಗಳಿಗೆ ಶ್ರೇಯಾಂಕ ನೀಡಲಾಗಿದೆ. ಕರ್ನಾಟಕದಲ್ಲಿ ಸಿಡಿಆರ್‌ಎಸ್ 0.61ರಷ್ಟಿದ್ದರೆ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ 0 ಆಗಿದೆ ಎಂದು ವರದಿ ತಿಳಿಸಿದೆ.

ಅತ್ಯುತ್ತಮ ವರದಿ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ (0.61), ಕೇರಳ (0.52), ಒಡಿಶಾ(0.51), ಪುದುಚೇರಿ(0.51) ಮತ್ತು ತಮಿಳುನಾಡು(0.51) ಅಗ್ರಸ್ಥಾನದಲ್ಲಿವೆ. ಉತ್ತರಪ್ರದೇಶ (0.0), ಬಿಹಾರ(0.0) ಮೇಘಾಲಯ(0.13), ಹಿಮಾಚಲ ಪ್ರದೇಶ(0.13), ಅಂಡಮಾನ್ ಮತ್ತು ನಿಕೋಬಾರ್(0.17) ಕಡಿಮೆ ಸಾಧನೆ ತೋರಿದೆ.

ಅಗ್ರ 5 ಸ್ಥಾನ ಪಡೆದ ರಾಜ್ಯಗಳು ಕೊರೋನ ಸೋಂಕಿನ ಸಂಚಲನದ ಕ್ರಮವನ್ನು ಗ್ರಾಫ್‌ನ ಮೂಲಕ ತೋರಿಸಿದ್ದು , ಒಟ್ಟು ದೃಢೀಕೃತ ಪ್ರಕರಣ, ಚೇತರಿಕೆ ಪ್ರಮಾಣ, ಸಾವಿನ ಪ್ರಮಾಣವನ್ನು ಜಿಲ್ಲಾವಾರು ವಿಂಗಡಿಸಿವೆ. ಆದರೆ ಇದರಲ್ಲಿ ಯಾವ ರಾಜ್ಯವೂ ಸಾವಿನ ಮೇಲೆ ಪರಿಣಾಮ ಬೀರುವ ವಯಸ್ಸು, ಲಿಂಗ ಅಥವಾ ಇತರ ರೋಗಗಳ ವಿಂಗಡಣೆಯನ್ನು ಅಂಕಿ ಅಂಶದಲ್ಲಿ ತೋರಿಸಿಲ್ಲ.

ಒಟ್ಟಾರೆಯಾಗಿ, ಭಾರತದಲ್ಲಿ ಕೊರೋನ ಸೋಂಕಿನ ವರದಿ ಪ್ರಮಾಣ ಕೇವಲ 0.26 ಆಗಿದ್ದು, ದೇಶದಾದ್ಯಂತ ಕಳಪೆ ವರದಿ ಪ್ರಕ್ರಿಯೆಯನ್ನು ಇದು ತೋರಿಸುತ್ತಿದೆ. ಮೇ 18ರ ವೇಳೆಗೆ ಒಟ್ಟು ದೃಢೀಕೃತ ಸೋಂಕಿನ ಸಂಖ್ಯೆ 10ಕ್ಕೂ ಕಡಿಮೆ ಇರುವ ರಾಜ್ಯಗಳನ್ನು ಅಧ್ಯಯನಕ್ಕೆ ಪರಿಗಣಿಸಲಾಗಿಲ್ಲ. ಪ್ರತೀ ರಾಜ್ಯದಲ್ಲೂ ಪ್ರಥಮ ಸೋಂಕು ಪ್ರಕರಣವನ್ನು ಅಧ್ಯಯನ ನಡೆಸುವುದಕ್ಕಿಂತ ಕನಿಷ್ಟ ಒಂದು ತಿಂಗಳ ಮೊದಲು ವರದಿ ಮಾಡಲಾಗಿದೆ. ಅಂದರೆ, ಈ ರಾಜ್ಯಗಳಿಗೆ ಅತ್ಯುತ್ತಮ ಗುಣಮಟ್ಟದ ಅಂಕಿ ಅಂಶ ವರದಿ ವ್ಯವಸ್ಥೆ ಮಾಡಲು ಕನಿಷ್ಟ ಒಂದು ತಿಂಗಳ ಅವಧಿ ದೊರಕಿದೆ ಎಂದು ಅಧ್ಯಯನದ ವರದಿ ತಿಳಿಸಿದೆ.

ಆರೋಗ್ಯ ಇಲಾಖೆಯ ಮಾಹಿತಿಯಂತೆ, ಮೇ 18ರ ಸಂದರ್ಭ ಭಾರತದಲ್ಲಿ ದೃಢಪಟ್ಟ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 96,000. ಇದರಲ್ಲಿ 91% ಪ್ರಕರಣ ಸೋಂಕಿತರ ಸಂಖ್ಯೆ ಹೆಚ್ಚಿರುವ ಅಗ್ರ 10 ರಾಜ್ಯಗಳಲ್ಲಿ ದಾಖಲಾಗಿತ್ತು. ಈ 10 ರಾಜ್ಯಗಳ ಪೈಕಿ ತಮಿಳುನಾಡು ಮಾತ್ರ 0.51 ಸಿಡಿಆರ್‌ಎಸ್ ಸ್ಕೋರ್ ಗಳಿಸಿದೆ. ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿರುವ ರಾಜ್ಯಗಳು ಕೂಡಾ ಸೋಂಕಿನ ವರದಿ ಮಾಡುವಲ್ಲಿ ಕಳಪೆ ಸಾಧನೆ ತೋರಿವೆ. ಕೊರೋನ ಸೋಂಕಿನ ಸಮಸ್ಯೆ ತೀವ್ರಗೊಳ್ಳಲು ಇದು ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕಡ್ಡಾಯಗೊಳಿಸಿದ್ದರೂ, 10 ರಾಜ್ಯಗಳು ಸೋಂಕಿತರ ಮಾಹಿತಿ ನೀಡುವಾಗ ವಯಸ್ಸು , ಜಿಲ್ಲೆ ಅಥವಾ ಲಿಂಗದ ಆಧಾರದಲ್ಲಿ ವರ್ಗೀಕರಿಸಿಲ್ಲ. ಜಿಲ್ಲಾವಾರು ವರ್ಗೀಕರಣದಿಂದ, ತಮ್ಮ ನೆರೆಹೊರೆಯ ಪ್ರದೇಶದಲ್ಲಿ ಸೋಂಕಿನ ಸ್ಥಿತಿಗತಿಯ ಬಗ್ಗೆ ಜನತೆಗೆ ಮಾಹಿತಿ ಲಭ್ಯವಾಗಿ ಅವರು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಅಲ್ಲದೆ ವಯಸ್ಸು, ಲಿಂಗ ಮತ್ತು ಕೊರೋನದ ಜತೆಗೆ ಇತರ ರೋಗಗಳ ಮಾಹಿತಿ ನೀಡಿದರೆ ಆಗ ಸೋಂಕಿನ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ.

ಕೇವಲ 10 ರಾಜ್ಯಗಳು ಮಾತ್ರ ಗ್ರಾಫ್‌ನ(ನಕ್ಷೆ) ಮೂಲಕ ಕೊರೋನ ಸೋಂಕಿನ ಪ್ರಚಲನೆಯ ಬಗ್ಗೆ ವಿವರಿಸಿವೆ. ಅಸ್ಸಾಂ ಮತ್ತು ಗುಜರಾತ್‌ಗಳು ಕೇವಲ ಒಟ್ಟು ಸೋಂಕಿನ ಪ್ರಮಾಣವನ್ನು ಮಾತ್ರ ನೀಡಿದ್ದರೆ ಕೇರಳ ಒಟ್ಟು ಸೋಂಕಿನ ಪ್ರಮಾಣ ಹಾಗೂ ಕೊರೋನದ ಪ್ರಚಲನೆಯ ವಿವರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News